ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಚಂದ್ರಪ್ಪ ತಮ್ಮ ಮಗ ಕೊಂಡಿರುವ ಆಸ್ತಿ ದಾಖಲಾತಿ ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸರ್ಕಾರಿ ಗುಡ್ಡ ಕಬಳಿಸಿದ್ದೇನೆ ಎಂಬುದ ಮಾಜಿ ಸಚಿವ ಆಂಜನೇಯ ಸಾಬೀತು ಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಶಾಸಕ ಎಂ.ಚಂದ್ರಪ್ಪ ಸವಾಲು ಹಾಕಿದ್ದಾರೆ.ಗುಡ್ಡ ಕಬಳಿಕೆ ಕುರಿತಂತೆ ಆಂಜನೇಯ ಮಾಡಿದ ಆರೋಪಕ್ಕೆ ಶನಿವಾರ ತಣ್ಣಗೆ ಪ್ರತಿಕ್ರಿಯಿಸಿದ ಚಂದ್ರಪ್ಪ, ಸಚಿವರಾಗಿ ಕಾರ್ಯನಿರ್ವಹಿಸಿದವರು ಆರೋಪ ಮಾಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ನನ್ನದೇ ಸ್ವಂತ 200 ಎಕರೆ ಜಮೀನು ಇದೆ.ಅಂತಹುದರಲ್ಲಿ ಗುಂಟೆಗಟ್ಟಲೆ ಜಮೀನು ಏಕೆ ಕದಿಯಲಿ ಎಂದರು.
ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಯಾವತ್ತೂ ಕಪ್ಪು ಚುಕ್ಕೆ ಇಲ್ಲದಂತೆ ಜನ ಸೇವೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಾ ಬಂದಿದ್ದೇನೆ. ಅಕ್ರಮ ಗಣಿಗಾರಿಕೆ, ಭೂಕಬಳಿಕೆ, ಒತ್ತುವರಿ ಯಂತಹ ಯಾವುದೇ ಕೆಲಸ ಮಾಡಿಲ್ಲ. ರಾಜಕೀಯ ತೇಜೋವಧೆ ಮಾಡುವುದಕ್ಕಾಗಿ ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡುವವರು ಮೊದಲು ಅವರು ಸಿ ಇದ್ದಾರ ಎಂಬುದ ಪರೀಕ್ಷೆ ಮಾಡಿಕೊಳ್ಳಲಿ ಎಂದರು.ಹಿರೇಕಂದ್ರವಾಡಿಯಲ್ಲಿ ನನ್ನ ಮಗನ ಹೆಸರಿನಲ್ಲಿ ದಲಿತರ ಭೂಮಿಯನ್ನು ಖರೀದಿ ಮಾಡಲಾಗಿದೆ ಎಂದು ಆರೋಪವನ್ನು ಹೊರಿಸಲಾಗಿದೆ. ನಾಲ್ಕು ಜನರ ಕೈಬದಲಾಗಿ ಅಂತಿಮವಾಗಿ ನನ್ನ ಮಗನ ಹೆಸರಿಗೆ ಜಮೀನನ್ನು ಖರೀದಿ ಮಾಡಲಾಗಿದೆ. ಮಾಜಿ ಸಚಿವರು ಹೇಳಿದಂತೆ ದಲಿತರ ಭೂಮಿನು ಕಬಳಿಸಿಲ್ಲ. ಹೀರೇಕಂದವಾಡಿ ಗ್ರಾಮದ ರಿ.ಸ.ನಂ 91/5ರಲ್ಲಿ 4.04 ಖರಾಬು 0.06 ಗುಂಟೆ ಒಟ್ಟು ವಿಸ್ತಿರ್ಣ 3-38 ಗಂಟೆಯನ್ನು ಲಿಂಗಾಯತ, ಭೋವಿ ಈಡಿಗರವರಿಂದ ಹಾಗೂ ಇದೇ ಗ್ರಾಮದ ರಿ.ಸ.ನಂ.91/1ಬಿ2 ಒಟ್ಟು8-00 ಎಕರೆ ಖರಾಬು 0.12 ಗುಂಟೆ ಒಟ್ಟು ವಿಸ್ತೀರ್ಣ 7-28 ಗುಂಟೆ ಭೂಮಿಯನ್ನು ಲಿಂಗಾಯಿತ, ಈಡಿಗ ಸಮುದಾಯದಿಂದ ಸರ್ಕಾರದ ದಾಖಲಾತಿಯಂತೆ ಖರೀದಿ ಮಾಡಲಾಗಿದೆ. 1910ರಲ್ಲಿ ಪಿಟಿಸಿಎಲ್ ಕಾಯ್ದೇ ಇತ್ತೇ. ಈ ಬಗ್ಗೆ ಕನಿಷ್ಟ ಅರಿವು ಆಂಜನೇಯ ಅವರಿಗೆ ಇರಬೇಕಿತ್ತು ಎಂದರು.
ನನ್ನ ರಾಜಕೀಯ ಜೀವನ ವೈಟ್ ಪೇಪರ್ ಇದ್ದಂತೆ ಇದರಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲವಾಗಿದೆ, ನನಗೆ ಕೆಟ್ಟ ಕೆಲಸವನ್ನು ಮಾಡಿದ ಅನುಭವ ಇಲ್ಲ ಅವರ ಮಾತಿನಲ್ಲಿ ಅರ್ಥ ಇಲ್ಲವಾಗಿದೆ. ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಅದು ಸತ್ಯಕ್ಕೆ ದೂರವಾದ ಆರೋಪವಾಗಿದೆ ಎಂದರು.ಆಂಜನೇಯ ಅವರು ಸಚಿವರಾಗಿದ್ದಾಗ ತಲೆದಿಂಬು, ಹೊದಿಕೆ ಅವ್ಯವಹಾರದ ಆರೋಪ ಬಂದವು. ಈ ಬಗ್ಗೆ ನಾನು ಎಲ್ಲಿಯಾದರೂ ಪ್ರಶ್ನಿಸಿದೆನೇ. ರಾಜಕೀಯದಲ್ಲಿ ಏನೋ ಸಣ್ಣ ಪುಟ್ಟವು ಆಗಿರುತ್ತಾವೆ ಎಂದು ಸುಮ್ಮನದ್ದೆ. ಏನೂ ಮಾಡದೇ ಇರುವ ನನ್ನ ಮೇಲೆ ಅನಗತ್ಯ ಆರೋಪ ಎಷ್ಟರ ಮಟ್ಟಿಗೆ ಸರಿ ಎಂದು ಚಂದ್ರಪ್ಪ ಪ್ರಶ್ನಿಸಿದರು.
ಭರಮಸಾಗರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆಂಜನೇಯ ಬಾಣದ ಗುರುತಿನಿಂದ ಗೆದ್ದಿದ್ದರು. ಆ ವೇಳೆ ನಾನು ಜೆಡಿಯು ಬಿಟ್ಟು ಕಾಂಗ್ರೆಸ್ ಗೆ ಹೋಗಿದ್ದೆ. ಅಲ್ಲಿನ ಮತದಾರರು ಬಾಣ ಚಂದ್ರಪ್ಪನ ಗುರುತು ಅಂತ ಮತ ಹಾಕಿದ್ದರು. ನನ್ನ ಪ್ರಭಾವದಿಂದ ಆವರು ಗೆದ್ದಿದ್ದರು ಎಂದು ಚಂದ್ರಪ್ಪ ವ್ಯಂಗ್ಯವಾಡಿದರು.