ಸಾರಾಂಶ
ಕೊಪ್ಪಳ: ಒಳ ಮೀಸಲಾತಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರೂ ಆಳುವ ಸರ್ಕಾರಗಳು ಕಿವಿಗೊಡುತ್ತಿಲ್ಲ. ಇದೀಗ ಕೊನೆಯ ಹಂತದ ಭಾಗವಾಗಿ ಆ.19 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಅಂಗಿಕಾರ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮಾದಿಗ ಸಮಾಜದ ಮುಖಂಡ ಗಣೇಶ ಹೊರತಟ್ನಾಳ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿಯನ್ನು ಆ.19ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಾರಿ ಮಾಡಬೇಕು ಜಾರಿ ಮಾಡಿದರೆ ಹಬ್ಬ ಮಾಡಲಾಗುತ್ತದೆ ಇಲ್ಲದಿದ್ದರೆ ಸರ್ಕಾರ ವಿರುದ್ಧ ಮಾರಿ ಹಬ್ಬ ಮಾಡಲಿದ್ದೇವೆ ಎಂದರು.ನಮ್ಮ ಮಾದಿಗ ಸಮುದಾಯ ಮೂಲ ಅಸ್ಪೃಶ್ಯತೆ ಹೊಂದಿದ್ದು, ಸರ್ಕಾರದ ಸೌಲಭ್ಯಗಳನ್ನು ಇದರಡಿ ಒಂದು ವರ್ಗ ಪಡೆಯುತ್ತಿದೆ. ಈ ಸಮಸ್ಯೆ ನಿವಾರಣೆಗಾಗಿ ಅಂತಿಮ ಹಂತಕ್ಕೆ ಬಂದಿರುವ ಒಳಮೀಸಲಾತಿ ಜಾರಿಗೊಳಿಸಿ ಎಂದು ಹೇಳಿದರು.
ಸಮಾಜದ ಮುಖಂಡ ಹನುಮೇಶ ಕಡೆಮನಿ ಆ. 18 ರಂದು ರಾಜ್ಯಾದ್ಯಂತ ಶಾಸಕರ ನಿವಾಸದ ಎದುರು ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ತಮಟೆ ಚಳವಳಿ ಮಾಡಲಾಗುವುದು. ಆ.19 ರ ನಂತರ ಸರ್ಕಾರದ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಕೊಪ್ಪಳ ಬಂದ್ ಗೆ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.ಮುಖಂಡ ಮಲ್ಲು ಪೂಜಾರ ಮಾತನಾಡಿ, ಒಳಮೀಸಲಾತಿಗೆ ಬಲಗೈ ಸಮುದಾಯದಲ್ಲಿರುವ ಕೆಲವರು ವಿನಾಕಾರಣ ವಿರೋಧ ಮಾಡುತ್ತಿದ್ದಾರೆ.ಇದು ಸರಿಯಲ್ಲ. ಆಯೋಗ ಕೂಲಂಕುಷವಾಗಿ ಪರಿಶೀಲಿಸಿ ನೀಡಿದ ವರದಿ ಜಾರಿಗೆ ಅಡ್ಡಿಪಡಿಸುವ ಕ್ರಮಕ್ಕೆ ನಮ್ಮ ತಕರಾರಿದೆ, ಅದರಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಒಳಮೀಸಲಾತಿಗೆ ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ವಿರೋಧ ಮಾಡಿದವರಲ್ಲಿ ಮೊದಲಿಗರು ಎಂಬ ಮಾಹಿತಿಯಿದೆ. ಸಚಿವರು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು.ಇಲ್ಲದಿದ್ದರೇ ಬರುವ ಚುನಾವಣೆಯಲ್ಲಿ ಇದರ ಬಿಸಿ ನಿಮಗೆ ತಟ್ಟಲಿದೆ ಎಂದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ರಾಮಣ್ಣ ಚೌಡ್ಕಿ,ನಿಂಗಪ್ಪ ಮೈನಳ್ಳಿ ಸೇರಿದಂತೆ ಇತರರು ಇದ್ದರು.