ಸಾರಾಂಶ
ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಮುಖಂಡರು
ಕನ್ನಡಪ್ರಭ ವಾರ್ತೆ ಹಾವೇರಿಬರ ಪರಿಹಾರ ನೀಡುವಂತೆ ಆಗ್ರಹಸಿ ಜ.೨೩ರಂದು ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಅಹೋರಾತ್ರಿ ಸತ್ಯಾಗ್ರಹ ನಡೆಸಲಾಗುವುದು. ಜ.೨೫ರೊಳಗೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜ.೨೬ರ ಗಣರಾಜ್ಯೋತ್ಸವದಂದು ರೈತರೇ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ರೈತ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಬರ ಪರಿಹಾರ ನೀಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರಿಗೆ ಧ್ವ್ವಜಾರೋಹಣ ಮಾಡಲು ಬಿಡಲ್ಲ. ಹಾಗಂತ ರೈತರು ಗಣರಾಜ್ಯೋತ್ಸವದ ವಿರೋಧಿಗಳಲ್ಲ. ರೈತರೇ ಅಂದು ಧ್ವಜಾರೋಹಣ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧ್ವಜ ಹಾರಿಸಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಬರಗಾಲದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಎಕರೆಗೆ ₹೨೫ ಸಾವಿರ ಪರಿಹಾರ, ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಜ.೨೩ರಂದು ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ರೈತರು ಹಿಂದೆಂದೂ ಕಾಣದಂತಹ ಬರಗಾಲವನ್ನು ಕಂಡು, ಮೂರು ಬಾರಿ ಬಿತ್ತನೆ ಮಾಡಿ ಬೆಳೆಬಾರದಂತಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಮನನೊಂದು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಹಾಯಕ್ಕೆ ಬಾರದೆ ಲೋಕಸಭೆ ಚುನಾವಣೆಯ ಗುಂಗಿನಲ್ಲಿದ್ದಾರೆ. ಪರಿಹಾರ ಕೇಳಿದರೆ ಕೇಂದ್ರದ ಕಡೆ ರಾಜ್ಯ, ರಾಜ್ಯದ ಕಡೆ ಕೇಂದ್ರ ಸರ್ಕಾರ ಬೆರಳು ತೋರಿಸುತ್ತಾ ಕಾಲ ಕಳೆಯುತ್ತಿವೆ. ರಾಜ್ಯ ಸರ್ಕಾರವು ಕಾಟಾಚಾರಕ್ಕೆಂದು ಇತ್ತೀಚೆಗೆ ಬೆಳೆ ಪರಿಹಾರವಾಗಿ ₹೨೦೦೦ ಘೋಷಿಸಿದ್ದು, ಈವರೆಗೆ ಯಾವ ರೈತರಿಗೂ ಪರಿಹಾರ ಬಂದಿಲ್ಲ ಎಂದು ಆರೋಪಿಸಿದರು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಎನ್‌ಓಸಿ ಕೇಳುತ್ತಿರುವುದು ಸರಿಯಲ್ಲ. ಬೇರೆ ಜಿಲ್ಲೆಗಳಿಗೆ ಅನ್ವಯವಾಗದ ಕಾನೂನು ನಮ್ಮ ಜಿಲ್ಲೆಯ ರೈತರಿಗೆ ಏಕೆ? ಎಂದು ಪ್ರಶ್ನಿಸಿದರು.ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರಾಜ್ಯ ಸರ್ಕಾರವು ರೈತರಗೆ ಉಪಯೋಗವಾಗುತ್ತಿದ್ದ ಅಕ್ರಮ-ಸಕ್ರಮ ಯೋಜನೆಯನ್ನು ರದ್ದುಗೊಳಿಸಿದ್ದರಿಂದ ಅನೇಕ ರೈತರು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆಗೀಡಾಗಿದ್ದಾರೆ. ಸರ್ಕಾರ ಯೋಜನೆ ರದ್ದುಗೊಳಿಸಬೇಕಾದರೆ ಸಾರ್ವಜನಿಕರ ಅಕ್ಷೇಪಣೆ ಕರೆದು ಕಾಲಾವಕಾಶ ನೀಡಿ ರದ್ದುಗೊಳಿಸಬೇಕು. ಆದರೆ ಈ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಏಕಾಏಕಿ ಯೋಜನೆ ರದ್ದುಪಡಿಸಿದ್ದು ಖಂಡನೀಯ. ವಿದ್ಯುತ್ ಪ್ರವರ್ತಕಗಳ ಸಾಮರ್ಥ್ಯವನ್ನು ಹೆಚ್ಚು ಮಾಡಿ ಐಪಿ ಸೆಟ್ಟುಗಳಿಗೆ ಹಗಲು ಹೊತ್ತಿನಲ್ಲಿ ನಿರಂತರವಾಗಿ ವಿದ್ಯುತ್ ಪೂರೈಸುವಂತೆ ಒತ್ತಾಯ ಮಾಡಿ ಹಲವಾರು ಬಾರಿ ಪ್ರತಿಭಟಿಸಿದರೂ ಸರ್ಕಾರ ನಿರ್ಲಕ್ಷ್ಯ ತೋರಿದೆ. ಕಾರಣ ಈ ಕೂಡಲೇ ಎಚ್ಚೆತ್ತುಕೊಂಡು ಅಕ್ರಮ-ಸಕ್ರಮ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಹಗಲುಗನಸಾಗಿದೆ. ನಮ್ಮ ಜಿಲ್ಲೆಯ ರೈತರಿಗೆ ಮೂರು ಲಕ್ಷಗಳವರೆಗೆ ಶೂನ್ಯ ಬಡ್ಡಿ ಆಧಾರದ ಸಾಲ ಕೊಡುವ ಯೋಜನೆಯಿಂದ ವಂಚಿತರಾಗಿದ್ದಾರೆ. ಇತ್ತೀಚೆಗೆ ಸರ್ಕಾರ ₹೫ ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವಂತೆ ನಿರ್ದೇಶನ ನೀಡಿದರೂ, ಕೆಸಿಸಿ ಬ್ಯಾಂಕ್ ಧಾರವಾಡದವರು ಸಾಲ ನೀಡುತ್ತಿಲ್ಲ. ಸರ್ಕಾರದ ಯೋಜನೆಯು ರೈತರಿಗೆ ತಲುಪಬೇಕಾದರೆ ನಮ್ಮ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರಮುಖರಾದ ಮಾಲತೇಶ ಪೂಜಾರ, ಮಹಮ್ಮದ್ ಗೌಸ್, ದಿಳ್ಳೇಪ್ಪ ಮಣ್ಣೂರ, ಪ್ರಭುಗೌಡ ಪ್ಯಾಟಿ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟೀಲ ಇತರರು ಇದ್ದರು.