ರಾಮನಗರ: ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತನ್ನ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಲಿ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಹಗುರವಾಗಿ ಮಾತನಾಡಿದರೆ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಗ್ರಾಮಗಳಲ್ಲಿ ಘೇರಾವ್ ಹಾಕುತ್ತಾರೆ ಎಂದು

ಕಾಂಗ್ರೆಸ್ ಮುಖಂಡರು ಆದ ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ಕೆ.ರವಿ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ರವರ ಬಗ್ಗೆ ಜೆಡಿಎಸ್ ಮುಖಂಡರು ಸಹ ಮನಸೋ ಇಚ್ಛೆ ಟೀಕೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಇಲ್ಲ. ನಾವ್ಯಾರು ಬಳೆ ತೊಟ್ಟಿ ಕುಳಿತಿಲ್ಲ. ಇದು ಮುಂದುವರೆದರೆ ರಾಮನಗರದಲ್ಲೇ ನಿಖಿಲ್ ಕುಮಾರಸ್ವಾಮಿ ಅವರಿಗೆ ನಮ್ಮ ಕಾರ್ಯಕರ್ತರು ಘೇರಾವ್ ಹಾಕಲಿದ್ದಾರೆ ಎಂದರು.

ರಾಜೀವ್ ಗಾಂಧಿ ವಿಶ್ವವಿದ್ಯಾನಿಯಲಕ್ಕೆ ಭೂಸ್ವಾಧೀನ ಪಡಿಸಿಕೊಂಡಾಗ ನಿಮ್ಮ ತಂದೆಯವರಿಗೆ ರೈತರು ಕಾಣಲಿಲ್ಲವೆ. ಕೋಟಿ ಬಾಳುತ್ತಿದ್ದ ಭೂಮಿಗೆ ಕೇವಲ 30 ಲಕ್ಷ ಪರಿಹಾರ ಕೊಡಿಸಿದರು. ಈಗ ನಿಮಗೆ ರೈತರು ಕಾಣಲಿಲ್ಲವೇ. ಈಗ ಕೇಂದ್ರ ಸಚಿವರಾಗಿ ರಾಜ್ಯದಲ್ಲಿ ಭೂಮಿ ಕೊಡಿಸಿ ಕೈಗಾರಿಕೆ ತರುತ್ತೇನೆಅಂತ ಹೇಳುತ್ತಿದ್ದಾರೆ. ಕೈಗಾರಿಕೆಗಳು ನಿರ್ಮಿಸಲು ರೈತರೇ ಭೂಮಿ ಕೊಡಬೇಕಾಗಿದೆ. ಆಗ ರೈತರು ಕಾಣುವುದಿಲ್ಲವೇ, ಬಿಡದಿ ಹೋಬಳಿಯಲ್ಲಿರುವವರು ಮಾತ್ರ ರೈತರೇ ಎಂದು ಪ್ರಶ್ನಿಸಿದರು.

ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರದ ಶಾಸಕರಾಗಿದ್ದರು. ಅವರ ಅಧಿಕಾರವಧಿಯಲ್ಲಿ ಒಂದೇ ಒಂದು ಇಂಚು ಸಾಗುವಳಿ ಭೂಮಿ ನೀಡಿಲ್ಲ. ಕೊಟ್ಟಿದ್ದರೆ ದಾಖಲೆಗಳೊಂದಿಗೆ ಚರ್ಚೆಗೆ ಬನ್ನಿ. ಈಗ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದನ್ನು ಸಹಿಸದೆ, ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದೀರಿ ಎಂದು ಕೆ.ರವಿ ಟೀಕಿಸಿದರು.


ನೈತಿಕತೆ ಇಲ್ಲ :

ಅರಣ್ಯ ಅಭಿವೃದ್ಧಿ ನಿಗಮ ಮಾಜಿ ನಿರ್ದೇಶಕ ನರಸಿಂಹಯ್ಯ ಮಾತನಾಡಿ, ಜೆಡಿಎಸ್ ವಕ್ತಾರ ನರಸಿಂಹಮೂರ್ತಿ

ಕನ್ನಡ ಪರ ಸಂಘಟನೆಯ ಹೆಸರು ಹೇಳಿಕೊಂಡು ಹಣ ಲೂಟಿ ಮಾಡಿದವನು. ಆತನ ಕರ್ಮಕಾಂಡಗಳು ಬೇಕಾದಷ್ಟಿವೆ. ಹೀಗಾಗಿಯೇ ಆತನನ್ನು ಜನರು ಊರಿಂದ ಹೊರಗೆ ಕಳುಹಿಸಿದರು. ಅಡ್ಡದಾರಿಯಲ್ಲಿ ಬಂದ ನರಸಿಂಹಮೂರ್ತಿಗೆ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಕುಮಾರಸ್ವಾಮಿ ಅವರ ಪಂಥಾಹ್ವಾನವನ್ನು ಶಿವಕುಮಾರ್ ಸ್ವೀಕರಿಸಿದ್ದಾರೆ. ಚರ್ಚೆಗೆ ಸ್ಥಳ, ಸಮಯ, ದಿನ ನಿಗದಿ ಮಾಡಿ ಎಂದಿದ್ದಾರೆ. ಈಗ ಕುಮಾರಸ್ವಾಮಿ ಅವರು ಪಂಥಾಹ್ವಾನಕ್ಕೆ ಬರಲಾಗದೆ ತಮ್ಮ ಪಕ್ಷದ ಮುಖಂಡರನ್ನು ಛೂ ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಸೋಲಿನ ಸರಮಾಲೆ ಧರಿಸಿಲ್ಲ :

ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಗಂಗಾಧರ್ ಮಾತನಾಡಿ, ಡಿ.ಕೆ.ಸುರೇಶ್ ರವರು ಮಾದರಿ ಸಂಸದ ಎಂಬ ಬಿರುದಾಗಿ ಪಾತ್ರರಾದವರು. ಬಮೂಲ್ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭದತ್ತು ಕೊಂಡೊಯ್ದರು. ಅವರು ಒಂದು ಬಾರಿ ಸೋತಿದ್ದಾರೆ. ಆದರೆ, ನಿಮ್ಮಂತೆ ಸೋಲಿನ ಸರಮಾಲೆಯನ್ನು ಧರಿಸಿಲ್ಲ ಎಂದು ನಿಖಿಲ್ ಬಗ್ಗೆ ಲೇವಡಿಯಾಡಿದರು.

ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಬಲರಾಗಿದ್ದಾರೆ. ಹೀಗಾಗಿಯೇ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಶಾಸಕರು ಗೆದ್ದು ಬಂದಿದ್ದಾರೆ. ಡಿಕೆಶಿ ಅವರನ್ನು ಟೀಕಿಸಿದರೆ ಲೀಡರ್ ಆಗುವ ಭಾವನೆಯಲ್ಲಿ ನಿಖಿಲ್ ಇದ್ದಾರೆ. ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಿಖಿಲ್ ಮೊದಲು ಗ್ರಾಪಂ ಸದಸ್ಯನಾಗಲಿ :

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕೇಗೌಡ ಮಾತನಾಡಿ, ಬಿಡದಿ ಟೌನ್ ಶಿಪ್ ಯೋಜನೆಯನ್ನು ರೂಪಿಸಿ, ಸ್ವಾಧೀನಕ್ಕೆ ಭೂಮಿಯನ್ನು ಗುರುತಿಸಿ ರೆಡ್ ಜೋನ್ ಎಂದು ಘೋಷಿಸಿದ್ದ ಕುಮಾರಸ್ವಾಮಿ. ತದನಂತರ ಅವರು ಸಿಎಂ ಆಗಿದ್ದಾಗಲೂ ಯೋಜನೆಯನ್ನು ರದ್ದುಗೊಳಿಸಿ ಡಿ-ನೋಟಿಫೈ ಮಾಡಲಿಲ್ಲ. ನಿಖಿಲ್ ಮೊದಲು ಗ್ರಾಮ ಪಂಚಾಯತ್ ಸದಸ್ಯರಾಗಲಿ ತದನಂತರ ರಾಜಕೀಯ ವಿಚಾರಗಳನ್ನು ಮಾತನಾಡಲಿ ಎಂದರು.

2006ರಲ್ಲಿ ಚನ್ನಪಟ್ಟಣ ತಾಲೂಕಿನ ವಿಠ್ಠಲೇನಹಳ್ಳಿಯಲ್ಲಿ ಗೋಲಿಬಾರ್ ವಿಚಾರದಲ್ಲಿ ದೇವೇಗೌಡರು ಸವಾಲು ಹಾಕಿದ್ದಾಗ, ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರನ್ನು ವಿಠಲೇನಹಳ್ಳಿಗೆ ಕರೆದೊಯ್ದಿದ್ದರು, ಈಗಲೂ ಬೈರಮಂಗಲಕ್ಕೆ ಕರೆತರುತ್ತೇವೆ, ತಾಕತ್ತಿದ್ದರೆ ನೀವು ತಡೆಯಿರಿ ಎಂದು ಜೆಡಿಎಸ್ ಮುಖಂಡರಿಗೆ ಸವಾಲು ಎಸೆದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಲೋಹಿತ್ ಬಾಬು, ಲೋಕೇಶ್, ಮುತ್ತುರಾಜ್, ಉಮೇಶ್, ನಾಗಭೂಷಣ್, ಮುಷೀರ್, ಚನ್ನಮಾನಹಳ್ಳಿ ಶ್ರೀನಿವಾಸ್, ಷಡಕ್ಷರಿ, ಶಂಭೂಗೌಡ, ಸುನೀಲ್, ರಾಮು, ಮುಕುಂದ, ಅನಿಲ್ ಜೋಗೆಂದರ್ ಇದ್ದರು.

23ಕೆಆರ್ ಎಂಎನ್ 2.ಜೆಪಿಜಿ

ಕಾಂಗ್ರೆಸ್ ಮುಖಂಡರು ಆದ ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ಕೆ.ರವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.