ಸಾರಾಂಶ
ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಖಚಿತ ಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಸಮುದಾಯ ಪರಿಗಣಿಸಲಾಗುವುದು
ಗದಗ: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕ ₹೧ ಲಕ್ಷ ನೆರವು ಸಿಗಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ನಗರದ ೧೧,೧೨, ೧೪ ಹಾಗೂ ೨೫ನೇ ವಾರ್ಡ್ ವ್ಯಾಪ್ತಿಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಪರ ಮನೆ-ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು.ಕೆಲಸಗಾರರಿಗೆ ಸಾಮಾಜಿಕ ಭದ್ರತೆ, ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಶೇ. ೫೦ರಷ್ಟು ಮಹಿಳಾ ಮೀಸಲಾತಿ, ಕೇಂದ್ರ ಸರ್ಕಾರದ ಅನುದಾನ ದುಪ್ಪಟ್ಟುಗೊಳಿಸುವ ಮೂಲಕ ಆತ್ಮಾ,ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿನ ವೇತನ, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳ ಸಂಖ್ಯೆ ದ್ವಿಗುಣ, ಸ್ವಾಮಿನಾಥನ್ ಆಯೋಗದ ಸೂತ್ರದ ಪ್ರಕಾರ ರೈತರಿಗೆ ಬೆಂಬಲ ಬೆಲೆ, (ಎಂಎಸ್‌ಪಿ), ಕೃಷಿ ಸಾಲ ಮನ್ನಾ ಗ್ಯಾರಂಟಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಾಶ್ವತ ಆಯೋಗ ರಚಿಸಲಾಗುವುದು ಎಂದರು.
ಬೆಳೆ ನಷ್ಟವಾದ ೩೦ದಿನಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ವಿಮೆ ಪಾವತಿ, ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ ಮತ್ತು ಅಪಘಾತ ವಿಮೆ, ಪ್ರಮುಖ ಸರ್ಕಾರಿ ಕೆಲಸಗಳಲ್ಲಿ ಗುತ್ತಿಗೆ ಪದ್ಧತಿ ತೊಡೆದು ಹಾಕಿ ಕಾಯಂ ಉದ್ಯೋಗಗಳಿಗೆ ಅವಕಾಶ ಸಿಗಲಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಖಚಿತ ಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಸಮುದಾಯ ಪರಿಗಣಿಸಲಾಗುವುದು. ಮೀಸಲಾತಿಯ ಮೇಲಿನ ೫೦% ಮಿತಿಯನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಗುತ್ತದೆ. ಎಸ್‌ಸಿ, ಎಸ್‌ಟಿ ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಅವರಿಗಾಗಿ ಸಮಾನ ವಿಶೇಷ ಬಜೆಟ್ ಮಾಡಲಾಗುವುದು. ಅರಣ್ಯ ಹಕ್ಕು ಕಾಯ್ದೆಯ ಹಕ್ಕು೧ ವರ್ಷದಲ್ಲಿ ಇತ್ಯರ್ಥಗೊಳಿಸಲಾಗುವುದು. ಹೀಗಾಗಿ ಮಹಿಳೆಯರು, ಯುವಕರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡುವ ಮೂಲಕ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಪಕ್ಷದ ಕಾರ್ಯಕರ್ತರು ಇದ್ದರು.