ಕನ್ನಡಪ್ರಭ ವಾರ್ತೆ ತುಮಕೂರು
ಕೃಷಿ ಹಾಗೂ ರೈತರು ಗೆದ್ದರೆ ಇಡೀ ದೇಶವೇ ಗೆದ್ದಂತೆ ಎಂದು ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ‍್ಯ ಸ್ವಾಮೀಜಿ ಹೇಳಿದರು.ಗುಬ್ಬಿ ತಾಲೂಕಿನ ದೊಡ್ಡಗುಣಿಯ ಹಿರೇಮಠದಲ್ಲಿ ರೇವಣಸಿದ್ದೇಶ್ವರ ಶಿವಾಚಾರ‍್ಯ ಸ್ವಾಮಿಜಿಯವರ 39ನೇ ಪಟ್ಟಾಧಿಕಾರ ಹಾಗೂ ಜನ್ಮ ವರ್ಧಂತಿ ಕಾರ‍್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಇಂತಹ ಕಾರ‍್ಯಕ್ರಮಗಳಲ್ಲಿ ಧರ್ಮ ದೇವರು ಸಂಸ್ಕಾರ ಸಂಸ್ಕೃತಿಯ ಜೊತೆಯಲ್ಲಿ ನಮ್ಮ ರೈತರಿಗೆ ಬೇಕಾದಂತಹ ಮಾಹಿತಿಯನ್ನು ನೀಡಬೇಕು ಎಂಬ ಹಿನ್ನೆಲೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ರೈತರಿಂದ ಕೃಷಿಯ ಮಾಹಿತಿ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಮಾಹಿತಿ ಹಾಗೂ ಜಾಗತಿಕ ತಾಪಮಾನ ಹೆಚ್ಚಳದಂತ ಸಮಸ್ಯೆಗಳನ್ನ ಬಗೆಹರಿಸಲು ಇಲ್ಲಿಗೆ ಆಗಮಿಸಿರುವಂತಹ ಪ್ರತಿಯೊಬ್ಬ ಭಕ್ತಾದಿಗಳಿಗೂ ಸಾವಿರದ ಒಂದು ಸಸಿಗಳನ್ನು ನೀಡುವ ಮೂಲಕ ಈ ವಿಶೇಷ ಕಾರ‍್ಯಕ್ರಮ ಮಾಡಲಾಗಿದೆ ಎಂದರು.ಕೃಷಿಗೆ ಇಂದು ಸರಿಯಾದ ಮಾರುಕಟ್ಟೆಯಾಗಲಿ, ರೈತರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಮಾಡಬೇಕಾಗಿದೆ. ರೈತರ ಬದುಕಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತರು ಬೆಳೆಯುವಂತಹ ಅಡಿಕೆ ತೆಂಗು ಬಾಳೆ ಮಾತ್ರವಲ್ಲದೆ ಸಮಗ್ರ ಕೃಷಿಯ ಬಗ್ಗೆ ಮಾಹಿತಿ ತಿಳಿಸುವ ಕೆಲಸ ಪ್ರತಿ ಕಾರ‍್ಯಕ್ರಮದಲ್ಲಿ ನಡೆಯಬೇಕಿದೆ. ಆರೋಗ್ಯದ ವಿಚಾರದಲ್ಲಿ ನಾವೆಲ್ಲರೂ ಇಂದು ಸಾಕಷ್ಟು ಯೋಚನೆ ಮಾಡಬೇಕಾಗಿದ್ದು, ನಾವು ತಿನ್ನುತ್ತಿರುವಂತಹ ಆಹಾರದಲ್ಲಿ ಯಾವ ಗುಣಮಟ್ಟವಿದೆ ಎಂಬುದನ್ನು ಅರಿಯಬೇಕಾಗಿದೆ ಎಂದರು.
ರಾಜ್ಯ ಪ್ರಶಸ್ತಿ ವಿಜೇತ ರೈತ ಶಂಕರಪ್ಪ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಇಂದು ಅಡಿಕೆ ಬೆಳೆ ಅತ್ಯಧಿಕವಾಗಿ ಬೆಳವಣಿಗೆ ಆಗುತ್ತಿದ್ದು, ಮುಂದಿನ ದಿನದಲ್ಲಿ ಅದು ನಮ್ಮ ರೈತರ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಯಾರು ಮರೆಯವಂತಿಲ್ಲ. ಹಾಗಾಗಿ ರೈತರು ತೆಂಗು ಅಡಿಕೆ ಬಾಳೆಯ ಜೊತೆಯಲ್ಲಿ ಬೇರೆ ಮಿಶ್ರ ಕೃಷಿಯನ್ನು ಸಹ ಮಾಡಬೇಕಾಗಿದ್ದು ಅದರಲ್ಲೂ ಗುಬ್ಬಿ ತಾಲೂಕು ಮಲೆನಾಡಿನಂತಾಗಿದ್ದು ಮಲೆನಾಡಿನಲ್ಲಿ ಬೆಳೆಯುವಂತಹ ಮಸಾಲ ಪದಾರ್ಥಗಳಿಗೂ ಇಲ್ಲಿ ಬೆಳೆಯಲು ಅವಕಾಶವಿದ್ದು ಅದನ್ನು ಸಮಗ್ರ ಕೃಷಿಯಾಗಿ ಮಾರ್ಪಾಡು ಮಾಡಬೇಕು ಎಂದು ತಿಳಿಸಿದರು.
ಗುರುಸಿದ್ದೇಶ್ವರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ದಕ್ಷಿಣ ಮೂರ್ತಿ, ಶಾಸಕ ಸಿಬಿ ಸುರೇಶ್ ಬಾಬು, ಅಖಿಲ ಭಾರತ ವೀರಶೈದ ಮಹಾಸಭಾದ ಕಾರ‍್ಯದರ್ಶಿ ಸಾಗರನಳ್ಳಿ ನಟರಾಜು, ಮುಖಂಡರಾದ ಚಂದ್ರಶೇಖರ ಬಾಬು,ಎನ್ ಸಿ ಪ್ರಕಾಶ್ ಸಾಗರನಹಳ್ಳಿ ವಿಜಯಕುಮಾರ್, ಡಾ. ಮುರುಳಿ ಧರ್ ಅನಾ ಲಿಂಗಪ್ಪ,ಶಿವಕುಮಾರ್, ಬೀರೂರು ಶಿವಸ್ವಾಮಿ, ಶ್ರೀ ಮಠದ ವ್ಯವಸ್ಥಾಪಕ ಧನುಶ್ ಹಾಗೂ ದೊಡ್ಡಗುಣಿಯ ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಸ್ಥರು, ಭಕ್ತಾದಿಗಳು ಹಾಜರಿದ್ದರು.
