ಬೆಳ್ಳೂರಿನಲ್ಲಿ ನಡೆಯುತ್ತಿರುವ 10ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ಕೃಷಿ ಗೋಷ್ಠಿಯಲ್ಲಿ ಸಾವಯವ ಕೃಷಿಯ ಅಗತ್ಯತೆ ಮತ್ತು ಅನಿವಾರ್ಯತೆಗಳ ಬಗ್ಗೆ ಉಪನ್ಯಾಶ ನೀಡಿ ಮಾತನಾಡಿ, ಕೃಷಿ ಮೇಲೆ ಆಹಾರ, ಆಹಾರದ ಮೇಲೆ ಆರೋಗ್ಯ, ಆರೋಗ್ಯದ ಮೇಲೆ ಸಮಾಜ ಅವಲಂಬಿತವಾಗಿದೆ.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ರೈತರು ಕೃಷಿ ಚಟುವಟಿಕೆಗಳನ್ನು ನಿಲ್ಲಿಸಿದರೆ ಯಾರೂ ಬದುಕಲು ಸಾಧ್ಯವಿಲ್ಲ ಎಂದು ಕೃಷಿಕ ಕೊನೋಡಿ ಗಣೇಶ್ ಹೇಳಿದರು.ಬೆಳ್ಳೂರಿನಲ್ಲಿ ನಡೆಯುತ್ತಿರುವ 10ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ಕೃಷಿ ಗೋಷ್ಠಿಯಲ್ಲಿ ಸಾವಯವ ಕೃಷಿಯ ಅಗತ್ಯತೆ ಮತ್ತು ಅನಿವಾರ್ಯತೆಗಳ ಬಗ್ಗೆ ಉಪನ್ಯಾಶ ನೀಡಿ ಮಾತನಾಡಿ, ಕೃಷಿ ಮೇಲೆ ಆಹಾರ, ಆಹಾರದ ಮೇಲೆ ಆರೋಗ್ಯ, ಆರೋಗ್ಯದ ಮೇಲೆ ಸಮಾಜ ಅವಲಂಬಿತವಾಗಿದೆ. ಪ್ರಸ್ತುತ ದಿನಗಳಲ್ಲಿ ರಾಸಾಯನಿಕವನ್ನು ಹೆಚ್ಚಾಗಿ ಬಳಸಿ ಕೃಷಿಯನ್ನು ಹಾಳು ಮಾಡುತ್ತಿದ್ದೇವೆ. ರೈತರು ಮನಸ್ಸು ಮಾಡಿದರೆ ಪರಿಸರವನ್ನು ಉಳಿಸಲೂಬಹುದು, ಪರಿಸರವನ್ನು ರಕ್ಷಿಸಲೂ ಬಹುದು ಎಂದು ಅಭಿಪ್ರಾಯಪಟ್ಟರು.
ಯಾವುದೇ ಒಂದು ಇಲಾಖೆಯಿಂದ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯವಿಲ್ಲ. ಕೇವಲ ಸಾವಯವ ಕೃಷಿಯನ್ನು ಪಾಲಿಸಿದರೆ ಸಾಲದು, ಸಾವಯವ ಬದುಕು, ಜೀವನವನ್ನು ನಡೆಸಬೇಕು. ಸಾವಯವ ಅಡುಗೆ ಮನೆಯನ್ನು ನಿರ್ಮಾಣ ಮಾಡಬೇಕು. ನಾವು ಎಷ್ಟು ವೈಭವಕ್ಕೆ ಹೋಗುತ್ತೇವೆಯೋ ಅಷ್ಟು ಪರಿಸರ ಹಾಳು ಮಾಡುತ್ತೇವೆ. ಕೃಷಿಯಲ್ಲಿ ವೈವಿಧ್ಯತೆಯನ್ನು ತರಬೇಕು ಎಂದು ಹೇಳಿದರು.ಯಾವುದೇ ಕಾರಣಕ್ಕೂ ರಾಸಾಯನಿಕವನ್ನು ಬಳಸಬೇಡಿ. ಒಂದೇ ಬೆಳೆಯನ್ನು ಬೆಳೆಯದೆ, ಅದರ ಜೊತೆಯಲ್ಲಿ ಪರ್ಯಾಯವಾದ, ಹಾಲಿ ಇರುವ ಬೆಳೆಗೆ ಪೂರಕವಾದ ಬೆಳೆಗಳನ್ನು ಬೆಳೆಯಬೇಕು. ಕೃಷಿಗೆ, ಆರೋಗ್ಯಕ್ಕೆ ಪೂರಕವಾದ ಗೋವುಗಳನ್ನು ಸಾಕಬೇಕು. ನಮ್ಮ ಜೀವನಕ್ಕೆ ಪೂರಕವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಸಾವಯವ ಪದಾರ್ಥಗಳನ್ನು ಹುಡುಕಿಕೊಂಡು ಹೋಗುವ ಸಮಯ ಶುರುವಾಗಿದೆ ಎಂದರು.
ಶಿವಮೊಗ್ಗ ಭದ್ರಾ ಕಾಡಾ ಮಾಜಿ ಅಧ್ಯಕ್ಷೆ ಪವಿತ್ರಾರಾಮಯ್ಯ ಮಾತನಾಡಿ, ಹಿಂದೆ ರೈತರು, ಕೂಲಿ ಕಾರ್ಮಿಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತಿದ್ದರು. ಯಾವುದೇ ಭೇದ, ಭಾವಗಳಿರಲಿಲ್ಲ. ಈಗ 40 ಎಕರೆಗಟ್ಟಲೇ ತೋಟವಿದ್ದರೂ ರೈತರ ಮಕ್ಕಳನ್ನು ಹೆಣ್ಣು ಮಕ್ಕಳು ಮದುವೆ ಆಗುತ್ತಿಲ್ಲ. ದೇಶದ ಸೈನಿಕ, ರೈತರನ್ನು ಗೌರವಿಸಬೇಕು. ಅನ್ನ, ಬಟ್ಟೆ, ಮಾಂಸ,ತರಕಾರಿ ಕೊಟ್ಟ ಕೀರ್ತಿ ರೈತರಿಗೆ ಸಲ್ಲುತ್ತದೆ. ಆದರೆ, ರೈತರು ಈಗ ತಲೆ ತಗ್ಗಿಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ರೈತರ ಬಗ್ಗೆ ವಿಧಾನಸಭೆಯಲ್ಲಿ ಯಾವುದೇ ಚರ್ಚೆಗಳಾಗುತ್ತಿಲ್ಲ. ಅವರ ಪರವಾಗಿ ಧ್ವನಿ ಎತ್ತುವವರಿಲ್ಲದಂತಾಗಿದೆ. ಎಂ.ಕೆ.ಸುಂದರೇಶ್, ನಂಜುಂಡಸ್ವಾಮಿಯವರ ಅಂತಹ ರೈತ ಪರ ಹೋರಾಟಗಳು ರೈತರಿಗೆ ಧೈರ್ಯ ತುಂಬುತ್ತಿವೆ. ಮಲೆನಾಡು ಭಾಗದಲ್ಲಿ ರೈತರು ಎಲೆ ಚುಕ್ಕಿ ರೋಗದಿಂದಾಗಿ ತತ್ತರಿಸಿದ್ದಾರೆ. ಕರೊನಾ ಸಂದರ್ಭದಲ್ಲಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡರೂ ಕೂಡ ರೈತರ ಕೃಷಿ ಚಟುವಟಿಕೆಗಳ ಮಾತ್ರ ಸ್ಥಗಿತಗೊಳ್ಳಲಿಲ್ಲ. ರೈತರಿಲ್ಲದೆ ದೇಶವಿಲ್ಲ. ರೈತರನ್ನು ಎಲ್ಲರೂ ಗೌರವಿಸಬೇಕೆಂದರು.
ಗ್ರೀನ್ ಬಯೋಟೆಕ್ ಉದ್ಯಮಿ ನವೀನ್ ಲಾಯ್ಡ್ ಮಿಸ್ಕತ್ ಮಾತನಾಡಿದರು. ಕೃಷಿ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಮೂಡಬಾಗಿಲಿನ ಶ್ರೀಕಾಂತ್ ಮಾತನಾಡಿದರು. ವೇದಿಕೆಯಲ್ಲಿ ಎಲ್ಲಾ ಅತಿಥಿಗಳನ್ನೂ ಅಭಿನಂದಿಸಲಾಯಿತು.ಪಿಸಿಎಆರ್‌ಡಿ ಬ್ಯಾಂಕಿನ ಮಾಜಿ ನಿರ್ದೇಶಕ ಎಸ್.ಎಸ್.ಶಾಂತಕುಮಾರ್, ಬಾಳೆಹೊನ್ನೂರು ಕೋಕಿಲಮ್ಮ, ಕಲಾವಿದ ತುಪ್ಪೂರುಮಂಜುನಾಥ್, ಪ್ರಚಾರ ಸಮಿತಿ ಸುಬೋದ್, ಬಿ.ಟಿ.ರವಿ, ವಾಣಿನರೇಂದ್ರ,ಎ.ಬಿ.ಸುರೇಶ್, ಮಂಜಿನಕೊಪ್ಪಪ್ರಾಣೇಶ್, ಸುನಿತಾಜೋಸ್, ಸುಧೀ, ಶ್ರೀನಿವಾಸ್ ನಲ್ಲೂರು, ಮಂಜು.ಎನ್.ಗೌಡ ಮತ್ತಿತರರು ಹಾಜರಿರಿದ್ದರು.