ಬರಹಗಾರನಿಗೆ ಅಧ್ಯಯನದ ಬಲವಿಲ್ಲದಿದ್ದರೆ ಗಟ್ಟಿತನ ಬರಲಾರದು: ಶ್ರೀಧರ ಡಿ.ಎಸ್‌.

| Published : Feb 09 2025, 01:30 AM IST

ಬರಹಗಾರನಿಗೆ ಅಧ್ಯಯನದ ಬಲವಿಲ್ಲದಿದ್ದರೆ ಗಟ್ಟಿತನ ಬರಲಾರದು: ಶ್ರೀಧರ ಡಿ.ಎಸ್‌.
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜಿನಲ್ಲಿ ಮೂಲ್ಕಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಇತ್ತೀಚಿನವರೆಗೂ ಕನ್ನಡವು ಕಲಿಕೆಯ ಭಾಷೆಯಾಗಿತ್ತು. ಈಗ ಆಂಗ್ಲ ಭಾಷೆಯು ಇತರ ಎಲ್ಲ ಪ್ರದೇಶದಂತೆ ಇಲ್ಲಿಗೂ ಆವರಿಸಿಕೊಂಡು ಕನ್ನಡವು ಸಮಗ್ರವಾಗಿ ಹಿನ್ನೆಲೆಗೆ ಸರಿಯುತ್ತಿರುವ ವಿಷಾದದ ಸನ್ನಿವೇಶದಲ್ಲಿ ನಾವಿದ್ದೇವೆ ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಧರ ಡಿ.ಎಸ್‌. ಹೇಳಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜಿನಲ್ಲಿ ಆಯೋಜಿಸಲಾದ ಮೂಲ್ಕಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೆ ಪತ್ರಿಕೆಯಲ್ಲಿ ಬರೆಯುವವರು ಲೇಖಕರು ಎಂದು ಗುರುತಿಸಲ್ಪಡುತ್ತಿದ್ದರು. ಈಗ ಜಾಲತಾಣದಲ್ಲಿ ಬರಹಗಾರರು ಬಹುಬೇಗ ಪ್ರಚಾರಕ್ಕೆ ಬರುತ್ತಿದ್ದಾರೆ. ಬರಹಗಾರನಿಗೆ ಅಧ್ಯಯನದ ಬಲವಿಲ್ಲದಿದ್ದರೆ ಗಟ್ಟಿತನ ಬರಲಾರದು. ಬಹುಪಾಲು ಬರಹಗಳೆಲ್ಲ ಅವಸರದ ಚೊಳ್ಳುಗಳಾಗಲು ಕಾರಣ ಭಾಷೆಯ ಅಧ್ಯಯನದ ಕೊರತೆ, ಓದಿನ ಕೊರತೆ. ಪ್ರಖರ ಚಿಂತನೆ, ತಪ್ಪಾಗಿಲ್ಲದ ಬರಹ, ಮಹತ್ವಪೂರ್ಣ ವಿಚಾರ, ಸದಾ ಬೇಡಿಕೆಯ ಕೃತಿಗಳ ನಿರ್ಮಾಣಕ್ಕೆ ಅಗತ್ಯವಾಗಿಬೇಕು. ಬರೆದ ಕೃತಿಗೆ ಓದುಗರಿಲ್ಲ ಎಂದರೆ ಸಾಲದು, ಬರೆದದ್ದು ಓದಿಸಿಕೊಂಡು ಹೋಗುತ್ತದೆಯೋ ಎಂಬುದೂ ಮುಖ್ಯ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ನಾಡಿನ ಸಾಹಿತಿಗಳು ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಕನ್ನಡಕ್ಕೆ ಮಾನ್ಯತೆ ಸಿಕ್ಕಿದ ಹಾಗೇ ತುಳುವಿಗೂ ಮಾನ್ಯತೆ ಸಿಗಬೇಕು. ಕನ್ನಡದ ಜೊತೆಗೆ ತುಳು ಉತ್ಸವಗಳು ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ, ಕಥೆಗಾರ ಅಬ್ದುಲ್ ರಶೀದ್ ಸಮ್ಮೇಳನಕ್ಕೆ ನುಡಿಸೇಸೆಗೈದರು. ವಸ್ತು ಪ್ರದರ್ಶನವನ್ನು ಐಕಳ ಪೊಂಪೈ ಕಾಲೇಜಿನ ಸಂಚಾಲಕ ಓಸ್ವಾಲ್ಡ್‌ ಮೊಂತೆರೋ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಗಣೇಶ್ ಅಮೀನ್ ಸಂಕಮಾ‌ರ್, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಕೆ.ಪಿ.ಸುಚರಿತ ಶೆಟ್ಟಿ, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾ‌ರ್, ಅಬ್ದುಲ್ ರಶೀದ್‌, ಮೂಲ್ಕಿ ಹೋಬಳಿ ಕಸಾಪದ ಅಧ್ಯಕ್ಷ ಜೊಸ್ಸಿ ಪಿಂಟೋ, ಪೊಂಪೈ ಕಾಲೇಜು ಪ್ರಾಂಶುಪಾಲ ಪುರುಷೋತ್ತಮ್‌ , ಹೆರಿಕ್ ಪಾಯಸ್, ಮಾಧವ ಎಂ.ಕೆ., ಸನತ್ ಕುಮಾರ್ ಜೈನ್, ಉಳ್ಳಾಲ ಡಾ.ಧನಂಜಯ ಕುಂಬ್ಳೆ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನ ಸಮಿತಿಯ ಅಧ್ಯಕ್ಷ ಪೃಥ್ವಿರಾಜ್ ಆಚಾರ್ಯ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹಿಲ್ಲಾ ಡಿಸೋಜ ವಂದಿಸಿದರು. ಶರತ್ ಶೆಟ್ಟಿ ಕಿನ್ನಿಗೋಳಿ, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ನಿರೂಪಿಸಿದರು. ಸಮ್ಮೇಳನಕ್ಕೆ ಬಂದ ಎಲ್ಲರಿಗೂ ಪುಸ್ತಕವನ್ನು ನೀಡಲಾಯಿತು.

ಚಿತ್ರ:8 ಉದ್ಘಾಟನಎ

...................-------

ಭುವನೇಶ್ವರಿ ಮೆರವಣಿಗೆಸಭಾ ಕಾರ್ಯಕ್ರಮದ ಮೊದಲು ಮೂರುಕಾವೇರಿಯಿಂದ ಪೊಂಪೈ ಕಾಲೇಜಿನ ವರೆಗೆ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಿತು. ಉದ್ಯಮಿ ಶ್ರೀನಿವಾಸ ಆಚಾರ್ಯ ಚಾಲನೆ ನೀಡಿದರು. ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಧ್ವಜಾರೋಹಣಗೈದರು. ಪರಿಷತ್‌ ಧ್ವಜವನ್ನು ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಕನ್ನಡ ಧ್ವಜವನ್ನು ತಾಲೂಕು ಪರಿಷತ್‌ ಅಧ್ಯಕ್ಷ ಮಿಥುನ್‌ ಕೊಡೆತ್ತೂರು ಅರಳಿಸಿದರು.

---------------------

ಗಮನ ಸೆಳೆದ ಮಳಿಗೆಗಳು

ಸಮ್ಮೇಳನದ ಅಂಗಣದಲ್ಲಿ ತುಳುನಾಡಿನ ಸ್ತಬ್ಧ ಚಿತ್ರಗಳ ಸೆಲ್ಫಿ ಕಾರ್ನರ್, ಅಚ್ಚುಕಟ್ಟಾದ ವಾತಾವರಣ, ತಾಲೂಕಿನ ಎಲ್ಲ ಪ್ರಾಥಮಿಕ ಶಾಲೆ ಮಕ್ಕಳ ಭಾಗವಹಿಸುವಿಕೆ, ಪುಸ್ತಕ ಮಳಿಗೆ, ಚಿತ್ರಕಲಾ ಪ್ರದರ್ಶನ, ತೆಂಗಿನ ಗೆರೆಟೆಯ ಕಲಾ ಕೌಶಲ್ಯ, ವಿವಿಧ ದೇಶದ ಸ್ಟಾಂಪ್‌ಗಳು, ನಾಣ್ಯಗಳು, ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳು, ಅಲಂಕಾರಿಕ ವಸ್ತುಗಳು, ದಿನಬಳಕೆಯ ಹಾಗೂ ಕೃಷಿ ಸಂಬಂಧಿತ ಗಿಡಗಳು ಗಮನ ಸೆಳೆಯಿತು.

----------------

ಗ್ರಂಥಪಾಲಕರಿಗೆ ಸನ್ಮಾನಹೊತ್ತಗೆಯ ಹೊತ್ತು ಪುಸ್ತಕದ ಮನೆಯ ಕಷ್ಟ ಸುಖ ಎಂಬ ವಿಚಾರಗೋಷ್ಠಿಯಲ್ಲಿ ಮೂಲ್ಕಿ ತಾಲೂಕಿನ ಬಳ್ಕುಂಜೆ, ಐಕಳ, ಮೆನ್ನಬೆಟ್ಟು, ಕೆಮ್ರಾಲ್, ಹಳೆಯಂಗಡಿ, ಕಿಲ್ಪಾಡಿ, ಎಕ್ಕಾರು, ಮೂಲ್ಕಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಗ್ರಂಥಪಾಲಕರನ್ನು ಡಾ.ಪ್ರಕಾಶ್ ಕಾಮತ್ ಏಳಿಂಜೆ, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಜೊಕಿಂ ಫೆರ್ನಾಂಡಿಸ್‌ ಸನ್ಮಾನಿಸಿದರು. ನಿರಂತರವಾಗಿ ಪುಸ್ತಕಗಳನ್ನು ಓದುವ ಸುಮಾರು 50 ಮಂದಿಯನ್ನು ಗೌರವಿಸಲಾಯಿತು. ಶ್ರೀಶ ಸರಾಫ್ ಐಕಳ ನಿರೂಪಿಸಿದರು.

ಯಕ್ಷಗಾನ ವೈಭವ ಗೋಷ್ಠಿಯಲ್ಲಿ ಕಲಾವಿದ ದೇವಿಪ್ರಕಾಶ್ ರಾವ್ ಕಟೀಲು ವಿಷಯ ಮಂಡಿಸಿದರು. ಪ್ರಕಾಶ್ ಸುವರ್ಣ ಮೂಲ್ಕಿ, ಐಕಳ ಜಯಪಾಲ ಶೆಟ್ಟಿ, ಸುನಿಲ್ ಅಂಚನ್ ದಾಮಸ್‌ ಕಟ್ಟೆ ಉಪಸ್ಥಿತರಿದ್ದು, ಕೃಷ್ಣರಾಜ್ ಭಟ್ ನಿರೂಪಿಸಿದರು.