ನರಗುಂದ: ರೈತರಿಗೆ ಅನ್ಯಾಯವಾದರೆ ಸರ್ಕಾರಕ್ಕೆ ಉಳಿಗಾಲವಿಲ್ಲವೆನ್ನುವುದನ್ನು ನರಗುಂದ ಬಂಡಾಯ ತಿಳಿಸಿಕೊಟ್ಟಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.
ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಮಂಗಳವಾರ ಪಟ್ಟಣದ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ಮಾಲಾರ್ಪಣೆ ಹಾಗೂ ರೈತ ಸ್ಮಾರಕಕ್ಕೆ ಶಿಲಾನ್ಯಾಸ ಮಾಡಿ ಮಾತನಾಡಿ, 1980ರ ಜು. 21ರಂದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ವಿಧಿಸಿದ ನೀರಿನ ಕರ ಸರ್ಕಾರ ಮನ್ನಾ ಮಾಡಬೇಕೆಂದು ಹೋರಾಟದ ವೇಳೆ ಪೊಲೀಸರು ರೈತರ ಮೇಲೆ ಗೋಲಿಬಾರ್ ಮಾಡಿದರು. ಆಗ ಪೊಲೀಸರ ಗುಂಡು ತಾಲೂಕಿನ ಚಿಕ್ಕನರಗುಂದ ಗ್ರಾಮದ ಯುವ ರೈತ ಈರಪ್ಪ ಕಡ್ಲಿಕೊಪ್ಪ ಅವರಿಗೆ ತಾಗಿ ಸ್ಥಳದಲ್ಲಿ ಸಾವಿಗೀಡಾಗಿದ್ದರು.ಇದರಿಂದ ರೈತರು ರೊಚ್ಚಿಗೆದ್ದು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಅಂದು ರೈತ ಬಂಡಾಯದಿಂದ ದೊಡ್ಡ ರಣರಂಗವಾಯಿತು. ನಂತರದ ದಿನಗಳಲ್ಲಿ ಆಳುವ ಸರ್ಕಾರವನ್ನು ಉರುಳಿಸಿದ ಕೀರ್ತಿ ರೈತ ಚಳವಳಿಗೆ ಸಲ್ಲುತ್ತದೆ ಎಂದರು. ರೈತ ಸ್ಮಾರಕ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹50 ಸಾವಿರ ದೇಣಿಗೆ ಕೊಡುತ್ತೇನೆಂದು ಭರವಸೆ ನೀಡಿದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಈ ಭಾಗದ ರೈತರ ಬಹುದಿನಗಳ ಕನಸು ರೈತ ಸ್ಮಾರಕ ಮಾಡಬೇಕೆಂದು ಬೇಡಿಕೆಯಾಗಿತ್ತು. ಅದಕ್ಕೆ ಖಾಸಗಿ ಮಾಲೀಕರಾದ ದೇಸಾಯಿಗೌಡ ಪಾಟೀಲ, ಸಲೀಂ ಮೇಗಲಮನಿ ಅವರು ಜಾಗ ನೀಡಿದ್ದರಿಂದ ರೈತ ಸ್ಮಾರಕ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸ್ಮಾರಕ ನಿರ್ಮಾಣಕ್ಕೆ ನಾನು ₹2.50 ಲಕ್ಷ ದೇಣಿಗೆಯನ್ನು ನೀಡುತ್ತೇನೆ ಎಂದರು.ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಬಂಡಾಯದ ನಾಡು ಅನ್ಯಾಯವನ್ನು ಎಂದು ಸಹಿಸುವುದಿಲ್ಲ. ರೈತರ ಕೋಪಕ್ಕೆ ಎಷ್ಟೋ ಸರ್ಕಾರಗಳು ಉರುಳಿವೆ. ರೈತ ಸ್ಮಾರಕಕ್ಕೆ ನಾನು ₹1 ಲಕ್ಷ ದೇಣಿಗೆ ನೀಡುತ್ತೇನೆಂದರು.
ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕ್ರಣ್ಣ ಅಂಬಲಿ ಮಾತನಾಡಿ, ಈ ಭಾಗದ ರೈತರ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಲು ಈ ಭಾಗದ ಜನಪ್ರತಿನಿಧಿಗಳು ಮುಂದಾಗಬೇಕು. ರೈತ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದ ಎಲ್ಲ ರಾಜಕೀಯ ಪಕ್ಷದವರು, ರೈತ ಮುಖಂಡರು, ಭೂದಾನಿಗಳನ್ನು ಅಭಿನಂದಿಸಿದರು.
ರೈತ ಸಂಘ ಹಾಗೂ ಹಸಿರುಸೇನೆ ಶಹರ ಘಟಕದ ಅಧ್ಯಕ್ಷ ವಿಠಲ ಜಾಧವ ಮಾತನಾಡಿ, 3 ತಿಂಗಳಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಯಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಪ್ರತಿ 1 ಎಕರೆಗೆ ಸರ್ಕಾರ ₹50 ಸಾವಿರ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ರೈತ ಸ್ಮಾರಕ ನಿರ್ಮಾಣ ಮಾಡಲು ಭೂಮಿ ದಾನ ಮಾಡಿದ ದಾನಿಗಳಾದ ದೇಸಾಯಿಗೌಡ ಪಾಟೀಲ ಹಾಗೂ ಸಲೀಂ ಮೇಗಲಮನಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಚುನಪ್ಪ ಪೂಜೇರಿ, ಶಂಕರಣ್ಣ ಅಂಬಲಿ, ಶಂಕರಗೌಡ ಪಾಟೀಲ, ರಾಜುಗೌಡ ಕೆಂಚನಗೌಡ್ರ, ಉಮೇಶಗೌಡ ಪಾಟೀಲ, ವಿವೇಕ ಯಾವಗಲ್, ಬಸವರಾಜ ಸಾಬಳೆ, ಎಸ್.ಎಸ್. ಪಾಟೀಲ, ವಿಠಲ ಜಾಧವ, ಉಮೇಶ ಮರ್ಚಪ್ಪನವರ, ರವಿ ವಡೆಯರ, ಚನ್ನಪ್ಪ ನಂದಿ, ಮನೋಹರ ಹುಯಿಲಗೋಳ, ಪ್ರವೀಣ ಯರಗಟ್ಟಿ, ನಬಿಸಾಬ ಕಿಲ್ಲೇದಾರ, ವೀರಣ್ಣ ಸೊಪ್ಪಿನ, ನಾಗೇಶ ಅಪೋಜಿ, ವೀರಮ್ಮ ಮೇಟಿ, ಅರುಣಕುಮಾರ ಪಟ್ಟಣಶೆಟ್ಟಿ, ಅನೀಲ ಕಡ್ಲಿಕೊಪ್ಪ ಇತರರು ಇದ್ದರು.