ಡಿಎನ್ಎ ಟೆಸ್ಟ್ ಮಾಡಿಸಿದ್ರೆ ಕುಟಂಬ ರಾಜಕಾರಣ ಬಯಲು

| Published : Mar 28 2024, 12:46 AM IST

ಡಿಎನ್ಎ ಟೆಸ್ಟ್ ಮಾಡಿಸಿದ್ರೆ ಕುಟಂಬ ರಾಜಕಾರಣ ಬಯಲು
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಗ್ಯಾರಂಟಿ ಟಿವಿಯಲ್ಲಿದೆ. ನಮ್ಮ ಗ್ಯಾರಂಟಿ ಕೈಯಲ್ಲಿದೆ ಎಂದ ಸಚಿವ ಪ್ರಿಯಾಂಕ್, ಮೋದಿ ಸುನಾಮಿ ದಕ್ಷಿಣದಲ್ಲಿ ಎಲ್ಲೂ ಇಲ್ಲ ಎಂದರು

ಕನ್ನಡಪ್ರಭ ವಾರ್ತೆ ಕಲಬುರಗಿ

ಮೋದಿ ಕರ್ನಾಟಕಕ್ಕೆ ಬಂದಾಗೆಲ್ಲಾ ಶ್ಯಾಡೋ ಸಿಎಂ ಎಂದು ಹೇಳಿಕೆ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂತ ಇದ್ದಾರೆ ಅನ್ನೋದನ್ನು ಏಕೆ ಮರೆಯುತ್ತಿದ್ದಾರೆ ಎಂದು ಜಿಲ್ಲಾದ್ಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರು. ಮೋದಿ ಗ್ಯಾರಂಟಿ ಟಿವಿಯಲ್ಲಿದೆ. ನಮ್ಮ ಗ್ಯಾರಂಟಿ ಕೈಯಲ್ಲಿದೆ ಎಂದ ಸಚಿವ ಪ್ರಿಯಾಂಕ್, ಮೋದಿ ಸುನಾಮಿ ದಕ್ಷಿಣದಲ್ಲಿ ಎಲ್ಲೂ ಇಲ್ಲ ಎಂದರು.

ವಿಜಯೇಂದ್ರ ನಾಯಕತ್ವವನ್ನು ಅವರ ಪಕ್ಷದವರೇ ಒಪ್ಪಿಕೊಳ್ಳತ್ತಿಲ್ಲ. ಕಾಂಗ್ರೆಸ್‌ಗಿಂತ ಹೆಚ್ಚಿನ ಕುಟುಂಬ ರಾಜಕಾರಣ ಬಿಜೆಪಿಯಲ್ಲಿದೆ. ಡಿಎನ್ಎ ಟೆಸ್ಟ್ ಮಾಡಿಸಿದರೆ ಯಾರ್‍ಯಾರು ಯಾರ ಕುಟಂಬದವರು ಅನ್ನೋದು ಗೊತ್ತಾಗುತ್ತದೆ. ಹಾಗಾಗಿ, ಡಿಎನ್ಎ ಕಿಟ್ ಇಟ್ಟು ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದರು.

ಬಿಜೆಪಿಯವರು ಒಂದೇ ಕುಟುಂಬ ಎನ್ನುತ್ತಿದ್ದಾರೆ. ವಾಟ್ಸಪ್‌ ಯೂನಿವರ್ಸಿಟಿ ಅವರು ಮೋದಿಗೆ ಅವರಿಗೆ ಭಾಷಣ ಬರೆದುಕೊಡುತ್ತಾರೆ. ಅತಿ ಹೆಚ್ಚು ಭ್ರಷ್ಟಾಚಾರ ಆಗಿರೋದು ಬಿಜೆಪಿ ಅವಧಿಯಲ್ಲಿ ಎಂಬುದನ್ನು ಬಿಜೆಪಿಯವರು ಮರೆತಿದ್ದಾರೆ. ಇವರದ್ದು 40 ಪರ್ಸೆಂಟ್ ಸರ್ಕಾರ ಎನ್ನುವ ಕಾರಣಕ್ಕಾಗಿಯೇ ಬಿಜೆಪಿಯವರನ್ನು ಜನರು ಕಿತ್ತೊಗೆದಿದ್ದಾರೆ ಎಂದರು.

ಮೋದಿಯ ಅಲೆಗೆ ಹೆದರಿ ಯಾವೊಬ್ಬ ಸಚಿವರೂ ಲೋಕಸಭಾ ಚುನಾವಣೆಗೆ ನಿಲ್ಲುತ್ತಿಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇರುವವರೇ ಸಾಕಲ್ಲ, ಸಚಿವರು ಯಾಕೆ ನಿಲ್ಲಬೇಕು. ಸಚಿವರೇ ನಿಲ್ಲಬೇಕು ಅಂತ ಎಲ್ಲಿಯಾದರೂ ಇದೆಯೇ ಎಂದು ಪ್ರಶ್ನಿಸಿದರು.

ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಎಷ್ಟು ಯುವಕರಿಗೆ ಅವಕಾಸದ ಅವಕಾಶ ಮಾಡಿಕೊಟ್ಟಿದ್ದೇವೆ ಅನ್ನೋದನ್ನು ಬಿಜೆಪಿಯವರು ನೋಡಲಿ. ವಿಜಯೇಂದ್ರ ನಾಯಕತ್ವದ ಮೇಲೆಯೇ ಅಸಮಾಧಾನ ಇದೆ. ಈ ನಿಟ್ಟಿನಲ್ಲಿ ಗೋ ಬ್ಯಾಕ್ ಅಭಿಯಾನ ಈಗಾಗಲೆ ಶುರುವಾಗಿದೆ ಎಂದರು.

ನಿಮ್ಮ ಸ್ವಕ್ಷೇತ್ರದಲ್ಲಿ ಏನಾಗುತ್ತಿದೆಯೋ ಅದನ್ನು ಮೊದಲು ನೋಡಿಕೊಳ್ಳಿ ಎಂದ ಪ್ರಿಯಾಂಕ್, ನಿಮ್ಮ ಪೂಜ್ಯ ಅಪ್ಪಾಜಿಯವರ ಕ್ಷೇತ್ರದಲ್ಲಿ ಇಷ್ಟರಲ್ಲೇ ಗೋ ಬ್ಯಾಕ್ ಶುರುವಾಗುತ್ತದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಸೋಲಿನ ಭೀತಿಯಿಂದ ಸ್ಪರ್ದಿಸಲಿಲ್ಲ ಎನ್ನುವ ಆರ್.ಅಶೋಕ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್‌, ವಿಪಕ್ಷ ನಾಯಕ ಆರ್.ಅಶೋಕ ಅವರಿಗೆ ಕಾಮನ್ ಸೆನ್ಸ್ ಇಲ್ಲ ಅನ್ಸುತ್ತೆ ಎಂದರು.

ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 50 ವರ್ಷ ಎಲೆಕ್ಟೆಡ್ ಪಾಲಿಟಿಕ್ಸ ಮಾಡಿದವರು. ಅವರ ಶ್ರಮ, ಕೊಡುಗೆ ಅಪಾರವಾಗಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ನಮ್ಮ ಪಕ್ಷದ್ದು, ಮೈತ್ರಿ ಕೂಟವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಇದೆ. ಕಳೆದ ಬಾರಿಯೂ ಅವರಿಗೆ ಚುನಾವಣೆಗೆ ಆಸಕ್ತಿ ಇರಲಿಲ್ಲ. ಆಗ ಸೋನಿಯಾ ಗಾಂಧಿ, ಮನಮೋಹನ ಸಿಂಗ್ ಅವರ ಒತ್ತಡಕ್ಕೆ ಮಣಿದು ಚುನಾವಣೆಗೆ ನಿಂತಿದ್ರು. ಬಿಜೆಪಿಗೆ ಹೇಳಿ ಕೇಳಿ ಚುನಾವಣೆಗೆ ನಿಲ್ಲುವ ಅಗತ್ಯ ನಮಗಿಲ್ಲ ಎಂದರು.

ನಿಮ್ಮ ಪಕ್ಷದಲ್ಲಿ ಏನಾಗುತ್ತಿದೆ ಮೊದಲು ಆಕಡೆಗೆ ಗಮನ ಕೊಡಿ ಅಶೋಕ್, ನಿಮ್ಮ ಪಕ್ಷ ಒಂದು ಕುಟುಂಬದ ಹಿಡಿತದಲ್ಲಿದೆ, ಶುದ್ಧಿಕರಣ ಅಗತ್ಯ ಇದೆ ಅಂತ ಈಶ್ವರಪ್ಪ, ಸದಾನಂದಗೌಡ ಹೇಳ್ತಿದ್ದಾರೆ. ಯತ್ನಾಳ, ಸಿಟಿ ರವಿ, ಪ್ರತಾಪಸಿಂಹ ಅವರು ಹಿಂದೂತ್ವದ ಪರ ಹೋರಾಟ ಮಾಡಿದವರಿಗೆ ನಮ್ಮ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಅಂತಿದ್ದಾರೆ. ಇವರೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನವರು ನಾರಾಜಾಗಿ ಕೂತಿದಾರೆಂದರು.

ನಿಮ್ಮ ಸಂಸಾರದಲ್ಲಿ ಬಿರುಕು ಹುಟ್ಟಿದೆ ಮೊದಲು ಬಗೆಹರಿಸಿಕೊಳ್ಳಿ. ನಿಮ್ಮ ಸಂಸಾರ ಕಟ್ಟುವ ಕೆಲಸ ಮೊದಲು ಮಾಡಿ. ಬಿಜೆಪಿಯವರಿಗೆ ವೈಯಕ್ತಿಕ ಟಿಕೆ ಬಿಟ್ಟರೆ ಪ್ರಚಾರಕ್ಕೆ ಹೇಳಿಕೊಳ್ಳಯವ ಸಾಧನೆಗಳಿಲ್ಲ. ಈಗಲೂ ಅವರು ದೇವರು ಧರ್ಮದ ಮೇಲೆ ಚುನಾವಣೆ ಮಾಡ್ತಾರೆ ಹೊರತು ಸಾಧನೆ ಮೇಲೆ ಚುಮಾವಣೆ ಮಾಡಲ್ಲ ಎಂದು ತಿವಿದರು.

ಕಲಬುರಗಿಯಲ್ಲಿ ಚುನಾವಣೆ ನ್ಯಾಯಸಮ್ಮತವಾಗಿ ನಡೆಯುವ ಬಗ್ಗೆ ಅನುಮಾನ ಇದೆ ಎಂದ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ್ ಹೇಳಿಕೆಗೆ ಪ್ರೀಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದರು. ಚುನಾವಣಾ ಆಯೋಗ ಯಾರ ಅಂಡರ ಇದೆ ಅನ್ನೋದು ಜಾಧವಗೆ ಗೊತ್ತಿಲ್ವಾ? ಸಂವಿಧಾನಾತ್ಮಕ ಬಾಡಿ ಸಡಿಲ ಮಾಡಿ ಅಸಂವಿಧಾನಾತ್ಮಕವಾಗಿ ಇಬ್ಬರನ್ನು ನೇಮಿಸಿ ಎಲೆಕ್ಷನ್ ಕಮಿಷನರ್ ತಂದಿಟ್ಟಿದ್ದು ಬಿಜೆಪಿಯವರು, ಎಲೆಕ್ಷನ್ ಕಮಿಷನ್, ಇಡಿ, ಸಿಬಿಐ ಎಲ್ಲಾ ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಬಿಜೆಪಿ ಎಂದರು.

ಯಾವುದೇ ಕೆಲಸ ಆಗಿಲ್ಲ..‌ ನೌಕರಿ ಕೊಟ್ಟಿಲ್ಲ, ಕೇಂದ್ರ ಯೋಜನೆಗಳು ವಾಪಾಸ್ ಹೋಗಿವೆ ಅಂತ ನಿಮ್ಮ ಕಾರ್ಯಕರ್ತರು ಹೇಳ್ತಿದಾರೆ, ಉಮೇಶ ಜಾಧವ್ ಪ್ರಕಾರ ಎಲೆಕ್ಷನ್ ಕಮಿಷನಗಿಂತಾ ನಾನು ಪವರ್ ಫುಲ್ಲಾ ? ಬೋಗಸ್ ಓಟ್ ಹೇಗೆ ಮಾಡೋದು ಅನ್ನೋದು ಉಮೇಶ ಜಾಧವ ಅವರಿಗೆ ಜಾಸ್ತಿ ಗೊತ್ತಿದೆ, ಅವರೇ ಇದರಲ್ಲಿ ನಿಸ್ಸಿಮರು ಎಂದು ಖರ್ಗೆ ಮಾತಲ್ಲಿ ತಿವಿದರು.