ಸಾರಾಂಶ
ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ವೃತ್ತ ನಿರೀಕ್ಷಕ ಶ್ರೀಕಾಂತ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಜೂಜುಗಾರಿಕೆ, ಅಕ್ರಮ ಮರಳು ದಂದೆ, ಅಕ್ರಮ ಬಡ್ಡಿವಸೂಲಿ ದಂದೆ, ಅನೈತಿಕ ಚಟುವಟಿಕೆ, ಹೆಣ್ಣು ಮಕ್ಕಳಿಗೆ ಕಿರುಕುಳ ಸೇರಿದಂತೆ ಇತ್ಯಾದಿ ಅಕ್ರಮ ಕೃತ್ಯಗಳಲ್ಲಿ ತೊಡಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ಬಗ್ಗೆ ಮಾಹಿತಿ ನೀಡಿದಲ್ಲಿ ಅವರ ಹೆಸರು ಗೌಪ್ಯವಾಗಿರಿಸಿ, ಕಠಿಣ ಕ್ರಮವಹಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ ಎಂದು ವೃತ್ತ ನಿರೀಕ್ಷಕ ಶ್ರೀಕಾಂತ್ ಹೇಳಿದರು.ತಾಲೂಕಿನ ಕುಂತೂರು ವ್ಯಾಪ್ತಿಯಲ್ಲಿ ಭಾನುವಾರ ಆಯೋಜಿಸಿದ್ದ ಜನಸಂಪರ್ಕಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 112 ಗೆ ಕರೆ ಮಾಡಿ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದರೆ ನೀಡಿದವರ ಹೆಸರು ಇಲಾಖೆ ಗೌಪ್ಯವಾಗಿರಿಸಲಿದೆ. ಯಾವುದೇ ಮಕ್ಕಳು ಅಥವಾ ಮಹಿಳೆಯರು ಯಾವುದೇ ಕಾರಣಗಳಿಗಾಗಿ ಮನೆ ಬಿಟ್ಟು ತೆರಳಿದರೆ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ಈ ರೀತಿ ಹಳ್ಳಿಗಳಿಂದ ಮನೆ ಬಿಟ್ಟು ಬರುವವರನ್ನು ಗುರಿಯನ್ನಾಗಿರಿಸಿ ಕೆಲಸ ಕೊಡಿಸುವ ನೆಪ ಹೇಳಿ ನಿಮ್ಮನ್ನು ವೇಶ್ಯಾವಾಟಿಕೆಗೆ, ಭಿಕ್ಷಾಟನೆಗೆ, ಅಂಗಾಂಗ ಮಾರಾಟ ಸೇರಿದಂತೆ ಹಲವು ಜಾಲಗಳಿಗೆ ಬಳಸಿಕೊಳ್ಳುವ ದುಷ್ಟ ಅಂತರ್‌ಜಾಲಗಳ ತಂಡವಿದ್ದು, ಈಬಗ್ಗೆ ಮಹಿಳೆಯರು, ಮಕ್ಕಳು ಜಾಗೃತರಾಗಬೇಕು, ಎಲ್ಲಿಗೆ ತೆರಳಿದರೂ ನಿಮ್ಮ ಪೋಷಕರು, ಮನೆಯವರಿಗೆ ಮಾಹಿತಿ ನೀಡಬೇಕು, ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಥವಾ ಇತರೆ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿಯ ನೆಪದಲ್ಲಿ ಕಿರುಕುಳ, ಮಾನಸಿಕ ಹಿಂಸೆ ಮತ್ತು ದೌರ್ಜನ್ಯದಂತಹ ಅಮಾನವೀಯ ಘಟನೆಗಳು ನಿಮ್ಮ ವ್ಯಾಪ್ತಿಯಲ್ಲಿ ಕಂಡು ಬಂದಲ್ಲಿ ನಮಗೆ ಕರೆ ಮಾಡಿ ತಿಳಿಸಿದಲ್ಲಿ ಕಾನೂನು ಕ್ರಮಜರುಗಿಸಲಾಗುವುದು, ಕಿರುಕುಳಕ್ಕೆ ಒಳಗಾದವರು ಪೊಲೀಸರ ಬಳಿ ದೂರು ದಾಖಲಿಸಬಹುದು, ಅಂಥವರಿಗೆ ಈ ಹೊಸ ಕಾನೂನಿನಡಿ ಹೆಚ್ಚಿನ ರಕ್ಷಣೆ ಇಲಾಖೆ ಬದ್ದವಾಗಿದೆ ಎಂದರು. ಮಾಂಬಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಕರಿಬಸಪ್ಪ ಮಾತನಾಡಿ, ಜನಸಪರ್ಕ ಸಭೆಗಳ ಉದ್ದೇಶಗಳನ್ನು ಈ ಭಾಗದ ಜನತೆ ಅರಿತು ಬಗೆಹರಿಸಿಕೊಳ್ಳುವಂತಾಗಬೇಕು, ಈ ಭಾಗದಲ್ಲಿ ಅನೇಕ ಸಮಸ್ಯೆಗಳನ್ನು ಇಲಾಖೆ ಗಮನಕ್ಕೆ ತಂದರೆ ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದರು. ಅಲ್ಲದೆ ಅನೇಕ ದಂದೆಗಳಲ್ಲಿ ನಿಮ್ಮನ್ನು ವಂಚಿಸುವ ಸಾಧ್ಯತೆ ಇದ್ದು ಜಾಗೃತರಾಗಬೇಕು. ಹಣ ದುಪ್ಪಟ್ಟು ಮಾಡುವ ಹಾಗೂ ರೈಸ್ ಪುಲ್ಲಿಂಗ್, ಬಂಗಾರ ಪಾಲಿಶ್ ಮಾಡುತ್ತೆವೆ ಎನ್ನುವವರ ಬಗ್ಗೆ ನಾಗರಿಕರು ಜಾಗೃತರಾಗಬೇಕು. ಫಿಲಂನಲ್ಲಿ ಅವಕಾಶ ಕೊಡಿಸುತ್ತೇವೆ ಎಂದು ವಂಚಿಸುವವರ ತಂಡವಿದ್ದು ಎಚ್ಚರ ವಹಿಸಬೇಕು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಇಲಾಖೆಗೆ ದೂರು ನೀಡಬೇಕು, ಇಲ್ಲವೆ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತರುವ ಕೆಲಸ ಮಾಡಿ, ಇಲಾಖೆ ಜೊತೆ ಕೈಜೋಡಿಸಿ ಎಂದು ಮನವಿ ಮಾಡಿದರು.