ಧಾರವಾಡ:

ಪ್ರಸ್ತುತ ಇಡೀ ಭಾರತ ಹಿಂದೂಗಳದ್ದು ಎನ್ನುವ ಹಾಗಿಲ್ಲ. ಇಲ್ಲಿ ಹಿಂದೂಗಳ ಅಸ್ತಿತ್ವ ಕ್ರಮೇಣ ಕಡಿಮೆಯಾಗುತ್ತಿದ್ದು ಇನ್ನಾದರೂ ನಿದ್ರಾವಸ್ಥೆಯಿಂದ ಎದ್ದು ಜಾಗೃತರಾಗಬೇಕು ಎಂದು ದ್ವಾರಪುರದ ಪರಮಾತ್ಮ ಮಹಾರಾಜರು ಹೇಳಿದರು.

ಇಲ್ಲಿಯ ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಹಿಂದೂ ಶಕ್ತಿ ಸಮ್ಮೇಳನದ ಸಾನ್ನಿಧ್ಯ ವಹಿಸಿದ್ದ ಅವರು, ದೇಶದ 20 ರಾಜ್ಯಗಳಲ್ಲಿ ಮಾತ್ರ ಹಿಂದೂಗಳಿದ್ದಾರೆ. ನಮ್ಮ ದೇಶ ಎಲ್ಲಿಗೆ ತಲುಪುತ್ತಿದೆ? ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಗಂಡಾಂತರ ಬರುತ್ತದೆಂದು ಎಚ್ಚರಿಸಿದರು. ಮುಸ್ಲಿಮರಿಗೆ ಪ್ರಪಂಚದಲ್ಲಿ 52 ದೇಶಗಳಿವೆ. ಕ್ರಿಶ್ಚಿಯನ್‌ರಿಗೆ 70ಕ್ಕೂ ಹೆಚ್ಚು ದೇಶಗಳಿವೆ. ಆದರೆ, ಹಿಂದೂಗಳಿಗೆ ದೇಶವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕವೂ ಹಿಂದೂಗಳದ್ದಲ್ಲ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು.

ಮುಖ್ಯ ಭಾಷಣಕಾರ ಸಹಪ್ರಾಧ್ಯಾಪಕ ಡಾ. ಮಲ್ಲಪ್ಪ ಬಂಡಿ ಮಾತನಾಡಿ, ಸಂಘದ ಧ್ಯೇಯದ ಸಾಕಾರಕ್ಕಾಗಿ ದೇಶಾದ್ಯಂತ ಲಕ್ಷ-ಲಕ್ಷ ಹಿಂದೂ ಸಮ್ಮೇಳನಗಳು ಸಂಘಟಿತವಾಗುತ್ತಿವೆ. ಇದರಿಂದ ಸಮಸ್ತ ಹಿಂದೂ ಸಮಾಜ ಒಂದಾಗುವುದೇ ಪ್ರಮುಖ ಉದ್ದೇಶ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ. ಸಂಗಮೇಶ ಸವದತ್ತಿಮಠ ಮಾತನಾಡಿ, ದೇಶದಲ್ಲಿ ಹಿಂದೂ ಸಂಸ್ಕೃತಿಯ ಅಪಾರ ಸಂಪತ್ತು ಇದೆ. ಅದು ಈಗಲೂ ಸಹ ಹಳ್ಳಿಗಳಲ್ಲಿ ಸಂಸ್ಕೃತಿಯ ಬೇರು ಬಿಟ್ಟು ಬೆಳೆದುಕೊಂಡಿದೆ. ವಿದೇಶಿಗರೂ ಸಹ ನಮ್ಮ ಸಂಸ್ಕೃತಿಗೆ ಮಾರು ಹೋಗಿ ಹಿಂದೂ ಧರ್ಮದ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದಾರೆ. ಹಿಂದೂ ಧರ್ಮ ವಿಶ್ವದಲ್ಲಿಯೇ ಶ್ರೇಷ್ಠವಾದ ಧರ್ಮವಾಗಿದೆ. ಈಗ ಕಲುಷಿತ ವಾತಾವರಣ ನಿರ್ಮಾಣವಾಗಿದ್ದರಿಂದ ಹಿಂದೂ ಧರ್ಮದ ಸಂಘಟನೆ ಮಾಡುವುದು ಅತ್ಯಗತ್ಯ ಎಂದರು.


ಸಮ್ಮೇಳನದ ಅಂಗವಾಗಿ ಶೋಭಾಯಾತ್ರೆ ನಡೆಯಿತು. ಸಮಿತಿ ಅಧ್ಯಕ್ಷ ಜಿ.ಜಿ. ಹಿರೇಮಠ ಮಾತನಾಡಿದರು. ಸಂಘಟಕರಾದ ಬಾಳೇಶ ಹುಣಶ್ಯಾಳ, ಪ್ರಕಾಶ ಬಾಳಿಕಾಯಿ, ಎಂ.ಐ. ಕಳ್ಳಿಗುಡ್ಡ ಇದ್ದರು.