ತಂದೆ ತಾಯಿ ಪೋಷಿಸದಿದ್ದರೆ ಆಸ್ತಿ ವಾಪಸು: ನ್ಯಾ. ವಿ.ಹನುಮಂತಪ್ಪ

| Published : Sep 17 2025, 01:05 AM IST

ತಂದೆ ತಾಯಿ ಪೋಷಿಸದಿದ್ದರೆ ಆಸ್ತಿ ವಾಪಸು: ನ್ಯಾ. ವಿ.ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ತಂದೆ ತಾಯಿಯಿಂದ ಆಸ್ತಿ ಪಡೆದ ನಂತರ ಅವರ ಪಾಲನೆ, ಪೋಷಣೆ ಮಾಡದಿದ್ದರೆ ಕಾನೂನಿನ ಮೂಲಕ ಆಸ್ತಿ ವಾಪಸ್ಸು ಪಡೆದುಕೊಳ್ಳುವ ಅವಕಾಶವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.

- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಂದೆ ತಾಯಿಯಿಂದ ಆಸ್ತಿ ಪಡೆದ ನಂತರ ಅವರ ಪಾಲನೆ, ಪೋಷಣೆ ಮಾಡದಿದ್ದರೆ ಕಾನೂನಿನ ಮೂಲಕ ಆಸ್ತಿ ವಾಪಸ್ಸು ಪಡೆದುಕೊಳ್ಳುವ ಅವಕಾಶವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಕೆಂಪನಹಳ್ಳಿ ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಿರಿಯರ ಹಿತ ಕಾಪಾಡುವ ಸಲುವಾಗಿ ಹಿರಿಯರ ಪೋಷಣೆ ಮತ್ತು ಸಂರಕ್ಷಣೆಗೆ ಕಾಯ್ದೆ ಜಾರಿಗೆ ಬಂದಿದೆ ಎಂದ ಅವರು, ಜಿಲ್ಲಾ ಕಾನೂನು ಪ್ರಾಧಿಕಾರ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ತಮ್ಮ ಹಕ್ಕುಗಳು ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸುವ ಕೆಲಸ ಕೂಡ ಮಾಡುತ್ತಿದೆ ಎಂದು ಹೇಳಿದರು.ಈ ದಿನ ಹಿರಿಯರ ಹಕ್ಕುಗಳನ್ನು ಗೌರವಿಸಲು ಮತ್ತು ಅವರ ಮಾರ್ಗದರ್ಶನ ಅನುಸರಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ದಿನವನ್ನು ಸುಂದರಗೊಳಿಸಲು, ನಿಮ್ಮ ಪೋಷಕರು, ಅಜ್ಜಿಯರು ಮತ್ತು ಮನೆಯಲ್ಲಿ ವಾಸಿಸುವ ಇತರ ಹಿರಿಯರೊಂದಿಗೆ ಸಮಯ ಕಳೆಯಿರಿ. ಅವರಿಗೆ ಇದಕ್ಕಿಂತ ಉತ್ತಮ ಉಡುಗೊರೆ ಇನ್ನೊಂದಿಲ್ಲ ಎಂದರು.ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ಜಗತ್ತಿನಲ್ಲಿ 800 ಕೋಟಿ ಜನ 221 ದೇಶಗಳಲ್ಲಿ ಇಂದು ವಿಶೇಷವಾಗಿ ಹಿರಿಯರನ್ನು ಗೌರವಿಸುವ ದಿನ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.ಈ ದಿನವೂ ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆ ಗುರುತಿಸಲು ಹಾಗೂ ಅವರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು, ಅವರಿಗೆ ಪರಿಹರಿಸುವ ಮಾರ್ಗ ತಿಳಿಸಲು ಅವಕಾಶ ಕಲ್ಪಿಸುತ್ತದೆ. ಯುವಕರ ಜೀವನ ವೇಗವಾಗಿ ಓಡುತ್ತಿದೆ. ಈ ಸಮಯದಲ್ಲಿ ಮನೆಯಲ್ಲಿರುವ ವೃದ್ಧರು ಒಂಟಿತನಕ್ಕೆ ಗುರಿಯಾಗುತ್ತಾರೆ. ಇಂದು ವಿಶ್ವ ಹಿರಿಯ ನಾಗರಿಕರ ದಿನದ ಸಂದರ್ಭದಲ್ಲಿ ನಿಮ್ಮ ಮನೆಯ ಹಿರಿಯರೊಂದಿಗೆ ಕೆಲವು ಸುಂದರ ಕ್ಷಣಗಳನ್ನು ಕಳೆಯುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ವೈ. ಆಲದಾರ್ತಿ ಮಾತನಾಡಿ, ಈ ದಿನದ ಅಂಗವಾಗಿ ಹಿರಿಯ ನಾಗರಿಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದವರಿಗೆ ಬಹುಮಾನ ವಿತರಣೆ ಅಥವಾ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ಯುವ ಜನತೆ ಹಿರಿಯರಿಗೆ ಭಾರತೀಯ ಸಂಪ್ರದಾಯದಂತೆ ಗೌರವ ನೀಡಬೇಕು. ಜೊತೆಗೆ ಅವರ ಅನುಭವಗಳನ್ನು ಪಡೆದುಕೊಂಡು ಮುಂದೆ ತಮ್ಮ ಜೀವನಕ್ಕೂ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಡಿ.ಸಂತೋಷ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಗೋಪಾಲ ಕೃಷ್ಣ, ಜಿ.ಪಂ. ಉಪ ಕಾರ್ಯದರ್ಶಿ ಶಂಕರ ಕೊರವರ ಉಪಸ್ಥಿತರಿದ್ದರು. 16 ಕೆಸಿಕೆಎಂ 3ಚಿಕ್ಕಮಗಳೂರಿನ ಕೆಂಪನಹಳ್ಳಿಯ ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ.ಜೆ.ಪಿ.ಕೃಷ್ಣೇಗೌಡ ಉದ್ಘಾಟಿಸಿದರು.