ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮನ್ಮುಲ್ ನಿರ್ದೇಶಕರಾಗಿ ಆಯ್ಕೆಯಾದ ಎರಡು ಅವಧಿಯಲ್ಲಿ ಪ್ರಾಮಾಣಿಕವಾಗಿ ರೈತರ ಸೇವೆ ಜೊತೆಗೆ ಸಂಘಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜೆಡಿಎಸ್ ವರಿಷ್ಠರು ಮತ್ತೊಂದು ಬಾರಿಗೆ ಅವಕಾಶ ನೀಡಿದರೇ ಚುನಾವಣೆಯಲ್ಲಿ ಗೆದ್ದು ಸಂಘಗಳ ಇನ್ನಷ್ಟು ಅಭಿವೃದ್ಧಿಗೆ ಕೈಜೋಡಿಸುವುದಾಗಿ ಕೆಎಂಎಫ್ ನಿರ್ದೇಶಕ ವಿ.ಎಂ.ವಿಶ್ವನಾಥ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, 2013 ಮತ್ತು 2018ರ ಅವಧಿಯಲ್ಲಿ ಮುಖಂಡರ ಸಹಕಾರದಿಂದ ಎರಡು ಬಾರಿ ನಮ್ಮುಲ್ ನಿರ್ದೇಶಕರಾಗುವ ಜೊತೆಗೆ ಒಂದು ಭಾರಿ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು ಎಂದರು.
ನನ್ನ ಅಧಿಕಾರದ ಅವಧಿಯಲ್ಲಿ ರೈತರಿಗಾಗಿ ನಿರಂತರವಾಗಿ ದುಡಿದಿದ್ದೇನೆ. ಮೊದಲ ಬಾರಿ ನಿರ್ದೇಶಕರಾಗಿ ಆಯ್ಕೆಯಾದಾಗ ತಾಲೂಕಿನಲ್ಲಿ 105 ಹಾಲು ಉತ್ಪಾದಕರ ಸಹಕಾರ ಸಂಘಗಳು ಮಾತ್ರ ಇದ್ದವು. ನನ್ನ ಪರಿಶ್ರಮದಿಂದ 155 ಸಂಘಗಳನ್ನಾಗಿ ಮಾಡಲು ಶ್ರಮಿಸಿದ್ದೇನೆ ಎಂದರು.ತಾಲೂಕಿನ ಸಹಕಾರ ಸಂಘಗಳಿಗೆ ಕೆಟ್ಟ ಹೆಸರು ಬಾರದಂತೆ ಪ್ರಾಮಾಣಿಕವಾಗಿ ದುಡಿದಿದ್ದೇನೆ. ನಾಯಕರು ಹಾಗೂ ರೈತರ ಗೌರವವನ್ನು ಹೆಚ್ಚಿಸುವ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದೇನೆ. ಫೆ.2ರಂದು ಐದು ವರ್ಷದ ಅವಧಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರು ಸ್ಪರ್ಧಿಸಲು ಅವಕಾಶ ನೀಡಿದರೇ ಗೆದ್ದು ಮತ್ತಷ್ಟು ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.
ಜೆಡಿಎಸ್ ಪಕ್ಷ ನನಗೆ 10 ವರ್ಷ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಪ್ರಸ್ತುತ ಚುನಾವಣೆಯಲ್ಲಿ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಕೂಡ ಅವರ ಗೆಲುವಿಗಾಗಿ ದುಡಿಯುತ್ತೇನೆ. ನಾನೇ ಸ್ಪರ್ಧಿಸಬೇಕೆಂದು ಹಠ ಮಾಡುವುದಿಲ್ಲ. ಆದರೆ, ನನ್ನನ್ನು ನಂಬಿ ಟಿಕೆಟ್ ನೀಡಿದರೇ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಫೆ.2ರಂದು ನಡೆಯುತ್ತಿರುವ ಮನ್ಮುಲ್ ಚುನಾವಣೆಯಲ್ಲಿ ಮಳವಳ್ಳಿ ತಾಲೂಕಿನಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಯನ್ನು ಜೆಡಿಎಸ್ ವರಿಷ್ಠರು ಘೋಷಣೆ ಮಾಡಲಿದ್ದಾರೆ. ಯಾರೇ ಅಭ್ಯರ್ಥಿಯಾದರೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದರು.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಸೋಲು ಕಂಡಿರುವುದು ಬೇಸರದ ಸಂಗತಿ. ಎನ್‌ಡಿಎ ಅಭ್ಯರ್ಥಿಗೆ ಮತಹಾಕಿದ ಎಲ್ಲಾ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ. ಸೋಲಿಗೆ ಕಾರ್ಯಕರ್ತರು ಧೃತಿಪಡಬೇಕಾಗಿಲ್ಲ, ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದರು.ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ನಂದಕುಮಾರ್, ಸಿದ್ದರಾಜು, ಪ್ರಶಾಂತ್, ಮುಖಂಡರಾದ ಹನುಮಂತು ಸಿದ್ದಚಾರಿ, ನಾಗರಾಜು, ಮೇಹಬೂಬ್‌ಪಾಷ ಸೇರಿದಂತೆ ಇತರರು ಇದ್ದರು.