ನನ್ನ ಎದೆ ಸೀಳಿದರೆ ಶ್ರೀರಾಮನೂ, ಸಿದ್ದರಾಮನೂ ಇದ್ದಾರೆ

| Published : Jan 20 2024, 02:04 AM IST

ನನ್ನ ಎದೆ ಸೀಳಿದರೆ ಶ್ರೀರಾಮನೂ, ಸಿದ್ದರಾಮನೂ ಇದ್ದಾರೆ
Share this Article
  • FB
  • TW
  • Linkdin
  • Email

ಸಾರಾಂಶ

ನಾವೂ ಹಿಂದುಗಳೇ. ಬಿಜೆಪಿಯವರು ನಮ್ಮನ್ನು ಹಿಂದು ವಿರೋಧಿಗಳು ಎಂಬ ರೀತಿ ಬಿಂಬಿಸುತ್ತಿರುವುದು ನನ್ನಂತ ಹೊಸ ತಲೆಮಾರಿನ ರಾಜಕಾರಣಿಗಳಿಗೆ ನೋವಾಗುತ್ತದೆ. ನನ್ನ ಎದೆ ಸೀಳಿದರೂ ಶ್ರೀರಾಮನಿದ್ದಾನೆ, ಸಿದ್ದರಾಮನೂ ಇದ್ದಾನೆ. ರಾಮ ಮಂದಿರ ಮೊದಲು ಓಪನ್ ಮಾಡಿಸಿದ್ದೆ ರಾಜೀವ್ ಗಾಂಧಿ ಎಂದು ಶಾಸಕ ಪ್ರದೀಪ್ ಈಶ್ವರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾವೂ ಹಿಂದುಗಳೇ. ನನ್ನ ಎದೆ ಸೀಳಿದರೂ ಶ್ರೀರಾಮನಿದ್ದಾನೆ, ಸಿದ್ದರಾಮನೂ ಇದ್ದಾನೆ. ನಾನು ಅಯೋಧ್ಯೆಗೆ ಹೋಗುತ್ತೇನೆ, ಪೂಜಿಸುತ್ತೇನೆ. ನನ್ನ ಆರಾಧ್ಯದೈವ ಶ್ರೀರಾಮ. ಆದರೆ, ನಮ್ಮನ್ನು ಬಿಜೆಪಿಯವರು ಹಿಂದೂ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ. ರಾಮ ಮಂದಿರ ಮೊದಲು ಓಪನ್ ಮಾಡಿಸಿದ್ದೆ ರಾಜೀವ್ ಗಾಂಧಿಯವರು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿಯವರು ನಮ್ಮನ್ನು ಹಿಂದು ವಿರೋಧಿಗಳು ಎಂಬ ರೀತಿ ಬಿಂಬಿಸುತ್ತಿರುವುದು ನನ್ನಂತ ಹೊಸ ತಲೆಮಾರಿನ ರಾಜಕಾರಣಿಗಳಿಗೆ ನೋವಾಗುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಲ್ಲರು ಅಣ್ಣ- ತಮ್ಮಂದಿರು. ನಾವೆಲ್ಲ ಜೊತೆಯಲ್ಲಿ ಬೆಳೆದವರು ಎಂದರು.

ಸಚಿವ ಮಧು ಬಂಗಾರಪ್ಪ ಅವರು ತಂದೆ ಹಾದಿಯಲ್ಲಿ ನಡೆಯುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ನವರು ಅನೇಕ ಬದಲಾವಣೆ ತಂದಿದ್ದಾರೆ. ಸರ್ಕಾರಿ ಶಾಲೆ ಶಿಕ್ಷಕರು ಬುದ್ಧಿವಂತರಿರುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ಗಟ್ಟಿ ಮಾಡುವ ಅವಶ್ಯಕತೆ ಇದೆ. ಮುಂದಿನ ಐದು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಕಾಣುತ್ತೀರಿ. ಹಳೆ ಸರ್ಕಾರ ಪಠ್ಯ ಪುಸ್ತಕ ಬದಲಾವಣೆಯನ್ನು ನಾವು ಸರಿ ಮಾಡುತ್ತಿದ್ದೇವೆ ಎಂದರು.ರಾಜಕಾರಣಿಗಳ ಹಿಂದೆ ಬರಬೇಡಿ:

ಕೈ ಮುಗಿದು ಬೇಡುತ್ತೇನೆ, ಯುವಕರು ರಾಜಕಾರಣಿಗಳ ಹಿಂದೆ ಬರಬೇಡಿ. ನಾಳೆ ನಿಮಗೆ ಹೆಚ್ಚುಕಮ್ಮಿಯಾದರೆ ಯಾರೂ ಬರುವುದಿಲ್ಲ, ಕೋಮುಗಲಭೆಯಲ್ಲಿ ಯಾವ ಸಮುದಾಯದ ಯುವಕರು ಹೋಗಬೇಡಿ. 25 ವರ್ಷಕ್ಕೆ ಕೇಸ್ ಆದರೆ ಕಷ್ಟ. ನಾನು ಸಹ ಒಬ್ಬ ರಾಜಕಾರಣಿ ಹಿಂದೆ ಬಿದ್ದು 22 ಕೇಸ್ ಹಾಕಿಸಿಕೊಂಡಿದ್ದೆ ಎಂದರು.ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನೀವು ನಮ್ಮ ನಾಯಕರನ್ನು ಬೈದ ಹಾಗೆ ನಾವು ಬೈಯ್ಯಬೇಕಾ? ಅವರು ಬೈದಿರುವುದು ನಮ್ಮ ಮುಖ್ಯಮಂತ್ರಿಯವರನ್ನು. ಅವರಿಗೆ ಒಂದು ಘನತೆಯಿದೆ. ಏಕವಚನದ ಪದ ಬಳಕೆ ಬೇಡ. ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆಯವರು ಯಾವ ಸೀಮೆಯ ಲೀಡರ್? ಸಂಸ್ಕೃತಿ, ಸಂಸ್ಕಾರದ ಬಗ್ಗೆ ಚರ್ಚೆಗೆ ಬನ್ನಿ. ಶಿರಸಿಗೆ ನಾನೇ ಬರಲಾ? ಸಂಸ್ಕಾರದ ನಮಗೆ ಹೇಳಕೊಡಬೇಡಿ. ನಮ್ಮಮನೆಯಲ್ಲಿ ಸಂಸ್ಕಾರ ಕಳಿಸಿಕೊಟ್ಟಿದ್ದಾರೆ. ದೊಡ್ಡವರಿಗೆ ಗೌರವ ಕೊಡಬೇಕು ಎಂದು ಕಿಡಿಕಾರಿದರು. ಕೋವಿಡ್‌ ಸಂದರ್ಭದಲ್ಲಿ ಭಾರಿ ಅವ್ಯವಹಾರ ನಡೆದಿದೆ ಅದನ್ನು ತನಿಖೆ ಮಾಡಿ. ಬಿಜೆಪಿಯವರು ಚಂದ್ರನಲ್ಲಿ ನೀರು ಹುಡುಕುತ್ತಿದ್ದಾರೆ. ಆದರೆ ನಮ್ಮ ಕ್ಷೇತ್ರದ ಜನ ಕುಡಿಯುವ ನೀರಿಲ್ಲದೆ ಕಣ್ಣಿರು ಹಾಕುತ್ತಿದ್ದಾರೆ. ಗ್ಯಾರಂಟಿಗಳ ಹಣ ವ್ಯರ್ಥವಾಗುತ್ತಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿದ್ದಾರೆ. ನಾನು ಬೇಕಾದರೆ ಡೇಟಾ ಮೂಲಕ ಗ್ಯಾರಂಟಿ ಸಾಧನೆ ಕೊಡಬಲ್ಲೆ. ಸುಧಾಕರ್ ಅವರು ಒಮ್ಮೆ ಸೋತಿದ್ದಾರೆ.. ಲೋಕಸಭೆಯಲ್ಲಿ ಮತ್ತೆ ಬಂದು ಸೋಲುವುದು ಬೇಡ. ಮತ್ತೊಮ್ಮೆ ಸೋತರೆ ಜನ ಕೈಬಿಡುತ್ತಾರೆ. ನಮ್ಮೂರ ಹುಡುಗ ಸೋಲುತ್ತಾನೆ ಎಂದು ಹೇಳುತ್ತಿದ್ದೇನೆ ಎಂದು ಲೇವಡಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ. ಮಂಜುನಾಥ್, ರಮೇಶ್ ಶಂಕರಘಟ್ಟ, ಎಚ್.ಪಿ.ಗಿರೀಶ್, ಪ್ರವೀಣ್ ಕುಮಾರ್, ಚೇತನ್ ಕುಮಾರ್, ಮಧುಸೂದನ್ ಮತ್ತಿತರರು ಇದ್ದರು.

- - -

ಕೋಟ್‌ ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾಳೆ ಪಕ್ಷ ಕಸ ಗುಡಿಸು, ರಾಜೀನಾಮೆ ಕೊಡು ಎಂದರೆ ಹಾಗೆ ಮಾಡುತ್ತೇನೆ. ಪಾರ್ಟಿ ಹೇಳಿದರೆ ಲೋಕಸಭೆಗೂ ನಿಲ್ಲುತ್ತೇನೆ. ಪಕ್ಷ ಸಂಘಟಿಸುವ ಆಸೆ ನನಗಿದೆ

- ಪ್ರದೀಪ್‌ ಈಶ್ವರ್‌, ಶಾಸಕ

- - - -19ಎಸ್‌ಎಂಜಿಕೆಪಿ05: ಪ್ರದೀಪ್‌ ಈಶ್ವರ್‌