‘ಎಸ್‌ಐಆರ್ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಅವರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸದಿದ್ದರೆ ಮಂಗಳವಾರ ಬೆಳಗ್ಗೆ 10 ಗಂಟೆ ನಂತರ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

‘ಎಸ್‌ಐಆರ್ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಅವರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸದಿದ್ದರೆ ಮಂಗಳವಾರ ಬೆಳಗ್ಗೆ 10 ಗಂಟೆ ನಂತರ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್ಐಆರ್‌ ಪ್ರಕ್ರಿಯೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಾ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ನಿಯೋಗದೊಂದಿಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರವು ಎಫ್‌ಐಆರ್ ಹಾಕುವ ವಿಚಾರದಲ್ಲಿ ನಡೆಸುತ್ತಿರುವ‌ ರಾಜಕೀಯ ಡ್ರಾಮಾವನ್ನು ಖಂಡಿಸಿದರು. ಇದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವೇ ನಾಚಿಕೆಗೇಡಿನ ಪ್ರದರ್ಶನ ನಡೆಸಿದೆ. ಗೂಂಡಾ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವಾಗ ಇದು ಗೂಂಡಾ ಸರ್ಕಾರವಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು.

ಕಾನೂನುಬಾಹಿರ ಬಂಧನಗಳನ್ನು ತಕ್ಷಣ ನಿಲ್ಲಿಸುವಂತೆ ಮತ್ತು ಕೇಂದ್ರ ಚುನಾವಣಾ ಆಯೋಗದಿಂದ ಸ್ಪಷ್ಟನೆ ನಿಡುವಂತೆ ಮುಖ್ಯ ಚುನಾವಣಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಫಾರಂ-7 ಸಲ್ಲಿಕೆ ಕಾನೂನುಬಾಹಿರವಲ್ಲ. ಈ ಬಗ್ಗೆ ನ್ಯಾಯಾಲಯ ಸ್ಪಷ್ಟನೆ ನೀಡಿದೆ. ಸರ್ಕಾರವು ನೈಸ್, ಬಿಡದಿ ಟೌನ್ ಶಿಪ್ ಯೋಜನೆ, ಕೆಪಿಎಸ್ಸಿ ಹಗರಣಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಈ ಡ್ರಾಮಾ ಮಾಡುತ್ತಿದೆ ಎಂದು ಟೀಕಿಸಿದರು.

ಪೊಲೀಸ್‌ ದಬ್ಬಾಳಿಕೆ ನಿಲ್ಲಿಸಲಿ:

ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಅವರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸಬೇಕು. ಪೊಲೀಸ್ ಇಲಾಖೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದು. ರಾಜ್ಯ ಸರಕಾರ ಈ ರೀತಿಯ ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸಿದರೆ ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಸರ್ಕಾರವು ಅಧಿಕಾರಿಗಳಿಗೆ ಸರಿಯಾದ ಸೂಚನೆ ನೀಡದಿದ್ದರೆ ಮತ್ತು ದಬ್ಬಾಳಿಕೆಯನ್ನು ಮುಂದುವರಿಸಿದರೆ ಮಂಗಳ‍ವಾರ ಬೆಳಗ್ಗೆ 10 ಗಂಟೆಯ ನಂತರ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

-------

-ಕೋಟ್ಸ್‌-

ಎಸ್ ಐಆರ್ ಪ್ರಕ್ರಿಯೆಗೆ ಸಂಬಂಧ ಪಟ್ಟಂತೆ ಚುನಾವಣಾ ಆಯೋಗದ ದೂರು ಇಲ್ಲದೇ ಯಾವುದೇ ಎಫ್‌ಐಆರ್ ಮಾಡಲು ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ. ಆಯೋಗ ಎಲ್ಲಿಯೂ ದೂರು ಕೊಟ್ಟಿಲ್ಲ ಎಂದು ಚುನಾವಣಾ ಆಯೋಗವೇ ತಿಳಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಎಫ್ ಐ ಆರ್ ಹಾಕುತ್ತಿರುವುದು ಕಾನೂನು ಬಾಹಿರ.

-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

----

ಫಾರ್ಮ್‌ 7 ವಿಚಾರದಲ್ಲಿ ಪೊಲೀಸರು ಅಥವಾ ಸರ್ಕಾರ ಮಧ್ಯಪ್ರವೇಶ ಮಾಡುವ ಅವಕಾಶ ಇಲ್ಲ. ಕ್ರಿಮಿನಲ್‌ ಕೇಸ್‌ ದಾಖಲಿಸಲು ಕೂಡ ಅವಕಾಶವಿಲ್ಲ. ನಿಖೆ ಮಾಡಿ ಕ್ರಮ ವಹಿಸಿ ಎಂದು ರೂಲ್‌ 20 ಪ್ರಕಾರ ಹೇಳಲಾಗಿದೆ. ರೂಲ್‌ 31 ಪ್ರಕಾರ, ಕ್ರಿಮಿನಲ್‌ ಕೇಸ್‌ ದಾಖಲಿಸಲು ಸಾಧ್ಯವಿಲ್ಲ ಹಾಗೂ ಕೇಸ್‌ ದಾಖಲಿಸಬೇಕೆಂದರೂ ಕೋರ್ಟ್‌ಗೆ ಹೋಗಬೇಕು. ಫಾರ್ಮ್‌ 7 ವಿಷಯದಲ್ಲಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಅವಕಾಶವಿಲ್ಲ.

-ಆರ್.ಅಶೋಕ್‌, ಪ್ರತಿಪಕ್ಷದ ನಾಯಕ.