ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಉಳಿಗಾಲವಿಲ್ಲ ಎಂದು ತಾಲೂಕು ಕುಂಚಿಟಿಗರ ಸಂಘದ ಉಪಾಧ್ಯಕ್ಷ ಷಣ್ಮುಖಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಉಳಿಗಾಲವಿಲ್ಲ ಎಂದು ತಾಲೂಕು ಕುಂಚಿಟಿಗರ ಸಂಘದ ಉಪಾಧ್ಯಕ್ಷ ಷಣ್ಮುಖಪ್ಪ ಹೇಳಿದರು.ನಗರದ ಕುಂಚಿಟಿಗರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ರಾಜಕಾರಣಿ ಶಿರಾ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಿದ ಟಿಬಿ ಜಯಚಂದ್ರ ಅವರನ್ನು ಸಚಿವರನ್ನಾಗಿ ಮಾಡಬೇಕು. ಕುಂಚಿಟಿಗ ಜನಾಂಗದವರು ರಾಜ್ಯದ ೨೫ ತಾಲೂಕಿನಲ್ಲಿ ನಿರ್ಣಾಯಕ ಮತದಾರರಾಗಿದ್ದೇವೆ. ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು. ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂದರು.
ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಕೆ ಎಲ್ ಮುಕುಂದಪ್ಪ ಮಾತನಾಡಿ, ರಾಜ್ಯ ಕಾಂಗ್ರೆಸ್‌ನ ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ಪ್ರಧಾನಿಗಳಾದ ಇಂದಿರಾಗಾಂದಿ, ರಾಜೀವ್ ಗಾಂಧಿ ಅವರ ಕಾಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷನಿಷ್ಠರಾಗಿರುವ ಶಿರಾ ಕ್ಷೇತ್ರದ ಶಾಸಕರಾದ ಟಿಬಿ ಜಯಚಂದ್ರ ಅವರನ್ನು ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಬೇಕು. ಈ ಕುರಿತು ಡಿ.೨೩ ರ ಸಂಜೆ ಶಿರಾ ನಗರದಲ್ಲಿ ಪಂಜಿನ ಮೆರವಣಿಗೆ ಏರ್ಪಡಿಸಲಾಗಿದೆ. ಇದರ ಜೊತೆಗೆ ರಾಜ್ಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮಿಸಿರುವ ಕೆಪಿಸಿಸಿ ಅಧ್ಯಕ್ಷ ಹಾಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದರು.ಎಪಿಎಂಸಿ ಮಾಜಿ ಅಧ್ಯಕ್ಷರು ಹಾಗೂ ತಾಲೂಕು ಕುಂಚಿಟಿಗರ ಸಂಘದ ನಿರ್ದೇಶಕರಾದ ಎಂ ಆರ್ ಶಶಿಧರ ಗೌಡ ಮಾತನಾಡಿ ಟಿ.ಬಿ.ಜಯಚಂದ್ರ ಅವರು, ೭ ಬಾರಿ ಶಾಸಕರಾಗಿ, ಹಲವು ಖಾತೆಗಳನ್ನು ನಿರ್ವಹಿಸಿ ಉತ್ತಮ ಹೆಸರು ಪಡೆದ ರಾಜಕಾರಣಿಗಳಾಗಿದ್ದಾರೆ. ಟಿ.ಬಿ.ಜಯಚಂದ್ರ ಅವರನ್ನು ಸಚಿವರನ್ನಾಗಿ ಮಾಡಿ ಎಂದು ಡಿ.೨೩ ರಂದು ನಾವು ನಮ್ಮ ಹಕ್ಕನ್ನು ನಾವು ಕೇಳಲು ಹೊರಟ ಮಾಡುತ್ತಿದ್ದೇವೆ. ಅವರು ನಿಷ್ಪಕ್ಷಪಾತವಾಗಿ ಅಭಿವೃದ್ಧಿ ಮಾಡುತ್ತಾರೆ. ಆದ್ದರಿಂದ ಟಿ.ಬಿ.ಜಯಚಂದ್ರ ಅವರನ್ನು ಸಚಿವರನ್ನಾಗಿ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಮಾಡಬೇಕು ಎಂದರು.
ಕುಂಚಿಟಿಗರ ಸಂಘದ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎಂ ರಂಗನಾಥ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕುಂಚಿಟಿಗ ಜನಾಂಗ ೩೫ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿದ್ದೇವೆ. ಆದರೂ ಯಾವುದೇ ರಾಜಕೀಯ ಪಕ್ಷ ಕುಂಚಿಟಿಗ ಸಮುದಾಯಕ್ಕೆ ಸರಿಯಾದ ಸ್ಥಾನಮಾನ ನೀಡಿಲ್ಲ. ಕುಂಚಿಟಿಗ ಜನಾಂಗದ ಟಿಬಿ ಜಯಚಂದ್ರ ಅವರು ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದೆ. ಯಾರಿಗಿಂತ ಅವರು ಕಡಿಮೆ ಇಲ್ಲ. ಅಂತಹ ರಾಜಕಾರಣಿಗೆ ಸಚಿವ ಸ್ಥಾನ ನೀಡದಿರುವುದು ಕುಂಚಿಟಿಗರಿಗೆ ಮಾಡಿದ ಅವಮಾನ. ಡಿಕೆ ಶಿವಕುಮಾರ್ ಅವರು ದಕ್ಷ ಆಡಳಿತಗಾರರಿದ್ದಾರೆ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಅವರನ್ನು ಸಿಎಂ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು.ಪತ್ರಿಕಾಗೋಷ್ಠಿಯಲ್ಲಿ ಕುಂಚಿಟಿಗರ ಸಂಘದ ಕಾರ್ಯದರ್ಶಿ ಬಿ.ಆರ್.ಜನಾರ್ಧನ್, ಖಜಾಂಚಿ ಕೆ.ಎಲ್.ಬಾಲಚಂದ್ರಪ್ಪ, ನಿರ್ದೇಶಕರುಗಳಾದ ವಿಜಯರಾಜ್, ಬಿ.ಎಂ.ರಾಧಾಕೃಷ್ಣ, ದ್ವಾರಾಳು ಪ್ರದೀಪ್, ಎಂ.ಸಿ.ರಾಘವೇಂದ್ರ, ಜಯಪ್ರಕಾಶ್, ಮಹಲಿಂಗಪ್ಪ, ಮಾಜಿ ತಾ.ಪಂ. ಸದಸ್ಯ ಪಿ.ಬಿ.ನರಸಿಂಹಯ್ಯ, ನಗರಸಭೆ ಸದಸ್ಯ ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.