ಕನ್ನಡಪ್ರಭ ವಾರ್ತೆ ಕುಶಾಲನಗರ
ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಪ್ರಕರಣ ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಬೃಹತ್ ಜನಾಂದೋಲನ ಜಾಗೃತಿ ಜಾಥಾ ನಡೆಯಿತು.ಕುಶಾಲನಗರದ ವಿವಿಧ ಸಂಘಸಂಸ್ಥೆಗಳು, ವಿವಿಧ ಸಮುದಾಯ ಬಾಂಧವರು ಜಾಥಾದಲ್ಲಿ ಪಾಲ್ಗೊಂಡು ಧರ್ಮ ರಕ್ಷಣೆ ಕಹಳೆ ಮೊಳಗಿಸಿದರು. ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಜಾಥಾ ಮುಖ್ಯ ರಸ್ತೆಯಲ್ಲಿ ಸಾಗಿ ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಬಳಿ ಸೇರಿ ನಂತರ ಪಟ್ಟಣದ ಕಾರು ನಿಲ್ದಾಣ ಆವರಣದಲ್ಲಿ ಬೃಹತ್ ಸಭೆ ನಡೆಸಿತು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಒಳಗೊಂಡ 3 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಜಾಥಾದಲ್ಲಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಮತಾಂತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊಡಗಿನ ಮಾಜಿ ಶಾಸಕದ್ವಯರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಮತ್ತಿತರ ಮುಖಂಡರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಬಂದ್ ಮಾಡಿ ಕೇಂದ್ರದ ಮಾಲೀಕರು, ವರ್ತಕರು, ಸಿಬ್ಬಂದಿ ಕೇಸರಿ ಶಲ್ಯ ಧರಿಸಿ ಜಾಥಾದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಜಾಥಾ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದ ವರ್ತಕರು ಸ್ವಯಂಪ್ರೇರಣೆಯಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ಸೂಚಿಸಿದ್ದರು. ಔಷಧಿ ಅಂಗಡಿಗಳು ಹಣ್ಣಿನ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಇಬ್ಬರು ಡಿವೈಎಸ್ಪಿ, 5 ಮಂದಿ ಇನ್ಸ್ ಪೆಕ್ಟರ್, 10 ಎಸ್.ಐ ಒಳಗೊಂಡಂತೆ 150 ಕ್ಕೂ ಅಧಿಕ ಮಂದಿಯ ಪೊಲೀಸ್ ಸಿಬ್ಬಂದಿಗಳ ಪಡೆ ತೀವ್ರ ನಿಗಾ ವಹಿಸಿತ್ತು.ಸಭಾ ಕಾರ್ಯಕ್ರಮ:
ಕಾರು ನಿಲ್ದಾಣದ ವೇದಿಕೆಯಲ್ಲಿ ನಡೆದ ಜನಾಂದೋಲನ ಜಾಗೃತಿ ಸಭೆಯಲ್ಲಿ ಪಾಲ್ಗೊಂಡ ಹಿಂದೂ ಜಾಗರಣ ವೇದಿಕೆ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಚಾಲಕರು ಸತೀಶ್ ದಾವಣಗೆರೆ ದಿಕ್ಸೂಚಿ ಭಾಷಣ ಮಾಡಿದರು. ಜಾತಿ, ಮತ, ಪಕ್ಷ, ಪ್ರಾಂತ ಬೇಧ ಮರೆತು ಹಿಂದೂಗಳು ಒಂದಾದರೆ ಮಾತ್ರ ಮತಾಂತರಕ್ಕೆ ಕಡಿವಾಣ ಹಾಕಬಹುದು ಎಂದರು. ಹಿಂದೂ ಸಮಾಜ ಉಳಿದಿರುವುದೇ ಮಹಿಳೆಯರಿಂದ. ಪ್ರತಿ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ಮಕ್ಕಳಿಗೆ ಭಗವದ್ಗೀತೆ, ರಾಮಾಯಣ, ದೇಶದ ಹಿರಿಮೆ ಹೇಳುವ ಕತೆ ಹೇಳಬೇಕು. 1995ರಲ್ಲೇ ಕೊಡಗು ಜಿಲ್ಲೆಯಲ್ಲಿ ಲವ್ ಜಿಹಾದ್ ಶುರುವಾಗಿದೆ. ವೀರ ಸೇನಾನಿಗಳ ನಾಡಿನಲ್ಲಿ ಇಂತಹ ಹುನ್ನಾರ ಹೇಗೆ ಶುರುವಾಯಿತು ಎನ್ನುವುದು ಚಿಂತಿಸಬೇಕು ಎಂದು ಸಲಹೆ ನೀಡಿದರು.ಜನಾಂದೋಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದೂ ಸುರಕ್ಷಾ ಸಮಿತಿ ಸಂಚಾಲಕ ಬಿ.ಅಮೃತ ರಾಜ್, ಹಿಂದೂ ಜಾಗರಣ ವೇದಿಕೆಯ ಮುಖಂಡ ಭರತ್ ಮಾಚಯ್ಯ, ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಜಿತ್ ಕುಕ್ಕೇರ ಮಾತನಾಡಿದರು. ಜನಾಂದೋಲನ ಸಹ ಸಂಚಾಲಕರಾದ ಚಿಲ್ಲನ ಗಣಿಪ್ರಸಾದ್, ವಸಂತ ರೈ, ಚಂದ್ರಶೇಖರ್ ಹೇರೂರು, ಜ್ಯೋತಿ ಕುದುಪಜೆ, ವಿ.ಹೆಚ್. ಪ್ರಶಾಂತ್ ಮತ್ತಿತರರು ವೇದಿಕೆಯಲ್ಲಿದ್ದರು.