ಅಗತ್ಯ ಬಿದ್ದರೆ ಅಧಿಕಾರಿಗಳು ಜನರ ಮನೆಗೆ ತೆರಳಿ ಕೆಲಸ ಮಾಡಲಿ: ಮಂಕಾಳ ವೈದ್ಯ

| Published : Sep 25 2024, 12:53 AM IST

ಅಗತ್ಯ ಬಿದ್ದರೆ ಅಧಿಕಾರಿಗಳು ಜನರ ಮನೆಗೆ ತೆರಳಿ ಕೆಲಸ ಮಾಡಲಿ: ಮಂಕಾಳ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳು ಜನರ ಕೆಲಸ ಮಾಡಿಕೊಡಬೇಕು. ಕಚೇರಿ ಬಿಟ್ಟು ತಿರುಗಾಡಿ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು.

ಭಟ್ಕಳ: ಸರ್ಕಾರದ ಯೋಜನೆಗಳು ಜನರಿಗೆ ಸರಿಯಾಗಿ ತಲುಪಬೇಕು. ಇದು ಅಧಿಕಾರಿಗಳು ಕ್ರಿಯಾಶೀಲರಾದರೆ ಮಾತ್ರ ಸಾಧ್ಯ. ಅಧಿಕಾರಿಗಳು ಸದಾ ಕಚೇರಿಯಲ್ಲೇ ಕುಳಿತುಕೊಳ್ಳದೇ ಅಗತ್ಯ ಬಿದ್ದರೆ ಜನರ ಮನೆಗಳಿಗೆ ಹೋಗಿ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಸೂಚಿಸಿದರು.

ಇಲ್ಲಿನ ತಾಪಂ ಸಭಾಭವನದಲ್ಲಿ ಮಂಗಳವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಜನರ ಕೆಲಸ ಮಾಡಿಕೊಡಬೇಕು. ಕಚೇರಿ ಬಿಟ್ಟು ತಿರುಗಾಡಿ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಸಮಯವಿದ್ದರೆ ಅಧಿಕಾರಿಗಳು ಸ್ಥಳೀಯ ಶಾಲೆ, ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು, ತಾಲೂಕಿನಲ್ಲಿ ಇಬ್ಬರಿಗೆ ಕಾಲರಾ ಬಂದಿದ್ದು, ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆಂದಾಗ, ಸಚಿವರು ಮಾರಕ ಕಾಯಿಲೆ ಬಗ್ಗೆ ಎಲ್ಲೆಡೆ ಜನಜಾಗೃತಿ ಮೂಡಿಸಬೇಕು ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಸಂಖ್ಯೆ ಕಡಿಮೆ ಇದ್ದು, ಬೇರೆ ತಾಲೂಕಿನಿಂದ ನರ್ಸ್‌ಗಳನ್ನು ನಿಯೋಜನೆ ಮಾಡಬೇಕು ಎಂದು ಆರೋಗ್ಯಾಧಿಕಾರಿ ಸಚಿವರ ಗಮನಕ್ಕೆ ತಂದಾಗ, ಭಟ್ಕಳ ಸರ್ಕಾರಿ ಆಸ್ಪತ್ರೆ 250 ಹಾಸಿಗೆಯ ಆಸ್ಪತ್ರೆ ಆದರೆ ಮಾತ್ರ ಸಿಬ್ಬಂದಿ ಸಮಸ್ಯೆ ಬಗೆಹರಿಸಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.

ಹೆಸ್ಕಾಂ ಅಭಿಯಂತರ ಮಂಜುನಾಥ ಅವರು 110 ಕೆವಿ ವಿದ್ಯುತ್ ಸ್ಟೇಷನ್ ಕಾಮಗಾರಿ ನಡೆಯುತ್ತಿದ್ದು, 70 ಟವರ್‌ಗಳಲ್ಲಿ ಈಗಾಗಲೇ 13 ಟವರ್ ಕಾರ್ಯ ಮುಗಿಸಲಾಗಿದೆ. ಕೆಲಸ ತ್ವರಿತವಾಗಿ ನಡೆಯುತ್ತಿದೆ. ತಾಲೂಕಿನಲ್ಲಿ ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸ ನಡೆಯುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.

ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಬಸ್ ಓಡಿಸಬೇಕು. ಬೆಣಂದೂರು- ಹದ್ಲೂರು ಭಾಗಕ್ಕೆ ಈ ಹಿಂದಿನಂತೆ ಬಸ್ಸನ್ನು ಆರಂಭಿಸಬೇಕು ಎಂದು ಸಚಿವರು ಸೂಚಿಸಿದರು. ಶಕ್ತಿ ಯೋಜನೆ ಬಗ್ಗೆ ಕೆಲವು ಕಂಡಕ್ಟರ್‌ಗಳು ಮಹಿಳೆಯರಿಗೆ ಗೇಲಿ ಮಾಡುತ್ತಿದ್ದು, ಮತ್ತೊಮ್ಮೆ ಇದು ಪುನರಾವರ್ತನೆ ಆದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಇಂತಹ ವರ್ತನೆ ಮುಂದುವರಿದಲ್ಲಿ ನಿರ್ದಾಕ್ಷಿಣ್ಯವಾಗಿ ಅಂಥವರನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪುರಸಭೆ , ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ನೀಲನಕ್ಷೆ ಸಿದ್ಧಪಡಿಸಿ ಎಂದು ಮುಖ್ಯಾಧಿಕಾರಿಗಳಿಗೆ ಸಚಿವರು ಸೂಚಿಸಿದರು. ತಾಲೂಕಿನಲ್ಲಿ ತುರ್ತಾಗಿ 200 ಕಿರು ಸೇತುವೆ ಅಗತ್ಯವಿದೆ. ಇದನ್ನು ಮಂಜೂರಿಸುವ ಪ್ರಯತ್ನ ನಡೆದಿದೆ ಎಂದರು.

ಪುರಸಭೆ ಉಪಾಧ್ಯಕ್ಷ ಅಲ್ತಾಫ್‌ ಖರೂರಿ ಅವರು, ಹೆದ್ದಾರಿ ಸಮಸ್ಯೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆಂದು ಸಚಿವರ ಗಮನಕ್ಕೆ ತಂದಾಗ, ಸಚಿವರು ರಾಷ್ಟ್ರೀಯ ಹೆದ್ದಾರಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದೆ. ಹೆದ್ದಾರಿ ಕಾಮಗಾರಿ ಬಗ್ಗೆ ಸಾಕಷ್ಟು ಸಲ ಧ್ವನಿ ಎತ್ತಿದ್ದೇನೆ. ಹೆದ್ದಾರಿಯನ್ನು ಐಆರ್‌ಬಿಗೆ ಮಾರಾಟ ಮಾಡಿದಂತಿದೆ ಎಂದ ಸಚಿವರು, ಮುಂದಿನ ದಿನಗಳಲ್ಲಿ ಹೆದ್ದಾರಿ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಆಡಳಿತಾಧಿಕಾರಿ ಸರೋಜಿನಿ, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಮತ್ತು ಬಿಇಒ ವೆಂಕಟೇಶ ನಾಯಕ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ರಾಜು ನಾಯ್ಕ ಕೊಪ್ಪ ಸೇರಿದಂತೆ ಕೆಡಿಪಿ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.