ಸಾರಾಂಶ
ಗುರುಮಠಕಲ್ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಕನ್ನಡಪ್ರಭ ವಾರ್ತೆ, ಗುರುಮಠಕಲ್
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳ ಸಂದರ್ಭದಲ್ಲಿ ಅಧಿಕಾರಿಗಳು ವಿಳಂಬ ಮಾಡುವುದು ಹಾಗೂ ಲಂಚದ ಬೇಡಿಕೆ ಇಟ್ಟರೆ ಸಾರ್ವಜನಿಕರು ನಿರ್ದಿಷ್ಟ ಮಾಹಿತಿ ಮತ್ತು ಅದಕ್ಕೆ ತಕ್ಕಂತೆ ದಾಖಲೆಗಳೊಂದಿಗೆ ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಬಹುದೆಂದು ಲೋಕಾಯುಕ್ತ ಡಿಎಸ್‌ಪಿ ಹಣಮಂತರಾಯ ಹೇಳಿದರು.ಗುರುಮಠಕಲ್ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಯಾದಗಿರಿ ಲೋಕಾಯುಕ್ತ ಪೊಲೀಸರಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿ, ಸಾರ್ವಜನಿಕರು ಪ್ರಶ್ನೆ ಮಾಡುವುದನ್ನು ರೂಢಿಸಿಕೊಳ್ಳವುದು ಅಗತ್ಯವಿದೆ ಎಂದರು.
ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಯಾವುದೇ ಕೆಲಸವಾದರೂ ಮಧ್ಯವರ್ತಿಗಳ ಮೂಲಕ ಹೊಗುವ ಬದಲಿಗೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.ಸರ್ಕಾರಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುವುದರ ಜೊತೆಗೆ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ತಿಳಿಸಿದರು.
ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸಿದ ಅವರು, 6 ಅರ್ಜಿಗಳನ್ನು ಸ್ವಿಕರಿಸಿ ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು.ಈ ವೇಳೆ ಪಿಎಸ್ಐ ಹಣಮಂತ ಸಣ್ಣಮನಿ, ಗ್ರೇಡ್-2 ತಹಸೀಲ್ದಾರ್ ನರಸಿಂಹಸ್ವಾಮಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು.