ಪ್ರಕೃತಿ, ಪರಂಪರೆ ನಾಶವಾದರೆ ಸರ್ವಸ್ವವೂ ನಾಶ

| Published : Dec 16 2024, 12:50 AM IST

ಪ್ರಕೃತಿ, ಪರಂಪರೆ ನಾಶವಾದರೆ ಸರ್ವಸ್ವವೂ ನಾಶ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ತಿ, ಹಣ ಹೋದರೆ ಸಂಪತ್ತು ಮಾತ್ರ ಹೋಗುತ್ತದೆ. ಆದರೆ ಪ್ರಕೃತಿ, ಪರಂಪರೆ ಮತ್ತು ಸಂಸ್ಕೃತಿಯ ನಾಶವಾದರೆ ಸರ್ವಸ್ವವೂ ನಾಶವಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಆಸ್ತಿ, ಹಣ ಹೋದರೆ ಸಂಪತ್ತು ಮಾತ್ರ ಹೋಗುತ್ತದೆ. ಆದರೆ ಪ್ರಕೃತಿ, ಪರಂಪರೆ ಮತ್ತು ಸಂಸ್ಕೃತಿಯ ನಾಶವಾದರೆ ಸರ್ವಸ್ವವೂ ನಾಶವಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು. ರಂಭಾಪುರಿ ಪೀಠದಲ್ಲಿ ಭಾನುವಾರ ನಡೆದ ಲಿಂಗೈಕ್ಯ ಶ್ರೀಮದ್ ರಂಭಾಪುರಿ ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಸಂಸ್ಕೃತಿ, ಪರಂಪರೆಯ ನಾಶವಾದರೆ ಮಾನವತೆಯೇ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿಯೇ ಮಠ ಮಾನ್ಯಗಳು ಸಂಸ್ಕೃತಿ, ಪರಂಪರೆಯ ಸಂರಕ್ಷಣೆಗೆ ಅವಿರತ ಶ್ರಮಿಸುತ್ತಿವೆ. ಬಾಳೆಹೊನ್ನೂರು ಮಹಾ ಸಂಸ್ಥಾನ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ ಎಂದು ಹರಸಿದರು.

ಜನ ಸಮುದಾಯ ಮತ್ತು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಬೆಳೆಸುವುದೇ ಮಠಗಳು ಎಂದ ಅವರು, ಪ್ರಕೃತಿ ದೇವಿಯ ವರದಿಂದ ಹಚ್ಚ ಹಸಿರಿನಿಂದ ಕೂಡಿ, ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತವಾದ ಚಿಕ್ಕಮಗಳೂರು ಜಿಲ್ಲೆಯ ಜನರು ಅದೃಷ್ಟವಂತರು. ಆದ್ದರಿಂದ ರಂಬಾಪುರಿ ಪೀಠ ಈ ಭೂಮಿಯ ಸ್ವರ್ಗ ಎಂದರೆ ಅತಿಶಯೋಕ್ತಿಯೇನಲ್ಲ ಎಂದರು.

ಜಿಲ್ಲೆಯಲ್ಲಿ ಶೇ.39 ಅರಣ್ಯ ಇರಬೇಕು. ಆದರೆ ಶೇ.58 ಪ್ರತಿಶತದಷ್ಟು ಅರಣ್ಯ ಪ್ರದೇಶ ಇದೆ. ಇದು ಸಂತಸದ ವಿಚಾರವಾಗಿದೆ. ಪಶ್ಚಿಮಘಟ್ಟ ಹಲವು ನದಿಗಳ ಮೂಲವಾಗಿದ್ದು ಇದನ್ನು ಸಂರಕ್ಷಿಸಬೇಕು. ಅದೇ ರೀತಿ ಇರುವ ಒಂದೇ ಭೂಮಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆದೆಂದು ತಿಳಿಸಿದರು. ನಮ್ಮ ಮಠಾಧಿಪತಿಗಳು, ಗುರುಪರಂಪರೆ ಸಾವಿರಾರು ವರ್ಷಗಳಿಂದ ಬದುಕಿದ್ದಾರೆ. ಹಲವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ವಿಚಾರಧಾರೆ, ಸಮಾಜಮುಖಿ ಕಾರ್ಯಗಳಿಂದ, ಹಿತನುಡಿಗಳಿಂದ ಅಜರಾಮವಾಗಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಧರ್ಮ ಚೇತನ, ಬಾಳ ಹೊಂಗಿರಣ ಕೃತಿ ಹಾಗೂ ರಂಭಾಪುರಿ ಬೆಳಗು ಮಾಸಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಜನ್ಮ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ರಂಭಾಪುರಿ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು ಹಾಗೂ ಕೇದಾರ ಶ್ರೀ ಭೀಮಾಶಂಕರಲಿಂಗ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಸಂಸದ ಮಂಜುನಾಥ್ ಕುನ್ನೂರು, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು ಮತ್ತಿತರರು ಹಾಜರಿದ್ದರು.

ರೋಬೋಟಿಕ್ ಆನೆ ಕೊಡುಗೆ ನೀಡಿದ ನಟಿ ಶಿಲ್ಪಾ ಶೆಟ್ಟಿ

ಬಾಳೆಹೊನ್ನೂರು: ಇಲ್ಲಿನ ರಂಭಾಪುರಿ ಪೀಠಕ್ಕೆ ಸಿಯುಪಿಎ ಮತ್ತು ಪಿಇಟಿಎ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಅವರು ಕೊಡುಗೆ ನೀಡಿರುವ ರೋಬೋಟಿಕ್ ಆನೆಯನ್ನು ರಂಭಾಪುರಿ ಹಾಗೂ ಕೇದಾರ ಜಗದ್ಗುರುಗಳು ಭಾನುವಾರ ಉದ್ಘಾಟಿಸಿದರು.

ಆನೆಗಳನ್ನು ಸಾಕುವುದರಿಂದ ಅವುಗಳ ಸ್ವಚ್ಛಂದ ವಿಹಾರಕ್ಕೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಪರಿಸರ ಕಾಳಜಿಯೊಂದಿಗೆ ಪೆಟಾ ಸಂಸ್ಥೆಯ ಮಹತ್ ಉದ್ದೇಶದೊಂದಿಗೆ ನಟಿ ಶಿಲ್ಪಾ ಶೆಟ್ಟಿ ಅವರು ₹೮ ಲಕ್ಷದಲ್ಲಿ ನೀಡಿರುವ ಆನೆಯನ್ನು ಭಕ್ತರ ಸಮ್ಮುಖದಲ್ಲಿ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು.

ನೋಡಲು ನಿಜವಾದ ಆನೆಯಂತೆ ಕಾಣುವ ರೋಬೋಟಿಕ್ ಆನೆ ಸದಾ ಕಿವಿ, ತಲೆ, ಹಾಗೂ ಬಾಲವನ್ನ ಅಲುಗಾಡಿಸುತ್ತಿದ್ದು, ಸೊಂಡಿಲನ್ನು ಎತ್ತಿ ಆಶೀರ್ವದಿಸುತ್ತಿದೆ. ನೋಡಿದ ಕೂಡಲೇ ನಿಜವಾದ ಆನೆ ಎಂದೇ ಭಾಸವಾಗುತ್ತಿದೆ. ರಂಭಾಪುರಿ ಪೀಠದ ಮುಂಭಾಗದಲ್ಲಿ ಇರಿಸಿರುವ ಈ ಆನೆ ಇದೀಗ ಭಕ್ತರ ಗಮನಸೆಳೆದಿದ್ದು, ಸಚಿವ ಈಶ್ವರ್ ಖಂಡ್ರೆ, ಕೆ.ಜೆ.ಜಾರ್ಜ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನೆ ಉದ್ಘಾಟನೆಗೊಳ್ಳುತ್ತಿದ್ದಂತೆ ಭಕ್ತರು ಆನೆಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.