ಭಾರತದಲ್ಲಿ ಹಿಂದೂಗಳು ಒಂದಾಗದಿದ್ದರೆ ದೇಶವೂ ಉಳಿಯುವದಿಲ್ಲ, ಸಂವಿಧಾನವೂ ಉಳಿಯುವದಿಲ್ಲ. ಈ ಬಗ್ಗೆ ದೇಶದ ಹಿಂದೂಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಇಂಡಿ

ಭಾರತದಲ್ಲಿ ಹಿಂದೂಗಳು ಒಂದಾಗದಿದ್ದರೆ ದೇಶವೂ ಉಳಿಯುವದಿಲ್ಲ, ಸಂವಿಧಾನವೂ ಉಳಿಯುವದಿಲ್ಲ. ಈ ಬಗ್ಗೆ ದೇಶದ ಹಿಂದೂಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಶಿರಶ್ಯಾಡ ಶಾಖಾ ಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಡ ಮಕ್ಕಳ ಶಿಕ್ಷಣ ಉಚಿತ ಪ್ರಸಾದ ನಿಲಯದ ಹೊಸ್ತಿಲ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿರುವ ಹಿಂದೂ ಮಠ ಮಾನ್ಯಗಳು ಕೇವಲ ವೀರಶೈವ- ಲಿಂಗಾಯತ ಮಕ್ಕಳಿಗಷ್ಟೇ ಶಿಕ್ಷಣ ನೀಡಿಲ್ಲ. ಅಲ್ಲಿ ಮುಸ್ಲಿಂ, ಕಾಡು ಕುರುಬರು ಸೇರಿದಂತೆ ಎಲ್ಲಾ ಸಮುದಾಯದ ಮಕ್ಕಳಿಗೂ ಅವಕಾಶ ಮಾಡಿಕೊಡಲಾಗಿದೆ. ಸನಾತನ ಹಿಂದೂ ಧರ್ಮದಲ್ಲಿ ದಲಿತ ಸಮದಾಯಕ್ಕೆ ಅನ್ಯಾಯವಾಗಿರುವುದು ಸತ್ಯ, ಅದನ್ನು ಸರಿಪಡಿಸಿಕೊಳ್ಳುವ ಕಾಲ ಬಂದಿದೆ. ಕಾರಣ ದೇಶದ ಎಲ್ಲರೂ ಒಗ್ಗಟ್ಟಾಗಬೇಕು. ದೇಶ ಮತ್ತು ಸಂವಿಧಾನ ಉಳಿಸಿಕೊಳ್ಳಲು ಸಹಕರಿಸಬೇಕೆಂದು ಕರೆ ನೀಡಿದರು.

ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ಅವೆರಡೂ ಒಂದೇ. ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಎಲ್ಲರೂ ನಡೆದುಕೊಳ್ಳುತ್ತಾರೆ. ಬಸವಣ್ಣ ಕೇವಲ ಸನಾತನ ಧರ್ಮದಲ್ಲಿರುವ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎನ್ನುವುದನ್ನು ಮರೆಯಬಾರದು. ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ. ಕೆಲವು ದುಷ್ಟ ಶಕ್ತಿಗಳು ದೇಶದಲ್ಲಿಯ ಪಂಚ ಪೀಠಗಳು ಬೇರೆ, ಇನ್ನುಳಿದ ಮಠಗಳು ಬೇರೆ ಬೇರೆ ಎಂದು ಹೇಳಿ ಸನಾತನ ಧರ್ಮದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಸಮುದಾಯ ಒಡೆದು ಆಳುವ ನೀತಿ ಅನುಸರಿಸುತ್ತಿವೆ. ದಲಿತರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಡಾ.ಬಿ.ಆರ್. ಅಂಬೇಡ್ಕರರು ದೇಶ ಒಡೆಯುವ ಮುನ್ನ ಮುಸ್ಮಿಂ ಸಮುದಾಯವನ್ನು ಪಾಕಿಸ್ತಾನಕ್ಕೆ ಕಳುಹಿಸಿ, ಅಲ್ಲಿದ್ದ ಹಿಂದೂಗಳನ್ನು ಭಾರತಕ್ಕೆ ಕರೆ ತನ್ನಿ, ಆಗ ಮಾತ್ರ ದೇಶಕ್ಕೆ ಕ್ಷೇಮ ಎಂದು ಎಚ್ಚರಿಕೆ ನೀಡಿದ್ದರು. ಅದು ಸತ್ಯವಾದ ಮಾತು. ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸುವದು ಸಾಧ್ಯವಿಲ್ಲ ಎನ್ನುವದನ್ನು ಸನಾತನ ಧರ್ಮೀಯರು ಅರ್ಥ ಮಾಡಿಕೊಳ್ಳಬೇಕು ಎಂದರು. ನಾನು ಸತ್ಯ ಮಾತಾಡಿದ್ದಕ್ಕೆ ನನ್ನ ಮೇಲೆ 79 ಕೇಸ್ ಗಳನ್ನು ದಾಖಲಿಸಿದ್ದಾರೆ. ಅವಕ್ಕೆಲ್ಲಾ ಕೋರ್ಟ್‌ ಅನುಮತಿ ನೀಡಿಲ್ಲ. ಭಾರತವನ್ನು ಬಂಗ್ಲಾ ದೇಶದಂತಾಗಲು ಬಿಡಬೇಡಿ. ಸನಾತನ ಧರ್ಮೀಯರು ಒಂದಾಗದಿದ್ದರೆ ಉಳಿಗಾಲವಿಲ್ಲ ಎನ್ನುವದನ್ನು ಅರಿತುಕೊಳ್ಳಬೇಕು ಎಂದರು.

ಮಡಿವಾಳೇಶ್ವರ ಮಠದ ರುದ್ರಮುನಿ ಶಿವಾಚಾರ್ಯರು ಪ್ರವಚನ ನೀಡಿ, ಶಾಸಕರು ಪ್ರಾಮಾಣಿಕರಾಗಬೇಕು. ಸಮಾಜ ಮುನ್ನಡೆಸುವ ಜವಾಬ್ದಾರಿ ಅವರ ಮೇಲಿದೆ. ಎಲ್ಲರನ್ನೂ ಒಗೂಡಿಸವ ಕೆಲಸ ಅವರು ಮಾಡಬೇಕಿದೆ ಎಂದರು. ಅದೃಷ್ಯಪ್ಪ ವಾಲಿ, ದಯಾಸಾಗರ ಪಾಟೀಲ ಮಾತನಾಡಿದರು. ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಾಘವೇಂದ್ರ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ಮುರುಘೇಂದ್ರ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು, ಒಡೆಯರ ರಾಜೇಂದ್ರ ಶಿವಾಚಾರ್ಯರು, ರಾಮಲಿಂಗಯ್ಯ ಸ್ವಾಮೀಜಿ, ಉದ್ದಿಮೆದಾರ ಅಶೋಕಗೌಡ ಬಿರಾದಾರ, ಜಗದೀಶ ಕ್ಷತ್ರಿ, ಅನಿಲಪ್ರಸಾದ ಏಳಗಿ, ರವಿಗೌಡ ಪಾಟೀಲ ಇದ್ದರು. ಅದೃಷ್ಯಪ್ಪ ವಾಲಿ ಮತ್ತು ಯಶವಂತಗೌಡ ಬಿರಾದಾರ ನಿರೂಪಿಸಿದರು.