ಅಸಮಾನತೆಯನ್ನು ಜೀವಂತವಾಗಿರಿಸುತ್ತಿರುವ ಆರ್‌ಎಸ್‌ಎಸ್‌ ಟೀಕಿಸುತ್ತಿರುವುದರಿಂದ ನನ್ನನ್ನು ಕೊಲ್ಲುವುದಾಗಿ ಹೇಳುತ್ತಾರೆ. ಇತಿಹಾಸದಲ್ಲಿ ಕೊಂದವರ ಹೆಸರು ಉಳಿಯುವುದಿಲ್ಲ. ಕೊಲೆಯಾದವರು ಮಹಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಬೌದ್ಧ ಧರ್ಮ ಭಾರತದಲ್ಲಿ ಇದ್ದಿದ್ದರೆ ಆರ್‌ಎಸ್‌ಎಸ್‌– ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಶೂದ್ರರು, ಶೋಷಿತರು ಬಡವರಾಗಿ ಇರುತ್ತಿರಲಿಲ್ಲ ಎಂದು ಚಿಂತಕ ಕಾಂಚಾ ಐಲಯ್ಯ ತಿಳಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಬೌದ್ಧ ಮಹಾ ಸಮ್ಮೇಳನದಲ್ಲಿ ಬುದ್ಧ ಮತ್ತು ಮಾನವ ಪ್ರೇಮ ಕುರಿತು ಮಾತನಾಡಿದ ಅವರು, ಚೀನಾ, ಜಪಾನ್, ಕೊರಿಯಾ ಮುಂದುವರಿದಿವೆ. ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ ಎಂದು ಹೇಳಿ ಅಂಬೇಡ್ಕರ್‌ ಬೌದ್ಧ ಧರ್ಮ ಸ್ವೀಕರಿಸಿದ್ದೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಸಮಾನತೆಯನ್ನು ಜೀವಂತವಾಗಿರಿಸುತ್ತಿರುವ ಆರ್‌ಎಸ್‌ಎಸ್‌ ಟೀಕಿಸುತ್ತಿರುವುದರಿಂದ ನನ್ನನ್ನು ಕೊಲ್ಲುವುದಾಗಿ ಹೇಳುತ್ತಾರೆ. ಇತಿಹಾಸದಲ್ಲಿ ಕೊಂದವರ ಹೆಸರು ಉಳಿಯುವುದಿಲ್ಲ. ಕೊಲೆಯಾದವರು ಮಹಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಟ್‌ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ನಿಜವಾದ ಬೌದ್ಧ. ತಮ್ಮತ್ತ ಶೂ ತೂರಿದವನ ಬಗ್ಗೆ ಕೋಪಗೊಳ್ಳದೇ ಕ್ಷಮಿಸಿದರು. ಇದಲ್ಲವೇ ಬುದ್ಧ ಮಾರ್ಗ ಎಂದರು.

ದಲಿತರು ಎಚ್ಚೆತ್ತುಕೊಳ್ಳಬೇಕು ಶೂದ್ರರು, ದಲಿತರು ಎಚ್ಚೆತ್ತುಕೊಳ್ಳಬೇಕು. ಇಂಗ್ಲಿಷ್‌ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರವೇ ಹಿಂದೂ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಿಂದ ವಿಮೋಚನೆ ಪಡೆಯಲು ಸಾಧ್ಯ. ಯು.ಆರ್. ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌ ಅವರು ಕನ್ನಡ ಭಾಷೆಯ ಉಳಿವಿಗೆ ಎಲ್ಲಾ ಮಕ್ಕಳು ಮಾತೃಭಾಷೆಯಲ್ಲೇ ಓದಬೇಕೆಂದು ಹೇಳಿದ್ದರು. ಅವರೆದುರಿಗೇ ಆಕ್ಷೇಪ ವ್ಯಕ್ತಪಡಿಸಿದ್ದೆ. ಸೇವಕರಾಗಿ ಇರಿಸುವ ಹುನ್ನಾರವೆಂದು ಹೇಳಿದ್ದೆ ಎಂದರು.

ಬೌದ್ಧ ಧರ್ಮವೂ ಪಾಳಿ– ಪ್ರಾಕೃತ ಬದಲು ಇಂಗ್ಲಿಷ್‌ನಲ್ಲಿಯೇ ಧಾರ್ಮಿಕ ಆಚರಣೆ ಹಾಗೂ ತತ್ವಗಳನ್ನು ಪಸರಿಸಬೇಕು. ಅಂಬೇಡ್ಕರ್‌ಬರೆದದ್ದೆಲ್ಲವೂ ಇರುವುದು ಇಂಗ್ಲಿಷ್ ನಲ್ಲೇ. ಬೌದ್ಧ ವಿಹಾರಗಳಲ್ಲಿ ಇಂಗ್ಲಿಷ್‌ಕಲಿಕೆ, ಅಂಬೇಡ್ಕರ್ ಓದು ನಡೆಯಬೇಕು ಎಂದು ಅವರು ಹೇಳಿದರು.

ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರಿಗಿಂತಲೂ ರಾಹುಲ್ ಗಾಂಧಿ ಹೆಚ್ಚು ಓದಿಕೊಂಡಿದ್ದಾರೆ. ಸಂವಿಧಾನ ರಕ್ಷಣೆ, ಜನರ ಹಕ್ಕುಗಳಿಗೆ ಹೋರಾಡುತ್ತಿದ್ದಾರೆ. ಸಾಮಾನ್ಯ ಟೀ ಶರ್ಟ್‌ಧರಿಸಿ, ವಿಚಾರಗಳಿಂದ ಯುವ ಸಮೂಹದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದರು.

140 ವರ್ಷದ ಕಾಂಗ್ರೆಸ್‌ಇತಿಹಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯದ ಎರಡನೇ ಅಧ್ಯಕ್ಷರಾಗಿದ್ದಾರೆ. ಅವರ ಇಂಗ್ಲಿಷ್‌ಮತ್ತು ಹಿಂದಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗಿಂತಲೂ ಸುಂದರವಾಗಿದೆ. ರಾಜ್ಯಸಭೆಯಲ್ಲಿ ಒಂದು ಮಾತಿನಿಂದಲೇ ಎಲ್ಲರನ್ನು ನಡುಗಿಸುವ ಶಕ್ತಿ ಇದೆ ಎಂದು ಅವರು ತಿಳಿಸಿದರು.