ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕಕಾಂಗ್ರೆಸ್ ನೀಡಿರುವ ಬಿಟ್ಟಿ ಭಾಗ್ಯಗಳು ಮುಂದುವರೆದಲ್ಲಿ ಪಾಕಿಸ್ತಾನ, ಶ್ರೀಲಂಕಾ ದೇಶಗಳಂತೆ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಶಾಸಕ ರಮೇಶ ಜಾರಕಿಹೊಳಿ ಭವಿಷ್ಯ ನುಡಿದರು.
ನಗರದ ನ್ಯೂ ಇಂಗ್ಲಿಷ್ ಶಾಲೆಯ ಆವರಣದಲ್ಲಿ ಸೋಮವಾರ ರಾತ್ರಿ ನಡೆದ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಪ್ರಚಾರಾರ್ಥ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಗಳು ಚುನಾವಣೆಯ ಗೀಮಿಕ್. ಚುನಾವಣೆಯ ನಂತರ ಎಲ್ಲವನ್ನೂ ಸ್ಥಗಿತಗೊಳಿಸಲಿದ್ದಾರೆ. ಗ್ಯಾರಂಟಿಗಳನ್ನು ಮುಂದುವರಿಸಿದ್ದಲ್ಲಿ ರಾಜ್ಯದ ಆರ್ಥಿಕತೆಗೆ ಹೊಡೆತ ಬಿಳುತ್ತದೆ ಎಂದರು.ದೇಶದ ಭದ್ರತೆ, ಅಭಿವೃದ್ಧಿಯ ಚುನಾವಣೆ ಇದಾಗಿದ್ದು, ಹಗಲಿರುಳು ದೇಶಕ್ಕಾಗಿ ದುಡಿಯುತ್ತಿರುವ ಉಕ್ಕಿನ ಮನುಷ್ಯ ಮೋದಿಯವರನ್ನು ಬೆಂಬಲಿಸೋಣ. ಅವರು ಪ್ರಧಾನಿ ಆಗುವುದು ನಿಶ್ಚಿತ ಎಂದರು.
ಕಾಂಗ್ರೆಸ್ ಪಕ್ಷ ಎಸ್ಸಿ, ಎಸ್ಟಿ ಸಮುದಾಯವನ್ನು ತಮ್ಮ ವೋಟ್ ಬ್ಯಾಂಕ್‌ಗಾಗಿ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಎಸ್ಸಿ,ಎಸ್ಟಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಿಲ್ಲ. ಮುಸ್ಲಿಂ ಸಮುದಾಯದವರು ಸಹ ಭಾರತೀಯರೇ. ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳಿಗೆ ಕಿವಿಗೊಡದೇ ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಬಾರಿ ಮುಸ್ಲಿಂ ಸಮುದಾಯ ಬೆಂಬಲಿಸಿ ಪ್ರಧಾನಿಯವರ ಕೈ ಬಲಪಡಿಸಬೇಕು. ಎಲ್ಲರೊಡನೆ ಎಲ್ಲರ ಶ್ರೇಯೋಭಿವೃದ್ಧಿ ಬಯುಸುವ ಪ್ರಧಾನಿ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿಸಲು ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.ಜಗದೀಶ ಶೆಟ್ಟರ ಕೇಂದ್ರ ಮಂತ್ರಿಯಾಗುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಬೆಳಗಾವಿ ಜಿಲ್ಲೆಗೆ ಬಿಜೆಪಿ ಪಕ್ಷ ಅನೇಕ ಕೊಡುಗೆಗಳನ್ನು ನೀಡಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ತಾಲೂಕಿನ ಶಿವಾಪುರ ಗ್ರಾಮದಲ್ಲಿ ಇಂಡಸ್ಟ್ರೀಸ್ ಪಾರ್ಕ್ ಸ್ಥಾಪಿಸಲು ಸರ್ವೇ ಮಾಡಿಸಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಆ ಯೋಜನೆ ಸ್ಥಗಿತಗೊಂಡಿದೆ ಎಂದು ದೂರಿದರು.
ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಮಾತನಾಡಿ, ನರೇಂದ್ರ ಮೋದಿಯವರು ದೇಶದ ಆಸ್ತಿಯಾಗಿದ್ದು, ಅವರಂತ ಪ್ರಧಾನಿ ಸೀಗಲು ಸಾಧ್ಯವಿಲ್ಲ. ತಮ್ಮ ದಕ್ಷ ಆಡಳಿತದಿಂದ ದೇಶ ವಿದೇಶಗಳಲ್ಲಿ ಜನಪ್ರಿಯರಾಗಿದ್ದಾರೆ. ಜಗತ್ತಿನ ಯುದ್ಧಕಾಲದಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ. ಇಂತಹ ಪ್ರಧಾನಿಯವರ ಅವಶ್ಯಕತೆ ದೇಶಕ್ಕೆ ಇದ್ದು ಅವರನ್ನು 3ನೇ ಬಾರಿ ಪ್ರಧಾನಿಯನ್ನಾಗಿಸಲು ಬಿಜೆಪಿ ಪಕ್ಷದ ಚಿಹ್ನೆ ಕಮಲಕ್ಕೆ ಮತ ನೀಡುವಂತೆ ಮನವಿ ಮಾಡಿದರು.ವೇದಿಕೆಯ ಮೇಲೆ ಬೆಳಗಾವಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಸ ಪಾಟೀಲ, ಮಾಜಿ ಶಾಸಕ ಎಂ.ಎಲ್.ಮುತ್ತೇನ್ನವರ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ಪ್ರಭಾ ಶುಗರ್ಸ್ ಅಧ್ಯಕ್ಷ ಅಶೋಕ ಪಾಟೀಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಚಿಕ್ಕರೇವಣ್ಣ, ಡಾ.ಕೆ.ವಿ.ಪಾಟೀಲ ಇದ್ದರು. ನ್ಯಾಯವಾದಿ ಎಲ್.ಎಚ್.ಭಂಡಿ ಸ್ವಾಗತಿಸಿ, ವಂದಿಸಿದರು.ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅನುಭವಿ ರಾಜಕಾರಣಿ. ಅವರ ಮೂಲಕ ಬರುವ ದಿನಗಳಲ್ಲಿ ಕೈಗಾರಿಕೆ, ನೀರಾವರಿ, ಆಧುನಿಕ ತಂತ್ರಜ್ಞಾನದ ಕೃಷಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಶೆಟ್ಟರ ಅವರು ನನ್ನ ಮಿತ್ರರಾಗಿದ್ದು ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವದಿಸುವಂತೆ ಪ್ರಧಾನಿ ಮೋದಿಯವರೇ ಹೇಳಿದ್ದು, ಬಿಜೆಪಿಗೆ ಮತ ನೀಡಿ.
-ರಮೇಶ ಜಾರಕಿಹೊಳಿ, ಶಾಸಕ.