ಸಾರಾಂಶ
ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿಕೆ
ನರಗುಂದ: ರಾಜ್ಯದ ಉತ್ತರ ಕರ್ನಾಟಕ ಭಾಗದ ರೈತ ಸಮುದಾಯದ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ರಾಜ್ಯದ ಬಂಡಾಯ ನೆಲ ನರಗುಂದದಲ್ಲಿ ಕಳೆದ 8 ವರ್ಷದಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡರೂ ಕೂಡ ಯಾವುದೇ ರೀತಿ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. 2015ರಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಮಠಾಧೀಶರು, ಸಾಹಿತಿಗಳು, ಚಿತ್ರ ನಟರು, ಹಲವಾರು ಸಂಘ, ಸಂಸ್ಥೆಯವರು ಪಾದಯಾತ್ರೆ ಮತ್ತು ರಾಷ್ಟ್ರಪತಿಗಳಿಗೆ ಈ ಯೋಜನೆ ಜಾರಿ ಮಾಡದಿದ್ದರೆ ನಮಗೆ ದಯಾಮರಣ ನೀಡಬೇಕೆಂದು 250 ರೈತರು ದೆಹಲಿಗೆ ಹೋಗಿ ಮನವಿ ನೀಡಿದರೂ ಕೂಡ ಯಾವುದೇ ಉಪಯೋಗವಾಗಿಲ್ಲ. ಆದ್ದರಿಂದ ಈಗಲೂ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕಾಲ ಮಿಂಚಿಲ್ಲ. ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳನ್ನು ಮಲಪ್ರಭಾ ನದಿಯ ಮೂಲಕ ಮಲಪ್ರಭಾ ಜಲಾಶಯಕ್ಕೆ ಜೋಡಣೆ ಮಾಡಿಕೊಂಡರೆ ಯಾವುದೇ ರೀತಿ ಪರಿಸರ ಮತ್ತು ಗೋವಾ ರಾಜ್ಯಕ್ಕೆ ತೊಂದರೆಯಾಗುವುದಿಲ್ಲ. ಆಳುವ ಸರ್ಕಾರಗಳು ಇದನ್ನು ಗಮನಿಸಿ ಬೇಗ ಈ ಯೋಜನೆ ಜಾರಿ ಮಾಡದಿದ್ದರೆ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರವಾಗುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಈ ಯೋಜನೆಯನ್ನು ಜಾರಿ ಮಾಡಲು ರಾಜಕೀಯ ಪಕ್ಷಗಳು ರಾಜಕಾರಣ ಮಾಡದೇ ಬೇಗ ಜಾರಿ ಮಾಡಬೇಕೆಂದು ಉಭಯ ಸರ್ಕಾರಗಳಿಗೆ ಮನವಿ ಮಾಡಿಕೊಂಡರು.