ಕೃಷಿ ಕಸುಬಿನ ಕಡೆಗೆ ಗಮನ ನೀಡದಿದ್ದರೆ ಅಪಾಯ ನಿಶ್ಚಿತ-ಶಾಸಕ ಶ್ರೀನಿವಾಸ ಮಾನೆ

| Published : Oct 14 2024, 01:20 AM IST

ಕೃಷಿ ಕಸುಬಿನ ಕಡೆಗೆ ಗಮನ ನೀಡದಿದ್ದರೆ ಅಪಾಯ ನಿಶ್ಚಿತ-ಶಾಸಕ ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತನ ಕೃಷಿ ಅಳಿಯುತ್ತಿದ್ದು, ಹೊಲಗದ್ದೆ ಮಾರಿ ನೌಕರಿ ಗಿಟ್ಟಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕಸುಬಿನ ಕಡೆಗೆ ಗಮನ ನೀಡದಿದ್ದರೆ ಅಪಾಯ ನಿಶ್ಚಿತ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.

ಹಾನಗಲ್ಲ: ರೈತನ ಕೃಷಿ ಅಳಿಯುತ್ತಿದ್ದು, ಹೊಲಗದ್ದೆ ಮಾರಿ ನೌಕರಿ ಗಿಟ್ಟಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕಸುಬಿನ ಕಡೆಗೆ ಗಮನ ನೀಡದಿದ್ದರೆ ಅಪಾಯ ನಿಶ್ಚಿತ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹನುಮನಮಟ್ಟಿಯ ಕೃಷಿ ವಿದ್ಯಾಲಯದ ಬಿಎಸ್ಸಿ ಅಗ್ರಿ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಹಾಗೂ ಕೃಷಿ ದರ್ಶನ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ಹಾಳು ಮಾಡಿ ಪರಿಸರ ನಾಶ ಮಾಡುತ್ತಿದ್ದೇವೆ. ನೀರಿನ ಸಮರ್ಪಕ ನಿರ್ವಹಣೆ ಅರಿಯದಾಗಿದ್ದೇವೆ. ಕೆರೆ, ಕಟ್ಟೆ, ಕಾಲುವೆ ಅತಿಕ್ರಮಿಸಿಕೊಂಡು ಸಂಕಷ್ಟ ಮೈಮೇಲೆ ಎಳೆದುಕೊಂಡಿದ್ದೇವೆ. ಸೃಷ್ಟಿಯ ಜೊತೆಗಿನ ಚೆಲ್ಲಾಟದ ದುಷ್ಪರಿಣಾಮ ಎದುರಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಹೊಲಗದ್ದೆಗಳಲ್ಲಿ ಗಳಿಸುವ, ಉದ್ಯೋಗ ಹುಡುಕುವ ಪರಿಪಾಠ ಬೆಳೆಯಬೇಕಿದೆ. ಯುವಕರನ್ನು ವಿದ್ಯಾರ್ಥಿ ದೆಸೆಯಿಂದಲೇ ಕೃಷಿಯತ್ತ ಆಕರ್ಷಿಸುವ ಕೆಲಸ ನಡೆಯಬೇಕಿದೆ. ದೇಶದ ೧೪೦ ಕೋಟಿ ಜನರ ಹಸಿವು ನೀಗಿಸುವ ಶಕ್ತಿ ಇರುವುದು ಕೇವಲ ರೈತ ಸಮೂಹಕ್ಕೆ ಮಾತ್ರ ಎನ್ನುವ ಸತ್ಯ ಅರಿಯಬೇಕಿದೆ ಎಂದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ ಮಾತನಾಡಿ, ಕೃಷಿ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿನ ಪ್ರಾಯೋಗಿಕ ಅನುಭವ ನೀಡುವಲ್ಲಿ ಇಂಥ ಶಿಬಿರಗಳು ಸಹಕಾರಿಯಾಗಿವೆ. ಬೆಳೆ ಉತ್ಪಾದನೆ, ಜಾನುವಾರು ನಿರ್ವಹಣೆ ಮತ್ತು ಕೃಷಿ ಎಂಜಿನಿಯರಿಂಗ್‌ನಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸುವ ಅಗತ್ಯ ಹೆಚ್ಚಿದೆ. ಕೃಷಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಮರ್ಶಾತ್ಮಕ ಚಿಂತನೆ ನಡೆಸಬೇಕಿದೆ ಎಂದರು.ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹನುಮನಮಟ್ಟಿಯ ಕೃಷಿ ವಿದ್ಯಾಲಯದ ಪ್ರಾಚಾರ್ಯ ಡಾ.ಕೆ.ಬಿ.ಯಡಳ್ಳಿ, ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಹಕ್ಕಲಪ್ಪನವರ, ಕೃಷಿ ಅಧಿಕಾರಿ ಸಂತೋಷ, ಉಪನ್ಯಾಸಕ ಡಾ.ಗಣಪತಿ, ಗ್ರಾಪಂ ಅಧ್ಯಕ್ಷ ದುಂಡನಗೌಡ ಪಾಟೀಲ, ಸದಸ್ಯ ಪುಟ್ಟಪ್ಪ ಕಿರವಾಡಿ, ಮುಖಂಡರಾದ ಪ್ರಕಾಶ ಬಣಕಾರ, ಅಜ್ಜಪ್ಪ ಶಿರಳ್ಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಕೃಷಿ ಮಾದರಿಗಳು ಕೃಷಿ ಆಸಕ್ತರ ಗಮನ ಸೆಳೆದು, ಉಪಯುಕ್ತ ಮಾಹಿತಿ ನೀಡಿದವು.