ಕನ್ನಡಿಗರು ಒಗ್ಗಟ್ಟಾದರೆ ಏನನ್ನೂ ಸಾಧಿಸಬಲ್ಲರು: ಗಂಗಾಧರ ನಾಯ್ಕ

| Published : Nov 11 2025, 02:30 AM IST

ಕನ್ನಡಿಗರು ಒಗ್ಗಟ್ಟಾದರೆ ಏನನ್ನೂ ಸಾಧಿಸಬಲ್ಲರು: ಗಂಗಾಧರ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನುಡಿ, ಸಾಹಿತ್ಯ ಹಾಗೂ ಏಕಿಕೃತ ಕರ್ನಾಟಕದ ಹಿಂದಿನ ಹೋರಾಟ ಅಸಾಮಾನ್ಯವಾದುದು. ಈ ಹೋರಾಟಕ್ಕೆ ನೂರು ವರ್ಷಗಳ ಇತಿಹಾಸವಿದ್ದು ಹಲವು ಹೋರಾಟಗಾರರ ಪ್ರತಿಫಲವಾಗಿ ಅಖಂಡ ಕರ್ನಾಟಕದ ನಿರ್ಮಾಣ ಸಾಧ್ಯವಾಗಿದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಕನ್ನಡಿಗರೆಲ್ಲರೂ ಒಂದಾಗಿ ನಿಂತರೆ ಏನನ್ನೂ ಸಾಧಿಸಬಲ್ಲರು ಎನ್ನುವುದನ್ನು ತೋರಿಸಿರುವುದು ಕನ್ನಡ ನಾಡಿನ ಏಕೀಕರಣ ಹೋರಾಟ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ, ಎನ್ಎಸ್ಎಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಭಟ್ಕಳ ಇವುಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಯುಕ್ತದ ಉಪನ್ಯಾಸ ಹಾಗೂ ಸ್ವರಚಿತ ಕವನ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನುಡಿ, ಸಾಹಿತ್ಯ ಹಾಗೂ ಏಕಿಕೃತ ಕರ್ನಾಟಕದ ಹಿಂದಿನ ಹೋರಾಟ ಅಸಾಮಾನ್ಯವಾದುದು. ಈ ಹೋರಾಟಕ್ಕೆ ನೂರು ವರ್ಷಗಳ ಇತಿಹಾಸವಿದ್ದು ಹಲವು ಹೋರಾಟಗಾರರ ಪ್ರತಿಫಲವಾಗಿ ಅಖಂಡ ಕರ್ನಾಟಕದ ನಿರ್ಮಾಣ ಸಾಧ್ಯವಾಗಿದೆ. ಕನ್ನಡ ನಾಡಿನ ಏಕೀಕರಣದ ಹೋರಾಟವು ಸ್ವಾತಂತ್ರ್ಯ ಹೋರಾಟದಷ್ಟೇ ಪ್ರಮುಖ ಹಾಗೂ ಪ್ರಖರವಾದ ಹೋರಾಟ. ಯಾವುದೇ ಸಂಪರ್ಕ ಸಾಧನಗಳಿಲ್ಲದ ಕಾಲದಲ್ಲಿ ಏಕೀಕರಣ ಹೋರಾಟವನ್ನು ಒಂದು ಜನಾಂದೋಲನವಾಗಿ ರೂಪಿಸಿದ್ದೇ ಒಂದು ಇತಿಹಾಸ. ಈ ನಾಡಿನ ಭವ್ಯ ಪರಂಪರೆ ಇತಿಹಾಸವನ್ನು ಅರಿತು ಭವಿಷ್ಯ ಕಟ್ಟಬೇಕಿದೆ ಎಂದು ಏಕೀಕರಣದ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಾಗೇಶ ಶೆಟ್ಟಿ ಮಾತನಾಡಿ, ಸಾಹಿತ್ಯ ಸಮಾಜದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ಸಾಹಿತ್ಯವು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಮಾಜವನ್ನು ರೂಪಿಸುವಲ್ಲಿ ಮತ್ತು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಹಿತ್ಯ ನಮ್ಮನ್ನು ಸಂಸ್ಕರಿಸುವ ಕಾರ್ಯವನ್ನು ಮಾಡುತ್ತದೆ. ವಿದ್ಯಾರ್ಥಿಗಳು ಹೆಚ್ಚು ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಧನರಾಜ ಎನ್.ಎ. ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿಗಳು ಸ್ವ ರಚಿತ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ತನುಜಾ ಸ್ವಾಗತಿಸಿ,. ಅಕ್ಷತಾ ವಂದಿಸಿದರು. ದೀಪಿಕಾ ಪ್ರಾರ್ಥನೆ, ಪ್ರೀತಿ ನಾಡಗೀತೆ ಹಾಡಿದರು. ದಿವ್ಯ ನಿರೂಪಿಸಿದರು.