ಹಾನಗಲ್ಲ: ಭಾರತೀಯರ ಬುದ್ಧಿವಂತಿಕೆ ವಿವೇಕವನ್ನು ಒಡೆದಾಳಿ ಬಿಟ್ಟು ಹೋದ ಬ್ರಿಟಿಷರ ಕುತಂತ್ರ ವಿಚಾರಗಳಿಂದ ಮುಕ್ತಿ ಸಿಕ್ಕರೆ ಮಾತ್ರ ಭಾರತ ವಿಶ್ವನಾಯಕನಾಗಲು ಸಾಧ್ಯವಿದ್ದು, ಯುವ ಪ್ರತಿಭಾವಂತ ಸಮುದಾಯವೇ ಭಾರತದ ಭವಿಷ್ಯ, ನಮ್ಮ ಹಿತದೊಂದಿಗೆ ದೇಶದ ಹಿತವನ್ನೂ ಧ್ಯೇಯವಾಗಿಟ್ಟುಕೊಳ್ಳಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಶನಿವಾರ ಹಾನಗಲ್ಲಿನ ಶಾಸಕರ ಮಾದರಿ ಶಾಲೆಯ ಮೈದಾನದಲ್ಲಿ ಪರಿವರ್ತನಾ ಕಲಿಕಾ ಕೇಂದ್ರ ಆಯೋಜಿಸಿದ ಹಾನಗಲ್ಲ ತಾಲೂಕಿನ ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಇಡಿ, ಸ್ನಾತಕೋತ್ತರ, ಎನ್‌ಎಂಎಂಎಸ್ ಟಾಪರ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ೩ನೇ ವರ್ಷದ ಸಾಧನಾ ಸಂಭ್ರಮದಲ್ಲಿ ತಾಲೂಕಿನ ೩೭೫ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಕಚ್ಚಾಡುವುದು ಸಾಕು, ಶಿಕ್ಷಣ ಸಂಸ್ಥೆಗಳಲ್ಲಿ ಕೋಮು ದ್ವೇಷ ಬಿತ್ತುವುದು ಸಾಕು. ಈಗ ನೆಮ್ಮದಿ ಅಭಿವೃದ್ಧಿಯ ಶಕೆ ಆರಂಭವಾಗಬೇಕು. ಕೈಗಾರಿಕಾ ಕ್ಷೇತ್ರದಲ್ಲಿ ನಾವು ವೇಗದಲ್ಲಿ ಮುನ್ನಡೆಯಬೇಕು. ನಿರುದ್ಯೋಗ ಅತ್ಯಂತ ಅಪಾಯಕಾರಿ. ಎಲ್ಲರೂ ಸಂತೋಷದಿಂದ ಬದುಕುವ ಸಂಕಲ್ಪ ಮಾಡೋಣ. ಭಾರತೀಯರ ಬುದ್ಧಿವಂತಿಕೆಗೆ ಜಗತ್ತೇ ಬೆರಗಾಗಿದೆ. ಅಮೆರಿಕಾ ಬೆಳವಣಿಗೆಯಲ್ಲಿ ಭಾರತೀಯ ಬುದ್ಧಿವಂತಿಕೆ ಕೆಲಸ ಮಾಡಿದೆ. ಆದರೆ ನೆರೆ ದೇಶಗಳು ಭಾರತದ ಪ್ರಗತಿ ಕುಂಠಿತಗೊಳಿಸುವ ಹುನ್ನಾರದಲ್ಲಿವೆ. ವಿದೇಶಿ ಷಡ್ಯಂತ್ರಕ್ಕೆ ಬಲಿಯಾಗುವುದು ಬೇಡ. ನಾವು ಕೃಷಿ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಪಥದತ್ತ ಸಾಗುವ ಅಗತ್ಯವಿದೆ. ಸಮಾಜದ ಪ್ರೇರಣೆ ಸಹಾಯ ಸಹಕಾರದಿಂದ ಉನ್ನತ ಸ್ಥಾನ ಮಾನಗಳನ್ನು ತಮ್ಮದಾಸಿಕೊಂಡವರು ಅದರ ಕೊಡುಗೆಯಾಗಿ ಸಮಾಜಕ್ಕೆ ಸಹಾಯ ಮಾಡಿ. ಹಾನಗಲ್ಲ ತಾಲೂಕಿನ ಶೈಕ್ಷಣಿಕ ಉನ್ನತಿಗೆ ಸರ್ಕಾರ, ಸಾರ್ವಜನಿಕ ಸಂಘ ಸಂಸ್ಥೆಗಳ ಸಹಕಾರವನ್ನೂ ಒಳಗೊಂಡು ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ. ಗ್ರಾಮೀಣ ಮಕ್ಕಳಿಗೆ ಉನ್ನತ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವುದು ನನ್ನ ಆದ್ಯತೆ. ಅದಕ್ಕಾಗಿ ನಾನು ಬದ್ಧ ಎಂದರು.ಪ್ರೇರಣಾ ನುಡಿಗಳನ್ನಾಡಿದ ರಾಣಿಬೆನ್ನೂರು ಸಂಜೀವಿನಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಪ್ರಭುಲಿಂಗ ಕೋಡದ, ಶಿಕ್ಷಣ ಬದುಕನ್ನು ರೂಪಿಸುವ ಒಂದು ಶ್ರದ್ಧಾತ್ಮಕ ಅಧ್ಯಯನ. ಈಗ ಶೈಕ್ಷಣಿಕ ಕ್ರಾಂತಿಯೇ ಆರಂಭವಾಗಿದೆ. ಪರಿಶ್ರಮಕ್ಕೆ ಫಲ ಇದ್ದೇ ಇದೆ. ವಿದ್ಯಾರ್ಥಿಗಳಲ್ಲಿ ಯಶಸ್ಸಿನ ಪಯಣ ಶ್ರದ್ಧಾಪೂರ್ವಕವಾಗಿರಲಿ. ಸಾಂಸ್ಕೃತಿಕ ಮನಸ್ಸು ನಮ್ಮದಾಗಿ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿಗೆ ಹಾನಗಲ್ಲಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ನೇತೃತ್ವದಲ್ಲಿ ತಾಲೂಕಿನ ಶೈಕ್ಷಣಿಕ ಸಾಧಕರಿಗೆ ಬೃಹತ್ ಗೌರವ ನೀಡುತ್ತಿರುವುದು ಮಾದರಿಯಾದುದು ಎಂದರು.ಪ್ರತಿಭಾ ಪುರಸ್ಕಾರ ಪಡೆದ ಪ್ರಿಯಾ ಹರವಿ, ಸಿಂಧೂ ಪವಾರ, ಅನುಷಾ ಹೊನ್ನಮ್ಮನವರ, ಮುಸ್ತಕಿಯಾ ಬಂಕಾಪುರ ಅವರು ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿಗೆ ಪ್ರೋತ್ಸಾಹಿಸುವ ಸಾಮಾಜಿಕ ವ್ಯವಸ್ಥೆಯೂ ಅತಿ ಮುಖ್ಯವಾದುದು. ಹಾನಗಲ್ಲ ತಾಲೂಕಿನ ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿವರೆಗಿನ ಟಾಪರ್ ವಿದ್ಯಾರ್ಥಿಗಳನ್ನು ಗೌರವಿಸಿದ್ದು ಇಡೀ ತಾಲೂಕಿನ ಪ್ರತಿಭಾವಂತರೆಲ್ಲರನ್ನೂ ಗೌರವಿಸಿದಂತಾಗಿದೆ. ಇದು ನಮಗೊಂದು ಪ್ರೇರಣೆಯಾಗುವ ಸಮಾರಂಭ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಚಿನ್ನೀಕಟ್ಟಿ ಸಂವಿಧಾನ ಪೀಠಿಕೆ ಓದಿದರು. ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ ಪ್ರಾಸ್ತಾವಿಕ ಮಾತನಾಡಿದರು. ಪರಿವರ್ತನ ಕಲಿಕಾ ಕೇಂದ್ರದ ನಿರ್ದೇಶಕ ಸಂತೋಷ ಅಪ್ಪಾಜಿ, ತಾಲೂಕು ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಬಿ. ಉಮೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರೆಹಾನಾ ಹಿತ್ತಲಮನಿ ಪ್ರಾರ್ಥನೆ ಹಾಡಿದರು. ಸಿದ್ದು ಗೌರಣ್ಣನವರ ಕಾರ್ಯಕ್ರಮ ನಿರೂಪಿಸಿದರು.ಎಲ್ಲರಿಗೂ ಅವರವರ ಧರ್ಮಾಚರಣೆಯಲ್ಲಿ ಶ್ರದ್ಧೆ ಇದ್ದೇ ಇದೆ. ನಾನೂ ಕೂಡ ಹಿಂದೂ. ನನ್ನ ಕುಟುಂಬ ಸಂಸ್ಕಾರದ ಆಚರಣೆಗಳು ನನ್ನ ಮನೆಯೊಳಗೆ ಆಚರಿಸಲ್ಪಡುತ್ತವೆ. ಸಾಮಾಜಿಕವಾಗಿ ನಾವೆಲ್ಲರೂ ಒಂದೇ. ನಮ್ಮ ಆಚರಣೆಗಳ ಹೆಸರಿನಲ್ಲಿ ಜಾತಿ ಧರ್ಮದ ಭೇದಕ್ಕೆ ಅವಕಾಶವಾಗುವುದು ಬೇಡ. ಶಿಕ್ಷಣದಲ್ಲಿ ನಿಜವಾಗಿಯೂ ನಾವು ಕಲಿಯಬೇಕಾಗಿರುವುದು ಸಮಾನತೆಯ ಸಂಸ್ಕಾರವೇ ಆಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.