ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ದೇಶಕ್ಕೆ ಅನ್ನ ಹಾಕುವ ರೈತರನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಂಡರೆ ಅಥವಾ ಮಾತನಾಡಿದರೇ ರೈತ ಸಮುದಾಯವು ಬಂಡೆದ್ದು ನಿಲ್ಲಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ ಹೇಳಿದರು.ಪಟ್ಟಣದ ಮಿನಿವಿಧಾನಸೌಧದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತ ಎಂದೂ ಸಾಲಗಾರನಲ್ಲದಾಗಿದ್ದು, ಸರ್ಕಾರವೇ ಸಾಲಗಾರವಾಗಿರುತ್ತದೆ. ರೈತ ಸಮುದಾಯಕ್ಕೆ ವಿನಾಕಾರಣ ಕಿರುಕಳ ಕೊಟ್ಟರೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರನ್ನು ಅವಮಾನಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲರವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರೈತರಿಗೆ ಸೆಡ್ಡು ಹೊಡೆದ ಅಧಿಕಾರಿಯು ಸಹಿತ ರೈತ ಸಮುದಾಯಕ್ಕೆ ಕ್ಷಮೆ ಯಾಚಿಸಬೇಕು ಅಲ್ಲಿಯವರೆಗೆ ನಮ್ಮ ರೈತ ಸಂಘಟನೆಗಳ ಪ್ರತಿಭಟನೆಯು ನಿರಂತರವಾಗಿ ಮುಂದುವರೆಯುತ್ತದೆ ಎಂದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರ ಮಾತನಾಡಿ, ತಾಲೂಕಿನಲ್ಲಿ ಬಹಳಷ್ಟು ಜನ ರೈತರು ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕು ಆಡಳಿತವು ರೈತರು ಪ್ರಾಣ ಕಳೆದುಕೊಳ್ಳವುದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಬೇಕಿದ್ದು, ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುವುದು ಮತ್ತು ಸಾಲವನ್ನು ತುಂಬಲು ಒತ್ತಾಯ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಇತ್ತೀಚೆಗೆ ರೈತರ ವಾಹನಗಳು ಕಳುವು ಆಗುತ್ತಿದ್ದು, ಪೊಲೀಸ್ ಇಲಾಖೆಯು ಸಹ ಶ್ರಮ ವಹಿಸಿ ಆರೋಪಿಗಳನ್ನು ಪತ್ತೆಹಚ್ಚಿ ಅಂತವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ ಸಂಪಗಾವಿ ಮಾತನಾಡಿ, ಕೃಷಿ ಇಲಾಖೆಯು ರೈತರ ಬೆಳೆಗೆ ಪರಿಹಾರವನ್ನು ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ರೈತರ ಜಮೀನುಗಳ ಹದ್ದುಬಸ್ತು ಮೋಜಣಿ ಪೋಡಿ ಹಾಗೂ 11 ಈ ನಕ್ಷೆ ಇತರೆ ಸರ್ವೆ ಕಾರ್ಯಗಳಲ್ಲಿ ರೈತರಿಂದ ಹೆಚ್ಚುವರಿ ಹಣದ ವಸೂಲಿಯನ್ನು ಇಲ್ಲಿನ ಅಧಿಕಾರಿಗಳು ಮಾಡುತ್ತಿರುವುದು ಕಂಡು ಬಂದಿದ್ದು, ಅಧಿಕಾರಿಗಳು ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯ ನಂತರ ರೈತರು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರವರಿಗೆ ಮನವಿ ಸಲ್ಲಿಸಿದರು. ಬೆಳಗಾವಿ ಜಿಲ್ಲಾ ಕಾರ್ಯಧ್ಯಕ್ಷ ಸಿಂಧೂರ ತೆಗ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮುತವಾಡ, ಗಂಗಮ್ಮ ವಿಭೂತಿ, ರಮಿಜ ಪತ್ತು ನಾಯ್ಕರ್, ಶಂಕರ ಬಗನಾಳ, ಶಿವಲಿಂಗಪ್ಪ ಬಿರಾದರ್ ಪಾಟೀಲ, ಶಾರದಾ ಪಾಟೀಲ, ಈರಪ್ಪ ಕಾಳಗಿ, ಸೂರ್ಯಕಾಂತ್ ಕಿತ್ತೂರ, ಶ್ರೀಕಾಂತ ಹಟ್ಟಿಹೊಳಿ ಸೇರಿದಂತೆ ಸಂಘಟನೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.