ರೈತರಿಗೆ ವಿಮಾ ಹಣ ತಕ್ಷಣ ನೀಡದಿದ್ದರೆ ತೋಟಗಾರಿಕಾ ಇಲಾಖೆಗೆ ಬೀಗ: ರಾಘವೇಂದ್ರ ನಾಯ್ಕ

| Published : Jan 10 2025, 12:47 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಯಾವೊಬ್ಬ ರೈತನಿಗೂ ವಿಮಾ ಹಣ ಜಮಾ ಆಗಿಲ್ಲ. ಇಲ್ಲಿ ತೋಟಗಾರಿಕೆ ಇಲಾಖೆ ಏನು ಮಾಡುತ್ತಿದೆ? ಏನು ಕ್ರಮ ಕೈಗೊಂಡಿದೆ ಎಂದು ರೈತ ಸಂಘದ ಮುಖಂಡರು ಪ್ರಶ್ನಿಸಿದರು.

ಶಿರಸಿ: ಅಡಕೆ ಬೆಳೆ ವಿಮಾ ಹಣವನ್ನು ತಕ್ಷಣ ರೈತರ ಖಾತೆಗೆ ಜಮಾ ಮಾಡಬೇಕು. ಇಲ್ಲವಾದಲ್ಲಿ ತೋಟಗಾರಿಕೆ ಇಲಾಖೆ ಕಚೇರಿಗೆ ಬೀಗ ಹಾಕಲು ತೀರ್ಮಾನಿಸಿದ್ದೇವೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಎಚ್ಚರಿಕೆ ನೀಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಕದ ಸೊರಬ, ಸಾಗರದಲ್ಲಿ ರೈತರ ಖಾತೆಗೆ ವಿಮಾ ಹಣ ಜಮಾ ಆಗಿದೆ. ಹೆಕ್ಟೇರ್‌ಗೆ ₹೭೫ ಸಾವಿರಕ್ಕೂ ಅಧಿಕ ಹಣ ಬಿಡುಗಡೆ ಆಗಿದೆ. ಸಾಗರದಲ್ಲಿ ಇನ್ನೂ ಅಧಿಕವಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಯಾವೊಬ್ಬ ರೈತನಿಗೂ ವಿಮಾ ಹಣ ಜಮಾ ಆಗಿಲ್ಲ. ಇಲ್ಲಿ ತೋಟಗಾರಿಕೆ ಇಲಾಖೆ ಏನು ಮಾಡುತ್ತಿದೆ? ಏನು ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು.

ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮೊದಲೇ ಹೇಳಲಾಗಿದೆ. ಎಷ್ಟೋ ಸಲ ಮನವಿ ನೀಡಿದರೂ ಪ್ರಯೋಜನ ಆಗಿಲ್ಲ ಎಂದ ಅವರು, ರೈತರಿಗೆ ನ್ಯಾಯ ಕೊಡಲು ತೋಟಗಾರಿಕೆ ಇಲಾಖೆಗೆ ಆಗುವುದಿಲ್ಲ ಎಂದರೆ ಇಲಾಖೆ ಯಾಕೆ ಬೇಕು ಎಂದು ಕೇಳಿದರು. ಜ. ೧೩ರಂದು ತೋಟಗಾರಿಕೆ ಇಲಾಖೆ ಕಚೇರಿಗೆ ಬೀಗ ಹಾಕಲಾಗುತ್ತದೆ. ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಅವರು ಎಂಸಿಪಿ ಕನಿಷ್ಠ ಬೆಂಬಲ ಬೆಲೆ, ಡಾ. ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೊಳಿಸುವಂತೆ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈಗ ಅವರ ಆರೋಗ್ಯ ಹದಗೆಟ್ಟಿದೆ. ಅವರನ್ನು ಬೆಂಬಲಿಸಿ ಜ. ೧೩ರಂದು ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಲಿದ್ದೇವೆ ಎಂದರು.

ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆರೋಗ್ಯಕ್ಕೆ ಅಪಾಯವಾದರೆ ಅದಕ್ಕೆ ನೇರ ಹೊಣೆ ಕೇಂದ್ರ ಸರ್ಕಾರ ಆಗಲಿದೆ ಎಂದು ಎಚ್ಚರಿಸಿದರು. ದಾಸನಕೊಪ್ಪದಲ್ಲಿ ಬುಧವಾರ ರಾತ್ರಿ ೪೦ಕ್ಕೂ ಹೆಚ್ಚು ಅಡಕೆ ಮರವನ್ನು ದುಷ್ಕರ್ಮಿಗಳು ಕಡಿದ್ದಾರೆ. ಈ ಘಟನೆಯನ್ನು ರೈತ ಸಂಘ ಖಂಡಿಸುತ್ತದೆ. ಯಾರೇ ಇಂತಹ ಕೃತ್ಯ ನಡೆಸಿದರೂ ಕ್ರಮವಾಗಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಕೋರ್ಲಕಟ್ಟಾ ಸೊಸೈಟಿ ಉಪಾಧ್ಯಕ್ಷ ಅರವಿಂದ ತೆಲಗುಂದ, ರೈತ ಸಂಘದ ಪ್ರಮುಖರಾದ ಪ್ರಮೋದ್ ಜಕಲಣ್ಣನವರ್, ರಾಜೇಶ ಖಂಡ್ರಾಜಿ, ಮಂಜುನಾಥ ಚಲವಾದಿ, ನವೀನ, ನಾಗರಾಜ, ಮೋಹನ ನಾಯ್ಕ ಕಿರವತ್ತಿ, ಶಶಿಕುಮಾರ್ ಇದ್ದರು.೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ

ಯಲ್ಲಾಪುರ: ಪಟ್ಟಣದ ತಾಪಂ ಸಭಾಭವನದಲ್ಲಿ ಜ. ೭ರಂದು ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ ನಡೆಯಿತು. ಉಲ್ಲಾಸ್ ಶಾನಭಾಗ್ ಅಧ್ಯಕ್ಷತೆ ವಹಿಸಿದ್ದರು. ಇಲಾಖೆಯ ಅಧಿಕಾರಿಗಳು ವರದಿ ಒಪ್ಪಿಸಿದರು. ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಮುಶರತ್ ಖಾನ್, ಅನಿಲ್ ಮರಾಠೆ, ಬಾಬಾ ಶೇಖ್, ಅನಂತ್ ಕೋಟೆಮನೆ, ಮಹೇಶ್ ನಾಯ್ಕ, ಫಕೀರ್ ಹರಿಜನ, ಶಿವಾನಂದ ನಾಯ್ಕ, ಎಂ.ಕೆ. ಭಟ್ಟ, ನಾಗರಾಜ್ ಕೈಟಕರ್, ಪತ್ರಕರ್ತ ಕೆ.ಎಸ್. ಭಟ್ಟ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಯುವನಿಧಿ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಬಿಡುಗಡೆ ಮಾಡಲಾಯಿತು. ಸಿಡಿಪಿಒ ಇಲಾಖೆಯ ಸೂಪರ ವೈಸರ್ ವೀರವ್ವ ಪೂಜಾರ್ ವಂದಿಸಿದರು. ಎಸ್.ಎಲ್.ಆರ್.ಡಿ. ಬ್ಯಾಂಕಿಗೆ ಆಯ್ಕೆಯಾದ ಅನಂತ್ ಕೋಟೆಮನೆ ಅವರನ್ನು ಸನ್ಮಾನಿಸಲಾಯಿತು.