ಕೆರೆಗಳು ಅಭಿವೃದ್ಧಿ ಪಡಿಸದಿದ್ದಲ್ಲಿ ಹೋರಾಟ ಅನಿವಾರ್ಯ: ವಸಂತಕುಮಾರ್‌

| Published : Sep 16 2024, 01:53 AM IST

ಕೆರೆಗಳು ಅಭಿವೃದ್ಧಿ ಪಡಿಸದಿದ್ದಲ್ಲಿ ಹೋರಾಟ ಅನಿವಾರ್ಯ: ವಸಂತಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಪ.ಜಾತಿ, ಪ.ವರ್ಗದ ಮೀನುಗಾರರಿಗೆ ಮೀನುಗಳನ್ನು ಸಾಕಲು ನೀಡಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸದಿದ್ದಲ್ಲಿ ಮೀನುಗಾರಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಕೆ.ಸಿ. ವಸಂತಕುಮಾರ್ ಎಚ್ಚರಿಕೆ ನೀಡಿದರು.

ತಾಲೂಕು ಶ್ರೀ ಗಂಗಾ ಪ ಜಾತಿ, ಪ ವರ್ಗದ ಮೀನುಗಾರಿಕೆ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ.ಜಾತಿ, ಪ.ವರ್ಗದ ಮೀನುಗಾರರಿಗೆ ಮೀನುಗಳನ್ನು ಸಾಕಲು ನೀಡಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸದಿದ್ದಲ್ಲಿ ಮೀನುಗಾರಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಕೆ.ಸಿ. ವಸಂತಕುಮಾರ್ ಎಚ್ಚರಿಕೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ತಾಲೂಕು ಶ್ರೀ ಗಂಗಾ ಪ ಜಾತಿ, ಪ ವರ್ಗದ ಮೀನುಗಾರಿಕೆ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮೀನುಗಾರಿಕೆ ಇಲಾಖೆ ಪ.ಜಾತಿ, ಪ. ವರ್ಗದ ಮೀನುಗಾರರನ್ನು, ಅವರ ಸಹಕಾರ ಸಂಘವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಮೀನುಗಾರರಿಗೆ ನೀಡಲಾಗುವ ಸವಲತ್ತು, ಸೌಲಭ್ಯವನ್ನು ಒದಗಿಸದೆ ವಂಚಿಸುತ್ತಿದೆ. ಪ.ಜಾತಿ, ಪ. ವರ್ಗದ ಮೀನುಗಾರರಿಗೆ ಮತ್ತು ಅವರ ಸಹಕಾರ ಸಂಘಕ್ಕೆ ಮೀನು ಸಾಕಾಣಿಕೆಗೆ ಕುಲಗೆಟ್ಟು ಹೋಗಿರುವ ಕೆರೆಗಳನ್ನು ನೀಡಿದೆ ಎಂದು ಆರೋಪಿಸಿದರು.

ಪ.ಜಾತಿ, ಪ.ವರ್ಗದ ಮೀನುಗಾರರಿಗೆ ನೀಡಿರುವ ಕೆರೆಗಳಲ್ಲಿ ಜೊಂಡು ಬೆಳೆದಿವೆ. ಕೆರೆಗಳು ಒತ್ತುವರಿಯಾಗಿವೆ. ನಗರದ ಚರಂಡಿಗಳ ನೀರು ಆ ಕೆರೆಗಳಿಗೆ ಬಿಟ್ಟಿರುವುದರಿಂದ ನೀರು ಕಲುಷಿತವಾಗಿ, ವಿಷಮಯವಾಗಿದೆ. ಇದರಿಂದಾಗಿ ಮೀನುಗಳು ಸಾಯುತ್ತಿದ್ದು ಅದನ್ನೇ ನಂಬಿ ಬದುಕುತ್ತಿರುವ ಮೀನುಗಾರರು ಲಕ್ಷಾಂತರ ರು. ನಷ್ಟ ಅನುಭವಿಸುತ್ತಿದ್ದು ದಿನನಿತ್ಯದ ಬದುಕಿಗೆ ಪರದಾಡುತ್ತಿದ್ದಾರೆ ಎಂದು ದೂರಿದರು.

ಪ.ಜಾತಿ, ಪ.ವರ್ಗದ ಮೀನುಗಾರರಿಗೆ ನೀಡಿರುವ ಹಿರೇಮಗಳೂರು ಕೆರೆ ಕಲುಷಿತಗೊಂಡು ಲಕ್ಷಾಂತರ ರು. ಮೌಲ್ಯದ ಮೀನುಗಳು ಸಾವನ್ನಪ್ಪಿದ್ದು ನಷ್ಟ ಅನುಭವಿಸಿರುವವರಿಗೆ ಈ ವರೆಗೂ ಯಾವುದೇ ಪರಿಹಾರ ನೀಡಿಲ್ಲ. ನಗರಸಭೆ, ಜಿಲ್ಲಾಧಿಕಾರಿ, ಮೀನುಗಾರಿಕೆ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ, ಕೆರೆಯನ್ನು ಅಭಿವೃದ್ಧಿಪಡಿಸಿಲ್ಲ, ಮೀನುಗಾರರ ಮತ್ತು ಆ ವರ್ಗದ ಸಹಕಾರ ಸಂಘದ ರಕ್ಷಣೆಗೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಿ,ಎನ್, ಚೌಡಪ್ಪ ಮಾತನಾಡಿ, ಮೀನುಗಾರರಿಗೆ ಸರ್ಕಾರದ ಅನುದಾನ, ಸವಲತ್ತು, ಸೌಲಭ್ಯ ನೀಡಬೇಕು. ನಷ್ಟ ಅನುಭವಿಸಿರುವ ಅವರ ರಕ್ಷಣೆಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಶ್ರೀ ಗಂಗಾ ಪ.ಜಾತಿ, ಪ.ವರ್ಗದ ಮೀನುಗಾರಿಕೆ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿ. ಧರ್ಮೇಶ್, ತಮ್ಮ ಸಂಘವನ್ನು ಮುಚ್ಚಿಸಲು ಇಲಾಖೆ ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ. ಪ. ವರ್ಗದ ಮೀನುಗಾರರಿಗೆ ಕೇವಲ 15 ದಿನದ ಮೀನು ಮರಿಗಳನ್ನು ಸಾಕಾಣಿಕೆಗೆ ನೀಡುತ್ತಿದ್ದಾರೆ, ಇದರಿಂದಾಗಿ ಅವು ಸತ್ತು ಹೋಗುತ್ತಿವೆ, ಕಲುಷಿತ ನೀರಿನಿಂದ ಮೀನುಗಳು ಸತ್ತು ನಷ್ಟ ವಾದರೂ ಪರಿಹಾರ ನೀಡುತ್ತಿಲ್ಲ. ಕೆರೆಯ ನೀರನ್ನು ಸ್ವಚ್ಛಗೊಳಿಸುತ್ತಿಲ್ಲ, ಸರ್ಕಾರದ ಯಾವುದೇ ಅನುದಾನ, ಸವಲತ್ತು, ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರು.

ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ.ಸಿ. ಜಯರಾಮಯ್ಯ, ಕೆಂಚಪ್ಪ, ಸಂಘದ ಉಪಾಧ್ಯಕ್ಷ ರಾಮಯ್ಯ, ನಿರ್ದೇಶಕರಾದ ಕೆ. ನರಸಿಂಹಮೂರ್ತಿ, ಗಣೇಶ, ಸಿ.ಬಿ. ಮಂಜು, ಸುರೇಶ್, ಮೋಹನಕುಮಾರಿ, ಸಿ.ಡಿ. ಕಾವ್ಯ, ಪಿ.ಎಲ್. ರಂಜಿತ್, ದಿವ್ಯ ಪಾಲ್ಗೊಂಡಿದ್ದರು. 15 ಕೆಸಿಕೆಎಂ 4ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ತಾಲೂಕು ಶ್ರೀ ಗಂಗಾ ಪ.ಜಾತಿ, ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ವಸಂತಕುಮಾರ್ ಅವರು ಉದ್ಘಾಟಿಸಿದರು. ಧರ್ಮೇಶ್‌, ಜಯರಾಮಯ್ಯ, ಕೆಂಚಪ್ಪ ಇದ್ದರು.