ಸಾರಾಂಶ
ಕೊಪ್ಪಳ: ಇಲ್ಲಿಯ ಅಧಿಕಾರಿಗಳಿಗೆ ಮಾನವೀಯತೆ ಇಲ್ಲ. ರೈತರನ್ನು ಅತ್ಯಂತ ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿದೆ. ದೇಹ ಬೆಳೆದಿದೆ, ಆದರೆ ಬುದ್ಧಿ ಬೆಳೆದಿಲ್ಲ. ನಿಮಗೆ ಮಾನವೀಯತೆ ಇದ್ದಿದ್ದರೆ ಇಂತಹ ನಿರ್ಲಕ್ಷ್ಯ ಮಾಡುತ್ತಿರಲಿಲ್ಲ. ಇಂತಹ ವರ್ತನೆ ಮುಂದುವರಿಸಿದರೆ ನಿಮ್ಮನ್ನೇ ಜೈಲಿಗೆ ಕಳಿಸುತ್ತೇನೆ ಎಂದು ಶುಕ್ರವಾರ ಸಹ ತಾಲೂಕಿನ ನಾನಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯ ಕಂಡು ಅಧಿಕಾರಿ ವರ್ಗದವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಉಪಲೋಕಾಯುಕ್ತ ಬಿ.ವೀರಪ್ಪ ಶುಕ್ರವಾರ ಬೆಳ್ಳಂಬೆಳಗ್ಗೆ ನಗರದ ಹೊರ ವಲಯದ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಪರಿಸ್ಥಿತಿ ಕಂಡು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.ಬೆಳಗ್ಗೆ ೬.೩೦ಕ್ಕೆ ಎಪಿಎಂಸಿಗೆ ಭೇಟಿ ನೀಡಿದ ಅವರು, ರೈತರಿಗೆ ಮೂಲ ಸೌಕರ್ಯ ಕೊರತೆ ಗಮನಿಸಿ ಇಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯೇ ಇಲ್ಲ, ರಸ್ತೆ ಇಲ್ಲ. ರೈತರಿಗೆ ಶೌಚಾಲಯ ಮತ್ತು ಕುಡಿವ ನೀರಿನ ಸೌಲಭ್ಯ ಇಲ್ಲ ? ನೀವು ಏನು ಮಾಡುತ್ತಿದ್ದೀರಿ? ರೈತರು ಹಾಗೂ ವರ್ತಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ನೀವು ಯಾರೂ ಇಲ್ಲಿ ಬಂದು ರೈತರ ಸಮಸ್ಯೆ ಗಮನಿಸಿಲ್ಲ. ಜನರಿಗೆ ಜಾಗೃತಿ ಮೂಡಿಸುತ್ತಿಲ್ಲ. ಅಧಿಕಾರಿಗಳಾಗಿ ನಿಮ್ಮ ಜವಾಬ್ದಾರಿ ಎಲ್ಲಿಗೆ ಹೋಯ್ತು ?ಎಂದು ಕ್ಲಾಸ್ ತೆಗೆದುಕೊಂಡರು.
ವರ್ತಕರ ಕಮಿಷನ್ ಗೆ ಕೊಕ್ಕೆ: ತರಕಾರಿ ಮಾರಾಟದ ವೇಳೆ ರೈತರಿಂದ ವರ್ತಕರು ₹೧೦ ಕಮಿಷನ್ ವಸೂಲಿ ಮಾಡುತ್ತಿರುವುದನ್ನು ಗಮನಿಸಿದ ಉಪ ಲೋಕಾಯುಕ್ತರು ವರ್ತಕರು ಕಮಿಷನ್ ಪಡೆಯುವಂತಿಲ್ಲ ಎಂದು ಸ್ಥಳದಲ್ಲಿದ್ದ ಎಪಿಎಂಸಿ ಅಧಿಕಾರಿಗಳ ಮೇಲೆ ಸಿಟ್ಟಿಗೆದ್ದರು. ರೈತರಿಂದ ಕಮಿಷನ್ ಪಡೆಯುವುದಕ್ಕೆ ಯಾವುದೇ ಕಾನೂನು ಇಲ್ಲ.ನೀವು ಕಣ್ಣುಮುಚ್ಚಿ ಈ ಅಕ್ರಮಕ್ಕೆ ಅವಕಾಶ ಕೊಡುತ್ತಿದ್ದೀರಾ ? ರೈತರ ಶೋಷಣೆಗೆ ಕಾರಣರಾಗುತ್ತಿದ್ದೀರಾ ? ಎಂದು ಪ್ರಶ್ನಿಸಿದರು.ಎಪಿಎಂಸಿ ಅವ್ಯವಸ್ಥೆಯ ಬಗ್ಗೆ ನಿಗಾ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಅವರಿಗೆ ಸೂಚನೆ ನೀಡಿದರು.
ಬೆಳಗ್ಗೆ ತರಕಾರಿ ಮಾರುಕಟ್ಟೆ ಆರಂಭಿಸಿ: ತರಕಾರಿ ಮಾರುಕಟ್ಟೆ ನಿತ್ಯ ರಾತ್ರಿ ೨ ಗಂಟೆಗೆ ನಡೆಯುವ ವಿಷಯ ತಿಳಿದ ಅವರು, ಇದು ರಾಜ್ಯದ ಯಾವುದೇ ಎಪಿಎಂಸಿಯಲ್ಲಿ ಇಲ್ಲದ ಈ ವ್ಯವಸ್ಥೆ ಇಲ್ಲೇಕೆ ನಡೆಯುತ್ತಿದೆ. ರಾತ್ರಿ ತರಕಾರಿ ವ್ಯಾಪಾರ ನಡೆಯುವುದು ಕಳ್ಳರ ಸಂತೆಯಾಗುತ್ತಿದೆ. ಇಂತಹ ವ್ಯವಹಾರ ತಕ್ಷಣ ನಿಲ್ಲಿಸಬೇಕು. ಬೆಳಗಿನ ೫.೩೦ಕ್ಕೆ ಮಾತ್ರ ಮಾರುಕಟ್ಟೆ ಆರಂಭಿಸಬೇಕು. ರೈತರ ವಿಷಯದಲ್ಲಿ ಯಾರೇ ನಿರ್ಲಕ್ಷ್ಯ ವಹಿಸಿದರೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.ಹಮಾಲರಿಗೆ ವಿಮೆ ಕಡ್ಡಾಯ: ಎಪಿಎಂಸಿಯಲ್ಲಿ ಕೆಲಸ ಮಾಡುವ ಹಮಾಲರಿಗೆ ವಿಮೆ ಮಾಡಲಾಗಿದೆಯೇ ಎಂದು ವಿಚಾರಿಸಿದ ಅವರು, ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಸಿಗದಿದ್ದಾಗ ಅವರು ಕೋಪಗೊಂಡು ತಕ್ಷಣ ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೇ ಕರೆಯಿಸಿ ಹಮಾಲರಿಗೆ ತಕ್ಷಣ ವಿಮೆ ಮಾಡಿಸಬೇಕು, ಇಲ್ಲದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಸ್ಥಳದಲ್ಲಿದ್ದ ಮಹಿಳಾ ಅಧಿಕಾರಿಗೆ ನೇರ ಸೂಚನೆ ನೀಡಿದರು.
ಹಾಜರಿರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ: ಉಪಲೋಕಾಯುಕ್ತರು ತಾಲೂಕಿನ ಬಹದ್ದೂರ್ ಬಂಡಿ ಗ್ರಾಪಂ ವ್ಯಾಪ್ತಿಯ ವಿವಿಧ ಕ್ರಷರ್ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆ ಅಧಿಕಾರಿ ಪುಷ್ಪಲತಾ ಸ್ಥಳಕ್ಕೆ ಭೇಟಿ ನೀಡದೆ ಅನಾರೋಗ್ಯದ ನೆಪ ಹೇಳುವುದು ಸರಿಯಲ್ಲ. ನಾವು ಎರಡು ತಿಂಗಳ ಹಿಂದೆ ಭೇಟಿ ಮಾಡುವುದಾಗಿ ತಿಳಿಸಿದ್ದರೂ ಅಧಿಕಾರಿಗಳು ಬಾರದಿರುವುದು ಗಂಭೀರ ವಿಷಯ. ಅವರಿಂದಲೇ ವ್ಯವಸ್ಥೆ ಹಾಳಾಗುತ್ತಿದೆ. ಪುಷ್ಪಲತಾ ಅವರಿಗೆ ನೋಟಿಸ್ ಜಾರಿಗೊಳಿಸಿ. ಅವರಿಗೆ ಎಷ್ಟು ಧಿಮಾಕು ಎಂದರಲ್ಲದೇ ಅನಾರೋಗ್ಯ ಎಂದು ಹೇಳಿದ ಅವರ ಮೆಡಿಕಲ್ ರಿಪೋರ್ಟ್ ಲೋಕಾಯುಕ್ತ ಕಚೇರಿಗೆ ಕಳುಹಿಸಲು ಸೂಚಿಸಿದರು.ಸರ್ಕಾರಕ್ಕೆ ಬರಬೇಕಾದ ರಾಜಸ್ವ ಪಾವತಿ ಮಾಡದೆ ಕ್ರಷರ್ ಘಟಕಗಳು ಕೆಲಸ ಮಾಡುತ್ತಿವೆ. ರಾಜಧನ ಪಾವತಿಸಿದ ಘಟಕಗಳಿಗೆ ಮಾತ್ರ ಅನುಮತಿ ನೀಡಬೇಕು. ಪಾವತಿ ಮಾಡದ ಘಟಕಗಳನ್ನು ಬಂದ್ ಮಾಡಬೇಕು ಎಂದರು.
;Resize=(128,128))
;Resize=(128,128))
;Resize=(128,128))