ಸಾರಾಂಶ
ಹಾನಗಲ್ಲ: ನೀರಾವರಿ ಕಾಲುವೆ ಒತ್ತುವರಿ ತೆರವು, ಕೃಷಿ ಜಮೀನಿಗೆ ದಾರಿ ಮಾಡಿ ಕೊಡುವ ವಿಷಯದಲ್ಲಿ ರೈತ ಸಂಘಟನೆಗಳು ಕೈ ಜೋಡಿಸಿದರೆ ಸಮಸ್ಯೆ ಪರಿಹಾರಕ್ಕೆ ಶಕ್ತಿ ಬರುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಶುಕ್ರವಾರ ಹಾನಗಲ್ಲಿನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಆಯೋಜಿಸಿದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಹತ್ತಿರಕ್ಕೆ ಆಡಳಿತ, ಶೀಘ್ರ ಸಮಸ್ಯೆಗಳ ಪರಿಹಾರದ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಪಾರದರ್ಶಕವಾಗಿ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಇಲ್ಲಿ ಕೈಗಾರಿಕೆಗಳಿಲ್ಲ, ಕೃಷಿ ಆಧಾರಿತ ಜೀವನ ವಿಧಾನವೇ ಇಲ್ಲಿನ ಜನರ ಜೀವನಾಡಿ. ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದಲ್ಲಿ ಉಳಿದ ಸಮಸ್ಯೆಗಳ ಪರಿಹಾರ ಆಧಿಕಾರಿಗಳ ಮಟ್ಟದಲ್ಲಿಯೇ ಪರಿಹರಿಸಿಕೊಳ್ಳಲು ಸಾಧ್ಯ. ರೈತರೇ ನೀರಾವರಿ ಕಾಲುವೆಗಳ ಒತ್ತುವರಿ ಮಾಡಿದ್ದರೆ, ರೈತರೇ ಇತರ ರೈತರಿಗೆ ದಾರಿ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಇಂತಹ ಸಮಸ್ಯೆ ಬಗೆಹರಿಸೋಣ. ಅದಕ್ಕೆ ನನ್ನ ಎಲ್ಲ ಸಹಕಾರವಿದೆ ಎಂದರು.ಏತ ನೀರಾವರಿ ಯೋಜನೆಗಳು ಸರಿಯಾಗಿ ಬಳಸದೇ ಹೋಗಿದ್ದರಿಂದ ಈಗ ಬಳಕೆಗೆ ನಿರುಪಯುಕ್ತವಾಗಿವೆ. ಸಕಾಲಿಕವಾಗಿ ಇವುಗಳ ನಿರ್ವಹಣೆಗೆ ಅಧಿಕಾರಿಗಳು, ರೈತ ಸಮುದಾಯ ಕಾಳಜಿ ವಹಿಸಬೇಕು. ಸಮಸ್ಯೆ ಬಂದಾಗ ಯೋಚಿಸುವುದಲ್ಲ. ಸಮಸ್ಯೆ ಬರದಂತೆ ಮುಂಜಾಗೃತೆ ವಹಿಸಬೇಕು. ತಾಲೂಕಿನಲ್ಲಿ ವಿದ್ಯಾರ್ಥಿ ವಸತಿ ನಿಲಯಗಳ ಸಮಸ್ಯೆ ಹೆಚ್ಚು ಇದ್ದು. ಇದರ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಶೀಘ್ರ ಪರಿಹಾರ ಸಿಗಲಿದೆ ಎಂದರು.
ಜಿಲ್ಲಾಧಿಕಾರಿ ರಘುನಂದನಮೂರ್ತಿ ಮಾತನಾಡಿ, ರೈತರ ದಾರಿಯ ವಿಷಯದಲ್ಲಿ ಕಾನೂನು ವ್ಯಾಪ್ತಿ ಬಿಟ್ಟು ಅಧಿಕಾರಿಗಳಿಂದ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲರೂ ಸಹಕಾರ ನೀಡಿದರೆ ಅಧಿಕಾರಿಗಳು ಸಹಕರಿಸಬಹುದು. ಇದು ಕೇವಲ ಹಾನಗಲ್ಲ ಸಮಸ್ಯೆ ಅಲ್ಲ. ಇಡೀ ರಾಜ್ಯದಲ್ಲಿ ಇಂತಹ ಸಮಸ್ಯೆಗಳಿವೆ. ಅದಕ್ಕೆ ಕೃಷಿಕರು ಸಹಕಾರ ಅತ್ಯಂತ ಮುಖ್ಯ ಎಂದರು.ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಜಿಲ್ಲಾ ಪೊಲೀಸ್ ವರಿಷ್ಠ ಆಂಶುಕುಮಾರ, ಜಿಪಂ ಉಪಕಾರ್ಯದರ್ಶಿ ಎಸ್.ಪಿ. ಮಳ್ಳಳ್ಳಿ, ಸವಣೂರು ಉಪವಿಭಾಗಾಧಿಕಾರಿ ಮಹಮ್ಮದ ಖಿಜರ, ತಹಸೀಲ್ದಾರ್ ರೇಣುಕಮ್ಮ, ಪುರಸಭೆ ಸದಸ್ಯ ವಿಕಾಸ ನಿಂಗೋಜಿ, ಪರಶುರಾಮ ಖಂಡೂನವರ, ಕುರ್ಷಿದ ಅಹಮ್ಮದ ಹುಲ್ಲತ್ತಿ ಮೊದಲಾದವರು ವೇದಿಕೆಯಲ್ಲಿದ್ದರು.