ಹೊಂದಾಣಿಕೆ ನಿಲ್ಲದಿದ್ರೆ ಪಕ್ಷ ಮಕಾಡೆ: ಯತ್ನಾಳ್‌

| Published : Mar 28 2025, 12:34 AM IST

ಸಾರಾಂಶ

‘ಅಡ್ಜಸ್ಟ್‌ಮೆಂಟ್‌ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ. ಕುಟುಂಬ ರಾಜಕಾರಣ ಕಡಿವಾಣ ಹಾಕಿ, ನಿಜವಾದ ಜನಪರ ಕಾಳಜಿ ಇರುವ ನಾಯಕರಿಗೆ ಅವಕಾಶ ನೀಡಬೇಕು’ ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಅಡ್ಜಸ್ಟ್‌ಮೆಂಟ್‌ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ. ಕುಟುಂಬ ರಾಜಕಾರಣ ಕಡಿವಾಣ ಹಾಕಿ, ನಿಜವಾದ ಜನಪರ ಕಾಳಜಿ ಇರುವ ನಾಯಕರಿಗೆ ಅವಕಾಶ ನೀಡಬೇಕು’ ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

ನಿಸ್ವಾರ್ಥ ಕಾರ್ಯಕರ್ತರು, ತನು-ಮನ-ಧನದಿಂದ ದುಡಿದ ಮುಖಂಡರಿಂದ ಪಕ್ಷದ ಸಂಘಟನೆಯಾಯಿತೇ ಹೊರತು ಸ್ವಯಂಘೋಷಿತ ‘ಪೂಜ್ಯ’ರಿಂದ ಅಲ್ಲ ಎಂದು ಅವರು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.

ಉಚ್ಚಾಟನೆಯ ಮರುದಿನವಾದ ಗುರುವಾರ ಸಾಮಾಜಿಕ ಜಾಲತಾಣದ ಮೂಲಕ ಯತ್ನಾಳ್ ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್‌ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲಬುರಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈಕಮಾಂಡ್ ಮಾಡದೇ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ. ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ ಎಂದು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಸಧೃಡವಾಗಿದ್ದ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದು ಯಾರ ಅಡ್ಜಸ್ಟ್‌ಮೆಂಟ್ ರಾಜಕಾರಣದಿಂದ ಎಂದು ಪಕ್ಷದ ಪ್ರಮುಖರು ವಿಶ್ಲೇಷಿಸಲಿ. ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಪ್ಪ, ಡಾ ವಿ.ಎಸ್.ಆಚಾರ್ಯರು ಸೇರಿ ಪಕ್ಷದ ಅನೇಕ ಧುರೀಣರು, ಸಾವಿರಾರು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿದ ಪರಿಣಾಮದಿಂದಲೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದ್ದು ಎಂದಿದ್ದಾರೆ.

ಹಿಂದುತ್ವವಾದ ಬಗ್ಗೆ ರಾಜಿ ಮಾಡಿಕೊಳ್ಳದೆ, ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದ ಈಶ್ವರಪ್ಪನವರನ್ನು ಹೊರಗಿಟ್ಟರು. ಪಕ್ಷದಲ್ಲಿ ಆಗಬೇಕಾದ ಕೆಲ ಬದಲಾವಣೆಗಳು, ಸುಧಾರಣೆಗಳು ಸೂಚಿಸಿದಕ್ಕೆ ನಮ್ಮ ನಿಲುವು ಕೆಲವರಿಗೆ ‘ಅಪಥ್ಯ’ ವಾಗಿದೆ.

ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯಕತೆ ಪಕ್ಷಕ್ಕಿಲ್ಲ. ರಾಷ್ಟ್ರ ಮೊದಲು, ಪಕ್ಷ ನಂತರ, ಸ್ವಯಂ ಕೊನೆಗೆ ಎಂಬ ತತ್ವದಡಿ ಕೆಲಸ ಮಾಡುವ ನನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

-ಕೋಟ್‌-

ಪಕ್ಷದ ವಿರುದ್ದ ಬಹಿರಂಗವಾಗಿ ಮಾತನಾಡಿ ಆಡಳಿತಾರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಚಾಟಿಸದೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂತವರಿಗೆ ಉಚ್ಚಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿ

-ಬಸನಗೌಡ ಪಾಟೀಲ್ ಯತ್ನಾಳ, ಶಾಸಕ