ಪರಿಸರ ಶುಚಿಯಾಗಿದ್ದರೆ ಆರೋಗ್ಯ ಶುಚಿ: ಸುನಂದಾ

| Published : Mar 28 2024, 12:55 AM IST

ಸಾರಾಂಶ

ಗ್ರಾಮ ನೈರ್ಮಲ್ಯ ಹಾಗೂ ಪೌಷ್ಠಿಕ ಸಮಿತಿ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳಿಗೆ ವಿಶ್ವಾಸ ಸಭೆ ತರಬೇತಿ ಶಿಬಿರ

ಕನ್ನಡಪ್ರಭ ವಾರ್ತೆ ವಾಡಿ

ನಮ್ಮ ಸುತ್ತಲಿನ ಪರಿಸರ ಹಾಗೂ ನೈರ್ಮಲ್ಯ ವ್ಯವಸ್ಥೆ ಶುಚಿಯಾಗಿದ್ದರೆ ಮಾತ್ರ ಆರೋಗ್ಯ ಶುಚಿಯಾಗಿರಲು ಪ್ರಮುಖ ಕಾರಣವಾಗುತ್ತದೆ. ಗ್ರಾಮೀಣ ಪ್ರದೇಶಲ್ಲಿ ವಾಸಿಸುವ ಜನರ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಜವಾಬ್ದಾರಿ ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲಿದೆ ಎಂದು ಚಿತ್ತಾಪುರ ತಾಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಸುನಾಂದಾ ನಾವಿ ಹೇಳಿದರು.

ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ನೈರ್ಮಲ್ಯ ಹಾಗೂ ಪೌಷ್ಠಿಕ ಸಮಿತಿ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳಿಗೆ ವಿಶ್ವಾಸ ಸಭೆ ತರಬೇತಿ ಶಿಬಿರ ಉದ್ದೇಶಿಸಿ ಮಾತನಾಡಿದರು. ಅಸಾಂಕ್ರಾಮಿಕ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆಶಾ ಕಾರ್ಯಕರ್ತೆ ಮನೆ ಮನೆ ಭೇಟಿ ನೀಡಿ ಕಫ ತಪಾಸಣೆಗೆ ಒಳಪಡಿಸಬೇಕು. ಈ ಭಾಗದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಜನರ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಾರಣಾಂತಿಕ ಕಾಯಿಲೆ ಆವರಿಸಿಕೊಂಡರೆ ವೈದ್ಯರ ಸಲಹೆ ಮೂಲಕ ಸೂಕ್ತ ಚಿಕಿತ್ಸೆ ಕೊಡಿಸಲು ಆಶಾಗಳು ಶ್ರಮಿಸಬೇಕು ಎಂದರು.

ಗ್ರಾಮೀಣ ಜನರಿಗೆ ಶುಚಿತ್ವದ ಬಗ್ಗೆ ಅರಿವು ಹಾಗೂ ಆರೋಗ್ಯ ಶಿಕ್ಷಣ ನೀಡುವ ಮೂಲಕ ನೈರ್ಮಲ್ಯದ ಅಗತ್ಯತೆ ಮನವರಿಕೆ ಮಾಡಿಕೊಡಬೇಕು. ಸ್ವಚ್ಚ ಪರಿಸರ, ವೈಯುಕ್ತಿಕ ಶುಚಿತ್ವ, ಕುಟುಂಬದ ಸ್ವಚ್ಚತೆ ಹಾಗೂ ಶೌಚಾಲಯ ಬಳಸುವಂತೆ ಜನರನ್ನು ಪ್ರೇರಿಪಿಸಬೇಕು ಎಂದು ಸಲಹೆ ಮಾಡಿದರು.

ಆಶಾ ಕಾರ್ಯಕರ್ತೆಯರ ಚಿತ್ತಾಪುರ ತಾಲೂಕು ಮೇಲ್ವಿಚಾರಕಿ ರೋಜಲಿನಿ ಮಾತನಾಡಿ, ಪ್ರತಿದಿನ ಮನೆಗಳಿಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆ ಹಳ್ಳಿ ಜನರ ಆರೋಗ್ಯ ಕಾಳಜಿ ವಹಿಸುತ್ತಿದ್ದಾರೆ. ತಾಯಿ, ಮಗುವಿನ ಆರೋಗ್ಯ ರಕ್ಷಣೆಗೆ ಮುಂದಾಳತ್ವ ವಹಿಸಬೇಕು. ಮನೆಯಲ್ಲಿ ಹೆರಿಗೆ ಮಾಡಿಸುವುದನ್ನು ತಪ್ಪಿಸುವ ಮೂಲಕ ಆಸ್ಪತ್ರೆಗೆ ಕರೆ ತರಬೇಕು. ಕ್ಷಯ ರೋಗ, ಮಾನಸಿಕ ಖಿನ್ನತೆ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಗರ್ಭಪಾತಗಳಂತ ಕಾಯಿಲೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಅಧಿಕಾರಿ ಸುಭಾಶ್ಚಂದ್ರ ಚಿಂಚನಸೂರ, ವಾಡಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೂಳಾ ಬುಳ್ಳಾ, ಆರ್‍ಕೆಎಸ್‍ಕೆ ಆಪ್ತ ಸಮಾಲೋಚಕ ಬಾಬುರಾವ ಸಿ.ಬಿ, ಆರೋಗ್ಯ ಅಧಿಕಾರಿ ವಿಶ್ವರಾಧ್ಯ ಹಿರೇಮಠ, ದೇವಿಂದ್ರಪ್ಪ, ಆರೋಗ್ಯ ಸಂರಕ್ಷಣಾ ಅಧಿಕಾರಿಗಳಾದ ಸುಧಾರಾಣಿ ದೇಸಾಯಿ, ತ್ರಿವೇಣಿ ಜಾಧವ್, ಯಸ್ತಾರಾಣಿ ಚಿಂಚನಸೂರ, ಕಿರಣ ಧನವಾಡಕರ್, ಸಮುದಾಯ ಆರೋಗ್ಯಾಧಿಕಾರಿ ಭವ್ಯಾ ಸ್ನೇಹಲತಾ, ಆಶಾ ಕಾರ್ಯಕರ್ತೆರಾದ ಮಂಜೂಳಾ ಇಂಗಳಗಿ, ಮರೆಮ್ಮ ಕೊಟಗಾರ, ನಾಗಮ್ಮ ಸೂಲಹಳ್ಳಿ, ಗೀತಾ ಕಡಬೂರ, ರೇಣುಕಾ ಬೋಮನಳ್ಳಿ, ಚನ್ನಮ್ಮ ಆಲೂರು, ಸಾವಿತ್ರಾ ಇಂಗಳಗಿ, ಶಿಬಿರದಲ್ಲಿ ಪಾಲ್ಗೊಂಡಿದ್ದರು.