ಸಿದ್ದಲಿಂಗ ಕಿಣಗಿಕನ್ನಡಪ್ರಭ ವಾರ್ತೆ ಸಿಂದಗಿಇನ್ನೇನು ಬೆಳಗಾಗಲು ಆರು ಗಂಟೆಗಳ ಕಾಲ ತಡವಾಗಿದ್ದರೆ ಸಾಕಿತ್ತು. ಅಸುನೀಗಿದ ನಾಲ್ಕು ಜೀವಗಳು ಬದುಕುಳಿಯುತ್ತಿದ್ದವು. ಆದರೆ, ದುರಾದೃಷ್ಟವಶಾತ್ ಹಾಗಾಲಿಲ್ಲ. ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬ ಮಾತಿನಂತೆ ಇಂತಹ ಹೃದಯವಿದ್ರಾವಕ ಘಟನೆ ಸಿಂದಗಿ ತಾಲೂಕಿನ ಮೊರಟಗಿಯಲ್ಲಿ ಘಟನೆ ನಡೆದೇ ಹೋಯಿತು.
ಸಿದ್ದಲಿಂಗ ಕಿಣಗಿ
ಕನ್ನಡಪ್ರಭ ವಾರ್ತೆ ಸಿಂದಗಿಇನ್ನೇನು ಬೆಳಗಾಗಲು ಆರು ಗಂಟೆಗಳ ಕಾಲ ತಡವಾಗಿದ್ದರೆ ಸಾಕಿತ್ತು. ಅಸುನೀಗಿದ ನಾಲ್ಕು ಜೀವಗಳು ಬದುಕುಳಿಯುತ್ತಿದ್ದವು. ಆದರೆ, ದುರಾದೃಷ್ಟವಶಾತ್ ಹಾಗಾಲಿಲ್ಲ. ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬ ಮಾತಿನಂತೆ ಇಂತಹ ಹೃದಯವಿದ್ರಾವಕ ಘಟನೆ ಸಿಂದಗಿ ತಾಲೂಕಿನ ಮೊರಟಗಿಯಲ್ಲಿ ಘಟನೆ ನಡೆದೇ ಹೋಯಿತು.
ಮೊರಟಗಿಯಲ್ಲಿ ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಅಸುನೀಗಿದ ಘಟನೆ ಕೇವಲ ಆ ಗ್ರಾಮದಲ್ಲಿ ಮಾತ್ರವಲ್ಲ, ಇಡೀ ತಾಲೂಕಿನ ಜನತೆ ಮರಗುವಂತಾಗಿದೆ. ತಾನು ವಾಸ ಮಾಡುತ್ತಿದ್ದ ಮನೆಯಲ್ಲಿ ರಿಪೇರಿ ಮಾಡಿಸಿಕೊಂಡು ಇನ್ನೇನು ಮತ್ತೆ ಆ ಮನೆಗೆ ಮರಳಬೇಕು ಎನ್ನುವ ಘಳಿಗೆ ಬರುವ ಮುನ್ನವೇ ಈ ನಾಲ್ವರ ಪ್ರಾಣಪಕ್ಷಿ ಹಾರಿಹೋಗಿತ್ತು. ಪ್ರಕೃತಿ ಮುಂದೆ ಮನುಷ್ಯನ ಮತ್ತೊಮ್ಮೆ ಶೂನ್ಯವಾಗಿದ್ದಾನೆ.ಮೊರಟಗಿಯಲ್ಲಿ ತಾನೇ ತನ್ನ ತಾಯಿ ಮತ್ತು ಪತ್ನಿ, ಮೂವರು ಮಕ್ಕಳೊಂದಿಗೆ ವಾಸವಾಗಿದ್ದ ಗುರುನಾಥ ಬಡಿಗೇರ, ತನ್ನ ಮನೆಯನ್ನು ರಿಪೇರಿ ಮಾಡಿಸಿಕೊಂಡು ಸಿದ್ಧವಾಗಿಸಿಕೊಂಡಿದ್ದ. ಕೇವಲ ಒಂದು ತಿಂಗಳು ಇರುವುದಕ್ಕಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಶನಿವಾರ ಅಮವಾಸ್ಯೆ. ಹೀಗಾಗಿ ಶುಕ್ರವಾರವೇ ಪೂಜೆ ಮಾಡಿಕೊಂಡು ರಿಪೇರಿ ಮಾಡಿಸಿಕೊಂಡಿದ್ದ ಮನೆಗೆ ಹೋಗಲು ಕುಟುಂಬವೆಲ್ಲ ಸಿದ್ಧಗೊಂಡಿತ್ತು. ಆದರೆ, ಆ ಅದೃಷ್ಟ ಗುರುನಾಥ ಕುಟುಂಬಕ್ಕೆ ಸಿಗಲಿಲ್ಲ. ಹೊಸ ಮನೆಯ ಬದಲು ಮಸಣದ ಮನೆಗೆ ಸೇರಬೇಕಾಯಿತು ಎಂಬುವುದು ದುರ್ದೈವ. ಅದೃಷ್ಟವಶಾತ್, ಆತನ ಪುತ್ರ 10 ವರ್ಷ ವೀರೇಶನು, ಅಜ್ಜಿಯೊಂದಿಗೆ ರಿಪೇರಿಯಾಗಿದ್ದ ಮನೆಯಲ್ಲಿ ಮಲಗಿದ್ದ. ಹೀಗಾಗಿ ಇವರಿಬ್ಬರ ಜೀವಕ್ಕೇನೂ ಅಪಾಯವಾಗಿಲ್ಲ.
ಬಡಗಿತನವೇ ಮೂಲ ಕಾಯಕ:ಮೃತಪಟ್ಟಿರುವ ಗುರುನಾಥ ಬಡಿಗೇರಗೆ ಬಡಗಿತನವೇ ಬದುಕು ಮತ್ತು ಜೀವನೋಪಾಯವಾಗಿತ್ತು. ಈತ ತಂದೆ ಕಳೆದ 10 ವರ್ಷಗಳ ಹಿಂದೆಯೇ ತೀರಿಹೋಗಿದ್ದರು. ಹೀಗಾಗಿ ಮನೆತನದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಗುರುನಾಥ ಅವರೇ ನಿಭಾಯಿಸಿಕೊಂಡು ಬಂದಿದ್ದರು. ಬಡಗಿತನದಿಂದಲೇ ಎಲ್ಲರನ್ನು ಸಲುಹಿದರು. ಜತೆಗೆ ಗುರುನಾಥನಿಗೆ ಇಬ್ಬರು ಸಹೋದರಿಯರಿದ್ದರು. ಈ ಪೈಕಿ ಓರ್ವ ಸಹೋದರಿ ಕೂಡ ನಿಧನರಾಗಿದ್ದಾರೆ. ಅಲ್ಲದೆ, ಕೊನೆಯ ಸಹೋದರ ಮೌನೇಶ ಕಳೆದ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದಾನೆ. ಆತನ ಕೂಡ ಬಡಗಿತನವನ್ನೇ ಕಾಯಕ ಮಾಡಿಕೊಂಡಿದ್ದಾನೆ. ಇದರ ಜತೆಗೆ ದ್ಯಾಮವ್ವನ ಗುಡಿ ಅರ್ಚಕರಾಗಿಯೂ ಗುರುನಾಥ ಕುಟುಂಬ ಪೂಜೆ ಮಾಡಿಕೊಂಡು ಬರುತ್ತಿದೆ. ಇವೆರಡರಿಂದಲೇ ಇವರ ಜೀವನ ನಡೆಯಬೇಕಿತ್ತು. ಆದರೆ, ದುರಾದೃಷ್ಟ ಅವರನ್ನು ಹೆಚ್ಚು ಬದುಕಲು ಬಿಡಲಿಲ್ಲ ಎಂಬುವುದೇ ವಿಪರ್ಯಾಸ.
ಚಾವಣಿ ಬಿದ್ದಿದ್ದು ಮಧ್ಯರಾತ್ರಿ:ಗುರುವಾರ ಮಧ್ಯರಾತ್ರಿ ಸಿಂದಗಿ ತಾಲೂಕಿನಾದ್ಯಂದ ಭಾರೀ ಬಿರುಗಾಳಿ ಹಾಗೂ ಗುಡುಗುಸಹಿತ ಮಳೆ ಬಿದ್ದಿದೆ. ಅದರಂತೆ ಮೊರಟಗಿಯಲ್ಲಿಯೂ ಮಳೆಯಾಗಿದೆ. ಗುರುವಾರ ರಾತ್ರಿ ಗಾಢನಿದ್ರೆಯಲ್ಲಿದ್ದಾಗ ಚಾವಣಿ ಕುಸಿದುಬಿದ್ದಿದೆ. ಕುಸಿದ ಚಾವಣಿಯ ವಿಚಾರ ಗ್ರಾಮಸ್ಥರಿಗೆ ತಿಳಿದಿದ್ದೆ ಬೆಳಗಿನ ಜಾವ. ಆಗ ಎದ್ದು ನೋಡುವಷ್ಟರಲ್ಲಿ ಎಲ್ಲರು ಅಸುನೀಗಿದ್ದರು.
ಈ ದುರ್ಘಟನೆ ನಡೆಯಬಾರದಾಗಿತ್ತು. ಗುರುನಾಥ ಬಡಿಗೇರ ಕುಟುಂಬ ತಮ್ಮ ಸ್ವಂತ ಮನೆಯ ದುರಸ್ತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ತಮ್ಮ ಮನೆಗೆ ಆಗಮಿಸುತ್ತಿದ್ದರು. ಆದರೆ ವಿಧಿಯಾಟಕ್ಕೆ ನಾಲ್ವರು ಬಲಿಯಾಗಿದ್ದಾರೆ. ಪರಿಹಾರದ ಮೊತ್ತವನ್ನು ಗುರುನಾಥ ಅವರ ಮಗ ವೀರೇಶನ ಹೆಸರಿನ ಮೇಲೆ ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಅವನ ವಿದ್ಯಾಭ್ಯಾಸಕ್ಕೆ ಒದಗಿಸಲಾಗುವುದು.
- ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವಇದೊಂದು ದೊಡ್ಡ ದುರ್ಘಟನೆ. ಇದು ನಮಗೆಲ್ಲ ತುಂಬಾ ನೋವಾಗಿದೆ. ಮೃತರ ಕುಟುಂಬಕ್ಕೆ₹20 ಲಕ್ಷ ಪರಿಹಾರ ಹಣ ನೀಡಿದ್ದೇವೆ. ಮಳೆಯಿಂದಾಗಿ ಮನೆ ಕುಸಿದು ಈ ಘಟನೆ ನಡೆದಿದೆ. ಇದು ನಡೆಯಬಾರದಿತ್ತು. ಆದರೆ, ವಿಧಿಯಾಟ ಹೀಗಾಗಿದೆ. ನಾಲ್ವರನ್ನು ಕಳೆದುಕೊಂಡ ಆ ಕುಟುಂಬದ ನೋವಿನೊಂದಿಗೆ ಸದಾ ನಾವಿರುತ್ತೇವೆ.-ಅಶೋಕ ಮನಗೂಳಿ, ಶಾಸಕ