ಸಾರಾಂಶ
ವಿಹಿಂಪ, ಬಜರಂಗದಳ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ
ಮಂಗಳೂರು: ರಸ್ತೆಗಳಲ್ಲಿ ನಮಾಜ್ ನಿಲ್ಲಿಸದಿದ್ದರೆ ಸಾಮೂಹಿಕ ಹನುಮಾನ್ ಚಾಲೀಸಾ ಪಠಣದ ಮೂಲಕ ತಡೆಯುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಪ್ರತಿ ಸವಾಲು ಹಾಕಿದೆ. ಅಲ್ಲದೆ ರಸ್ತೆಯಲ್ಲಿ ನಮಾಜ್ ಮಾಡಿದವರ ಮೇಲೆ ಕೇಸು ದಾಖಲಿಸಿ ಬಂಧಿಸುವಂತೆ ಮನವಿ ಸಲ್ಲಿಸಿದೆ.
ಕೆಲವು ಕಡೆ ರಸ್ತೆ ಮತ್ತು ಸಾರ್ವಜನಿಕ ಜಾಗದಲ್ಲಿ ನಮಾಜ್ ಮಾಡುವ ಮೂಲಕ ಜಿಲ್ಲೆಯಲ್ಲಿ ಅಶಾಂತಿ ನಿರ್ಮಿಸಲು ಸಂಚು ರೂಪಿಸುತ್ತಿದ್ದಾರೆ. ತಕ್ಷಣ ಜಿಲ್ಲಾಡಳಿತ ಇವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸಿದರೆ ಅದೇ ಸ್ಥಳದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುವುದರ ಮೂಲಕ ತಡೆಯುತ್ತೇವೆ ಎಂದು ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ವಿಹಿಂಪ, ಬಜರಂಗದಳ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.ಮಸೀದಿಯಲ್ಲಿ ಸ್ಥಳಾವಕಾಶ ಇದ್ದರೂ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡುವ ಮೂಲಕ ಸಂಚಾರಕ್ಕೆ ಅಡಚಣೆ ಮಾಡಿದ್ದಾರೆ. ಹಾಗಾಗಿ ನಮಾಜ್ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮುಖಂಡರು ಮನವಿಯಲ್ಲಿ ಆಗ್ರಹಿಸಿದ್ದಾರೆ.ರಸ್ತೆಯಲ್ಲೇ ನಮಾಜ್ ಮಾಡಿದವರ ವಿರುದ್ಧ ಸ್ವಯಂ ಪೊಲೀಸ್ ಕೇಸ್
ಮಂಗಳೂರು: ನಗರದ ಕಂಕನಾಡಿಯ ರಸ್ತೆಯಲ್ಲಿಯೇ ನಮಾಜ್ ಮಾಡಿದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಗರದ ಕಂಕನಾಡಿಯ ಮಸೀದಿ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಮೇ 24ರಂದು ನಮಾಜ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ನಡೆಸಿದವರ ಮೇಲೆ ಕೇಸ್ ದಾಖಲಿಸದಿದ್ದರೆ, ನಾವು ಕೂಡ ಹನುಮಾನ್ ಚಾಲೀಸ್ ಪಠಿಸುವುದಾಗಿ ಹಿಂದು ಸಂಘಟನೆಗಳು ಪೊಲೀಸರಿಗೆ ಮನವಿ ಸಲ್ಲಿಸಿದ್ದವು. ಇದರ ಬೆನ್ನಿಗೇ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸಿದ್ದಾರೆ.ನಮಾಜ್ ಮಾಡುತ್ತಿರುವ ವಿಡಿಯೋ ಪರಿಶೀಲನೆ ನಡೆಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ ಅಪರಿಚಿತ ವ್ಯಕ್ತಿಗಳ ಮೇಲೆ ಭಾರತೀಯ ದಂಡ ಸಹಿತೆಯ ಕಲಂ 341, 283,143 ಹಾಗೂ 149ರಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.