ಅರಣ್ಯ ಹಾಳಾದರೆ ಬದುಕು ನಶ್ವರ: ಅನಿತಾ ದೊಡ್ಮನಿ

| Published : Mar 23 2024, 01:02 AM IST

ಸಾರಾಂಶ

ಚವಡಾಪುರದಲ್ಲಿ ಇಂಚರ ಸ್ನೇಹಜೀವಿಗಳ ಬಳಗದ ವತಿಯಿಂದ ಆಯೋಜಿಸಿದ್ದ ವಿಶ್ವ ಅರಣ್ಯ ದಿನ, ಜಲ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅನಿತಾ ದೊಡ್ಮನಿ, ರಾಣಿ ಬುಕ್ಕೆಗಾರ ಕಳವಳ ವ್ಯಕ್ತ ಪಡಿಸಿದರು.

ಚವಡಾಪುರ: ಗಿಡ, ಮರ, ನದಿ ಹರಿ ತೊರೆಗಳು ನಮ್ಮ ನಿತ್ಯ ಬೇಡಿಕೆಗಳಾದ ನೀರು, ಆಮ್ಲಜನಕ ಪೂರೈಕೆ ಮಾಡುತ್ತಿವೆ. ಅವುಗಳಿರುವ ಅರಣ್ಯ ಹಾಳಾದರೆ ಬದುಕೇ ನಶ್ವರವಾಗಲಿದೆ ಎಂದು ಇಂಚರ ಸ್ನೇಹಜೀವಿಗಳ ಬಳಗದ ಅನಿತಾ ದೊಡ್ಮನಿ, ರಾಣಿ ಬುಕ್ಕೆಗಾರ ಕಳವಳ ವ್ಯಕ್ತ ಪಡಿಸಿದರು.

ಪಟ್ಟಣದಲ್ಲಿ ಇಂಚರ ಸ್ನೇಹಜೀವಿಗಳ ಬಳಗದ ವತಿಯಿಂದ ಆಯೋಜಿಸಿದ್ದ ವಿಶ್ವ ಅರಣ್ಯ ದಿನ, ಜಲ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದುರಾಸೆಗೆ ನಿತ್ಯ ಕಾಡು ನಾಶ ಮಾಡುತ್ತಿದ್ದೇವೆ. ನಗರೀಕರಣ, ಕೈಗಾರೀಕರಣದಿಂದಾಗಿ ಅರಣ್ಯ ಸಂಪತ್ತು ನಶಿಸಿ ಹೋಗುತ್ತಿದೆ. ಹೀಗಾಗಿ ಮಳೆಗಾಲ ಕಡಿಮೆಯಾಗುತ್ತಿದೆ. ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಗಿಡ, ಮರಗಳಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಪಾತಾಳ ಸೇರಿರುವ ಅಂತರ್ಜಲ ಪುನಶ್ಚೇತನವಾಗಲು ನಾವೆಲ್ಲರೂ ಗಿಡಮರಗಳನ್ನು ನೆಟ್ಟು ಪೋಷಣೆ ಮಾಡಬೇಕು. ಇಲ್ಲದಿದ್ದರೆ ಬಹಳ ಭೀಕರ ದಿನಗಳನ್ನು ನಾವು ಎಸುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಬಳಗದ ವತಿಯಿಂದ ವಿವಿಧ ಸ್ತ್ರೀಶಕ್ತಿ ಸಂಘಗಳಿಗೆ ನೀರು ಮತ್ತು ಅರಣ್ಯದ ಮಹತ್ವದ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಚೈತ್ರಾ ಮ್ಯಾಕೇರಿ, ಅಶ್ವಿನಿ ಗುಣಾರಿ, ಕನ್ಯಾಕುಮಾರಿ, ಶ್ರೀದೇವಿ ಗುಣಾರಿ ಸೇರಿದಂತೆ ಮಹಿಳಾ ಸಂಘಗಳ ಸದಸ್ಯರು ಇದ್ದರು.