ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮದುವೆ, ಖಾಸಗಿ ಸಮಾರಂಭ ಹಾಗೂ ಮುಂತಾದ ಸಭೆಗಳಲ್ಲಿ ರಾಜಕೀಯ ಮುಖಂಡರು, ಅಭ್ಯರ್ಥಿ ಪಾಲ್ಗೊಳ್ಳಲು ಯಾವುದೇ ನಿರ್ಬಂಧವಿಲ್ಲ. ಆದರೆ ಈ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ಮಾಡುವಂತಿಲ್ಲ. ಒಂದು ಪ್ರಚಾರ ನಡೆಸಿರುವುದು ಕಂಡುಬಂದರೆ ಇಡೀ ಮದುವೆ ಖರ್ಚು-ವೆಚ್ಚಗಳು ಅಭ್ಯರ್ಥಿಯ ಚುನಾವಣೆ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಧಾರ್ಮಿಕ ಕಾರ್ಯಗಳು, ಜಾತ್ರೆ, ಉತ್ಸವಗಳಲ್ಲಿ ಚುನಾವಣೆ ಪ್ರಚಾರ ಮಾಡಬಾರದು ಎಂದರು.
ಎಲೆಕ್ಟ್ರಾನಿಕ್ ಮಾಧ್ಯಮ ಮೂಲಕ ಬಿತ್ತರಿಸುವ ಜಾಹೀರಾತು ಸಂದೇಶ ವಿಷಯದ ಬಗ್ಗೆ ಮಾಧ್ಯಮ ಪ್ರಮಾಣೀಕರ ಸಮಿತಿ ಯ ಅನುಮೋದನೆ ಪಡೆಯಬೇಕು. ಅನ್ಯಧರ್ಮ, ಕೋಮು, ಜಾತಿ ಹಾಗೂ ವ್ಯಕ್ತಿಗಳ ಬಗ್ಗೆ ದ್ವೇಷ ಭಾಷಣ ಮಾಡುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲಂಘನೆಯಾಗಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಪ್ರಕರಣ ದಾಖಲಿಸಲಾಗು ವುದು.ರಾಜಕೀಯ ಪಕ್ಷಗಳ ಸಹಮತಿಯೊಂದಿಗೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಬಳಸುವ ಎಲ್ಲಾ ವಸ್ತುಗಳ ದರಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಈ ಆಧಾರದಲ್ಲಿ ಚುನಾವಣೆ ಪ್ರಚಾರ ವೆಚ್ಚವನ್ನು ದಾಖಲು ಮಾಡಲಾಗು ವುದು. ಅಭ್ಯರ್ಥಿಗಳು ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದಂತೆ ರಿಜಿಸ್ಟರ್ ನಿರ್ವಹಿಸಬೇಕು. ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಅಧಿಕಾರಿಯೊಂದಿಗೆ ಸಮನ್ವಯ ಹಾಗೂ ಸಂಪರ್ಕಕ್ಕಾಗಿ ಅಧಿಕೃತ ಏಜೆಂಟರನ್ನು ನೇಮಕ ಮಾಡಬೇಕು. ಹೀಗೆ ನೇಮಿಸಿದ ಏಜೆಂಟರುಗಳಿಗೆ ಸುವಿಧಾ ತಂತ್ರಾಂಶ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ, ಚುನಾವಣೆ ವೆಚ್ಚ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಅಕ್ರಮಕ್ಕೆ ಸಂಬಂಧಿಸಿದ ದೂರು ಸಲ್ಲಿಸಲು 1950ಕ್ಕೆ ಕರೆ ಮಾಡಿ:ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧ ಮಾಡಲಾಗಿದೆ. ಒಂದು ವೇಳೆ ಮಕ್ಕಳ ಬಳಕೆ ಕಂಡು ಬಂದರೆ ಬಾಲ ನ್ಯಾಯ ಕಾಯ್ದೆ ಹಾಗೂ ಜನಪ್ರತಿನಿಧಿಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಚುನಾವಣೆ ಅಕ್ರಮ ಹಾಗೂ ಉಚಿತ ಕೊಡುಗೆಗಳನ್ನು ನೀಡುವ ಅಂಶ ಕಂಡುಬಂದರೆ ಸಿ-ವಿಜಿಲ್ ಅಥವಾ ಸಹಾಯವಾಣಿ ಸಂಖ್ಯೆ 1950 ಮೂಲಕ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
ನಾಮಪತ್ರ ಸಲ್ಲಿಸುವ ಮುಂಚೆ ನಡೆಸುವ ಪ್ರಚಾರದ ವೆಚ್ಚಗಳು ರಾಜಕೀಯ ಪಕ್ಷಗಳಿಗೆ ಹೊಂದಿಸಿದರೆ, ನಾಮಪತ್ರ ಸಲ್ಲಿಸಿದ ನಂತರ ಚುನಾವಣೆ ವೆಚ್ಚಗಳನ್ನು ಅಭ್ಯರ್ಥಿಗಳೊಂದಿಗೆ ಹೊಂದಿಸಲಾಗುವುದು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಹೊಸದಾಗಿ ಕಚೇರಿ ತೆರೆಯಲು ಅನುಮತಿ ಪಡೆದುಕೊಳ್ಳಬೇಕು. ಮತಗಟ್ಟೆಗಳಿಗೆ ಪಕ್ಷದ ಏಜೆಂಟ್‍ರನ್ನು ನೇಮಕದಲ್ಲಿ ಯಾವುದೇ ಗೊಂದಲಕ್ಕೀಡು ಮಾಡದಂತೆ ಸಹಾಯಕ ಚುನಾವಣೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅವರು ತಿಳಿಸಿದರು.ಜಿಪಂ ಸಿಇಒ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರ ಸ್ವಾಮಿ, ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗ ಳು, ಚುನಾವಣಾ ತಹಸೀಲ್ದಾರ್ ಎಲ್.ಜಯಣ್ಣ, ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿ ಡಿ.ಎನ್. ಮೈಲಾರಪ್ಪ, ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಮಿತಿ ಸದಸ್ಯ ಯಶವಂತ್ ಕುಮಾರ್, ನರೇಂದ್ರ ಎಚ್, ಸಿಪಿಐ (ಎಂ) ಪಕ್ಷದ ಡಿಇಒ ಗೌಸ್‍ಪೀರ್, ಸಿಪಿಐ ಪಕ್ಷದ ಕೆ.ಇ ಸತ್ಯಕೀರ್ತಿ, ಬಿಎಸ್‍ಪಿ ಜಿಲ್ಲಾ ಅಧ್ಯಕ್ಷ ಎನ್.ಪ್ರಕಾಶ್ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.--------------------ಪ್ರಚಾರಕ್ಕೆ ಅನುಮತಿಗೆ ಸುವಿಧಾ ತಂತ್ರಾಶದಲ್ಲಿ ಅರ್ಜಿ:
ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯಲು ಸುವಿಧಾ ತಂತ್ರಾಂಶದ ಮೂಲಕವೇ ಅರ್ಜಿ ಸಲ್ಲಿಸುವುದು ಕಡ್ಡಾಯ. ಪ್ರಚಾರದ ಅನುಮತಿಯನ್ನು ಸಹ ಸುವಿಧಾ ತಂತ್ರಾಂಶದ ಲ್ಲಿಯೇ ನೀಡಲಾಗುವುದು. ಪ್ರಚಾರ ಸಭೆ, ಪ್ರಚಾರಕ್ಕೆ ಬಳಸುವ ವಾಹನ ಸೇರಿದಂತೆ ಇತರೆ ವಿಷಯಗಳಿಗೆ ಅನುಮತಿ ಪಡೆಯಲು ಭೌತಿಕವಾಗಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶ ಇಲ್ಲ. ಚುನಾವಣೆ ಪ್ರಚಾರ ಸಭೆಯ ಆಯೋಜನೆಯ 48 ಗಂಟೆಗಳ ಮುನ್ನ ಅರ್ಜಿ ಸಲ್ಲಿಸಿದರೆ ಅನುಮತಿ ನೀಡಲು ಅನುಕೂಲವಾಗಲಿದೆ ಎಂದರು.ಅರ್ಜಿ ಸಲ್ಲಿಸಿದ ಜೇಷ್ಠತೆಯ ಆಧಾರದಲ್ಲಿಯೇ ಅನುಮತಿ ನೀಡಲಾಗುವುದು. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ಅನುಮತಿ ಲಭಿಸಲಿದೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಚುನಾವಣೆ ಕಾರ್ಯ ನಿಮಿತ್ತ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಗಾಗಿ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಿರುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.