ಪತ್ರಿಕೆಗಳು ಜನಹಿತ ಮರೆತರೆ ಸಮಾಜಕ್ಕೆ ಕಂಟಕ

| Published : Jul 21 2025, 01:30 AM IST

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಸರ್ಕಾರದ ವೈಪಲ್ಯಗಳನ್ನು, ಸಮಾಜದ ಅಂಕುಡೊಂಕು, ಭ್ರಷ್ಟಾಚಾರ ನಿಯಂತ್ರಿಸಲು, ಸರ್ಕಾರದಿಂದ ವಂಚಿತರಾದ ಜನರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಪತ್ರಿಕೆಗಳು ಹಾಗೂ ಪತ್ರಕರ್ತರು ನಿರಂತರ ಮಾಡುತ್ತಾ ಬಂದಿದ್ದು, ಅವರ ಪರಿಶ್ರಮದ ಫಲವಾಗಿ ಇಂದು ಸಮಾಜದಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ. ಪತ್ರಿಕೆಗಳು ಜನರ ಹಿತವನ್ನು ಮರೆತರೆ ಸಮಾಜಕ್ಕೆ ಕಂಟಕಪ್ರಾಯವೆಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಭಾನುವಾರ ತಾಪಂ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯದ ಯಾವುದೇ ಮೂಲೆಯಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ನಡೆದರೆ ಆ ಬಗ್ಗೆ ಖಂಡಿಸಿ ಹೋರಾಟ ನಡೆಸುತ್ತಾ ಬಂದಿದೆ. ಸರ್ಕಾರ ದಿನಪತ್ರಿಕೆ ಮತ್ತು ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದರು.

ಹಿರಿಯ ನ್ಯಾಯವಾದಿ ಕೆ.ಎಂ.ನಾಗರಾಜು, ಸಾಹಿತಿ, ಪತ್ರಕರ್ತ ಕರ‍್ಲಕುಂಟೆ ತಿಪ್ಪೇಸ್ವಾಮಿ, ಪತ್ರಿಕಾ ರಂಗದ ಆಗು ಹೋಗುಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ ಬಾಬು, ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ, ಉಪಾಧ್ಯಕ್ಷೆ ಕವಿತಾ ಬೋರಯ್ಯ, ಸದಸ್ಯರಾದ ಮಂಜುಳಾ, ನನ್ನಿವಾಳ ಗ್ರಾಪಂ ಅಧ್ಯಕ್ಷೆ ಶಿವಮ್ಮ, ಬೆಂಗಳೂರು ನಗರ ಅಧ್ಯಕ್ಷ ರುದ್ರಮುನಿ, ಜಿಲ್ಲಾಧ್ಯಕ್ಷ ಆರ್.ದ್ಯಾಮರಾಜ್, ದಿನೇಶ್, ಶಂಕರ್, ಡಿ.ವೀರಣ್ಣ, ಜಾಲಿಮಂಜು, ಮುರುಡೇಗೌಡ, ಚಿದಾನಂದ ಮೂರ್ತಿ ಮುಂತಾದವರು ಭಾಗವಹಿಸಿದ್ದರು. ಇದೇ ವೇಳೆ ಪತ್ರಕರ್ತರಾದ ರಾಮಾಂಜನೇಯ ಮತ್ತು ನಗರಸಭೆ ಅಧ್ಯಕ್ಷೆ ಶಿಲ್ಪ ಮುರುಳಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.