ವಿದ್ಯಾವಂತರು ಕೈಜೋಡಿಸಿದರೆ ಭಾರತವೇ ವಿಶ್ವ ಗುರು: ಡಾ.ಎಸ್.ಎನ್.ಶ್ರೀಧರ್

| Published : Aug 16 2025, 12:00 AM IST

ವಿದ್ಯಾವಂತರು ಕೈಜೋಡಿಸಿದರೆ ಭಾರತವೇ ವಿಶ್ವ ಗುರು: ಡಾ.ಎಸ್.ಎನ್.ಶ್ರೀಧರ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶವನ್ನು ಗೌರವಿಸುವ, ಮಾತಾ ಪಿತೃಗಳನ್ನು ಪೂಜಿಸುವ ವ್ಯಕ್ತಿ ಎಲ್ಲೆಡೆಯೂ ಮನ್ನಣೆಗೆ ಪಾತ್ರನಾಗುತ್ತಾನೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪ್ರತಿಯೊಬ್ಬರೂ ವಿದ್ಯಾವಂತರಾಗಿ ದೇಶದ ಪ್ರಗತಿಗೆ ಕೈಜೋಡಿಸಿದರೆ ಭಾರತ ವಿಶ್ವ ಗುರುವಾಗುತ್ತದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ್ ಅಭಿಪ್ರಾಯಪಟ್ಟರು.

ತಾಲೂಕಿನ ಬಿ.ಜಿ.ನಗರದ ಎಸಿಯು ಕ್ರೀಡಾಂಗಣದಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ,

ಅನೇಕ ರಾಷ್ಟ್ರಭಕ್ತರು ಮತ್ತು ಸ್ವಾತಂತ್ರ್ಯ ಸೇನಾನಿಗಳ ಹೋರಾಟ, ತ್ಯಾಗ, ಬಲಿದಾನದ ಪ್ರತಿಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ ಎಂದರು.

ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಶ್ರೀಮಠದ ವತಿಯಿಂದ ಕೊಟ್ಟ ಭಾರತೀಯ ಸಂಸ್ಕೃತಿ, ಸಂಸ್ಕಾರ ಬಿಂಬಿಸುವ ಅಕ್ಷರ ಜ್ಞಾನ ದಾಸೋಹ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಲಕ್ಷಾಂತರ ವಿದ್ಯಾರ್ಥಿಗಳ ವರದಾನವಾಗಿದೆ ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿದ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ ಮಾತನಾಡಿ, ದೇಶವನ್ನು ಗೌರವಿಸುವ, ಮಾತಾ ಪಿತೃಗಳನ್ನು ಪೂಜಿಸುವ ವ್ಯಕ್ತಿ ಎಲ್ಲೆಡೆಯೂ ಮನ್ನಣೆಗೆ ಪಾತ್ರನಾಗುತ್ತಾನೆ ಎಂದರು.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ ಮಾತನಾಡಿದರು. ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ತೆರೆದ ಜೀಪಿನಲ್ಲಿ ಅತಿಥಿಗಳ ಮೆರವಣಿಗೆ ನಡೆಸಿದರು.

ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆ ಮಕ್ಕಳ ಬೃಹತ್ ಬ್ಯಾಂಡ್ ಸೆಟ್, ವೀರಗಾಸೆ, ಎನ್ ಸಿಸಿ ದಳ ಕ್ರೀಡಾಂಗಣದ ಮುಖ್ಯ ವೇದಿಕೆವರೆಗೂ ನಡೆದ ಪರೇಡ್ ಎಲ್ಲರ ಗಮನ ಸೆಳೆಯಿತು. ವಿವಿ ಸಾಂಸ್ಥಿಕ ಶಾಲಾ ಕಾಲೇಜುಗಳ 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಸಂಭ್ರಮಿಸಿದರು. ನಂತರ ಸ್ವಾತಂತ್ರ್ಯೋತ್ಸವ ನೃತ್ಯಗಳು ಪ್ರದರ್ಶನಗೊಂಡು ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಪರೀಕ್ಷಾ ರಿಜಿಸ್ಟ್ರಾರ್ ಡಾ.ನಾಗರಾಜ್, ಡೀನ್ ಗಳಾದ ಡಾ.ಎಂ.ಜಿ.ಶಿವರಾಮ್, ಡಾ.ಬಿ.ರಮೇಶ್, ಡಾ.ಎ.ಟಿ.ಶಿವರಾಮು, ಡಾ.ಬಿ.ಎನ್.ಶೋಭಾ, ಡಾ.ಕೆ.ಪ್ರಶಾಂತ್, ಪ್ರೊ.ರೋಹಿತ್, ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್, ಎಲ್ಲ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಇದ್ದರು.