ಸಾರಾಂಶ
ಸಂಕಲ್ಪ ಉತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಯತಿದ್ವಯರುಕನ್ನಡಪ್ರಭ ವಾರ್ತೆ ಯಲ್ಲಾಪುರ
ನಮ್ಮ ಸಂಸ್ಕೃತಿ ಶ್ರೇಷ್ಠವಾದ ಪರಂಪರೆ ಹೊಂದಿದೆ. ಅದನ್ನು ಮಕ್ಕಳಿಗೆ ಹಸ್ತಾಂತರಿಸುವುದರಲ್ಲಿ ವಿಫಲರಾಗುತ್ತಿದ್ದೇವೆ. ನಮ್ಮ ಕೃಷಿ ಜಮೀನನ್ನು ವಿದೇಶಿ ಹಿನ್ನೆಲೆ ಉಳ್ಳವರಿಗೆ ಹಣಕ್ಕಾಗಿ ಮಾರಲಾಗುತ್ತಿದೆ. ಇದು ಆಘಾತಕಾರಿ ವಿಷಯ. ಕೃಷಿ ಮತ್ತು ನಮ್ಮ ಸಂಸ್ಕೃತಿಯ ಉಳಿವಿಗಾಗಿ ಪುನಃ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ಮಾಡುವ ಕಾಲವೇ ಬಂದೀತು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಎಚ್ಚರಿಸಿದರು.ಶುಕ್ರವಾರ ಪಟ್ಟಣದ ಗಾಂಧೀ ಕುಟೀರದಲ್ಲಿ ೩೯ನೇ ಸಂಕಲ್ಪ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ತಂದೆ-ತಾಯಿಗಳೇ ಮಕ್ಕಳಿಗೆ ನಮ್ಮ ಮೌಲ್ಯದ ಸಂಸ್ಕಾರ ನೀಡದಿದ್ದರೆ ಮುಂದೆ ದುಃಖಪಡುವ ಕಾಲ ಬರಬಹುದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಈ ಮೌಲ್ಯಯುತ ಪರಂಪರೆ ನಾಶವಾಗುತ್ತಿದೆ. ಇಂತಹ ಉತ್ಸವಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಯಕ್ಷಗಾನದ ಮೂಲಕ ಯುಗಗಳ ಪರಂಪರೆಯನ್ನು ಇಲ್ಲಿ ತೋರ್ಪಡಿಸಲಾಗುತ್ತಿದೆ. ಅದು ಇತಿಹಾಸಕ್ಕಿಂತಲೂ ಹಿಂದಿನದು. ಹಾಗಾಗಿ ನಮ್ಮ ಸಂಸ್ಕೃತಿಗೆ ಅಷ್ಟೊಂದು ಮಹತ್ವವಿದೆ ಎಂದ ಶ್ರೀಗಳು, ಗೀತಾಭಿಯಾನ ನಾಡಿನಾದ್ಯಂತ ನಡೆಸಿಕೊಂಡು ಬಂದಿದ್ದೇವೆ. ಅದು ನಮ್ಮ ಬದುಕಿಗೆ ಅತ್ಯಂತ ಶ್ರೇಷ್ಠವಾದ ಚಿಂತನೆಯನ್ನು ನೀಡುತ್ತದೆ ಎಂದರು.ಕೇರಳದ ಎಡನೀರು ಮಹಾಸಂಸ್ಥಾನದ ಶ್ರೀಮದ್ ಜಗದ್ಗುರು ಸಚ್ಚದಾನಂದ ಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನಮ್ಮ ಮಠಕ್ಕೂ ಸ್ವರ್ಣವಲ್ಲಿ ಮಠಕ್ಕೂ ಅನಾದಿಕಾಲದಿಂದ ಸಂಬಂಧವಿದೆ. ನಮ್ಮ ಪರಂಪರೆ ಮೌಲ್ಯ ಉಳಿಯಬೇಕಾದರೆ ಯಕ್ಷಗಾನ ಉಳಿಸಬೇಕು. ಯಕ್ಷಗಾನ ಕರಾವಳಿಯ ಗಟ್ಟಿಕಲೆಯಾಗಿದೆ. ಕಲಾ ಪ್ರಕಾರಗಳಾದ ಹಲವು ಕಲೆಗಳು, ಕಲಾವಿದರು ಉಳಿದಾಗ ಮಾತ್ರ ಕಲೆ ಮುಂದಿನ ಪರಂಪರೆಗೆ ಲಭಿಸುತ್ತದೆ. ಇಂದಿನ ಯುವಕರು ನಮ್ಮ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ. ಧಾರ್ಮಿಕ ನಂಬಿಕೆ, ಶ್ರದ್ಧೆ ಕಡಿಮೆಯಾಗುತ್ತಿದೆ. ಇದಕ್ಕೆ ಪಾಲಕರ ನಿರ್ಲಕ್ಷವೇ ಕಾರಣ. ಹಿಂದೆ ಇಂತಹ ಉತ್ತಮ ಚಿಂತನೆಯುಳ್ಳ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸುತ್ತಿತ್ತು. ಇಂದು ರಾಜಕೀಯ ಸೇರ್ಪಡೆಯಾಗಿ ಸಂಸ್ಕಾರ ನೀಡುವ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ನಮ್ಮ ಕಾಸರಕೋಡು ಪ್ರದೇಶದಲ್ಲಿ ಇಂದು ಸಂಸ್ಕೃತಿಯ ಉಳಿವಿಗಾಗಿ ಶ್ರೀಗಳು ನಡೆಸಿದ ಗೀತಾ ಕ್ರಾಂತಿ ನಮ್ಮ ಪ್ರದೇಶದಲ್ಲೂ ಆಗಬೇಕಾಗಿದೆ. ನಮ್ಮ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಂಸ್ಕೃತಿ ಇಲಾಖೆ ಕನ್ನಡಕ್ಕೆ ಮಹತ್ವ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ರಾಮನಾಥ ಭಟ್ಟ ಅಡಿಕೆಪಾಲ, ಸಾಮಾಜಿಕ ಧುರೀಣರಾದ ವೆಂಕಟೇಶ ಹೆಗಡೆ ಹೊಸಬಾಳೆ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಶಂಕರ ಭಟ್ಟ ತಾರೀಮಕ್ಕಿ, ಸುಬ್ರಹ್ಮಣ್ಯ ಹೆಗಡೆ, ವನರಾಗ ಶರ್ಮ, ಸುಬ್ರಾಹ್ಮಣ್ಯ ಚಿಟ್ಟಾಣಿ, ಬೀರಣ್ಣ ನಾಯ್ಕ ಮೊಗಟಾ ಮತ್ತಿತರರಿದ್ದರು.ಸಂಕಲ್ಪದ ಸಂಚಾಲಕರಾದ ಪ್ರಸಾದ ಹೆಗಡೆ, ಪ್ರಶಾಂತ ಹೆಗಡೆ ಯತಿದ್ವಯರಿಗೆ ಫಲಪುಷ್ಪ ಸಮರ್ಪಿಸಿ, ಪ್ರಾಸ್ತಾವಿಕ ಮಾತನಾಡಿದರು. ವೇ.ಮೂ. ಶಶಿಕಾಂತ ಭಟ್ಟ ಸಂಗಡಿಗರು ವೇದಘೋಷ ಪಠಿಸಿದರು. ಪದ್ಮಾ ಪ್ರಮೋದ ಹೆಗಡೆ ಪ್ರಾರ್ಥಿಸಿದರು. ಸಂಘಟಕರಲ್ಲೊಬ್ಬರಾದ ಸಿ.ಜಿ. ಹೆಗಡೆ ಸ್ವಾಗತಿಸಿದರು. ಯಕ್ಷಕಲಾವಿದೆ ಚಂದ್ರಕಲಾ ಭಟ್ಟ ನಿರ್ವಹಿಸಿದರು. ಬಾಬು ಬಾಂದೇಕರ ವಂದಿಸಿದರು.
;Resize=(128,128))
;Resize=(128,128))
;Resize=(128,128))