ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿ ಈಡೇರಿಕೆ: ಗೀತಾ ಖಂಡ್ರೆ

| Published : Apr 30 2024, 02:10 AM IST

ಸಾರಾಂಶ

ಕಮಲನಗರ ತಾಲೂಕಿನ ಹೋರಂಡಿ ಗ್ರಾಮದ ವಿವಿಧ ಬಡಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಪರವಾಗಿ ತಾಯಿ ಡಾ.ಗೀತಾ ಖಂಡ್ರೆ ಮತಯಾಚಿಸಿದರು.

ಕಮಲನಗರ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು 5 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಅದರಂತೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಕ್ಷ ದೇಶದ ಜನತೆಗೆ ನೀಡಿರುವ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಲಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆಯವರ ತಾಯಿ ಡಾ.ಗೀತಾ ಖಂಡ್ರೆ ಭರವಸೆ ನೀಡಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿದ ಅವರು, ಸೋನಾಳ, ಹೊರಂಡಿ, ಚಾಂಡೆಶ್ವರ ಹಾಗೂ ಸಂಗಮ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಾದ ಪ್ರತಿ ಕುಟುಂಬಕ್ಕೆ 1 ಲಕ್ಷ ರುಪಾಯಿ, ನಿರುದ್ಯೋಗಿಗಳಿಗೆ ಉದ್ಯೋಗ, ರೈತರ ಸಮಸ್ಯೆಗಳಿಗೆ ಸ್ವಾಮಿನಾಥನ್ ವರದಿ ಜಾರಿ ಮಾಡಲಾಗುವುದು. ಹೀಗಾಗಿ ಸಾಗರ ಖಂಡ್ರೆಗೆ ಮತ ನೀಡಿ ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್‌ ಮುಖಂಡ ಪ್ರವೀಣ ಪಾಟೀಲ್, ಬಾಬುರಾವ ಪಾಟೀಲ್ ಹೊರಂಡಿ, ಶಾಂತಕುಮಾರ ಬಿರಾದಾರ, ಪ್ರವೀಣ ಕದಮ, ಮಹಾದೇವ ಪಾಟೀಲ್ ಹಾಗೂ ಅನೇಕ ಮಹಿಳೆಯರು, ಮಕ್ಕಳು ಇದ್ದರು.