ಜನರಲ್ಲಿ ಅರಿವು ಮೂಡಿಸಿದರೆ ಜಿಲ್ಲೆ ಬಾಲ ಕಾರ್ಮಿಕ ಮುಕ್ತ: ನ್ಯಾ. ಎಂ.ಪುರುಷೋತ್ತಮ

| Published : Jun 15 2024, 01:01 AM IST

ಸಾರಾಂಶ

ಉಡುಪಿ ಜಿಲ್ಲಾಡಳಿತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ನಡೆಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಪುರುಷೋತ್ತಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಬಾಲ ಕಾರ್ಮಿಕ ಪದ್ಧತಿ ಒಂದು ಅನಿಷ್ಟ ಪದ್ಧತಿಯಾಗಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಪುರುಷೋತ್ತಮ ಹೇಳಿದರು.

ಅವರು ನಗರದ ಜಿಲ್ಲಾಡಳಿತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ರಕ್ಷಣೆಗಾಗಿ ಸಂವಿಧಾನವು ಅನೇಕ ಕಾನೂನು ಹಾಗೂ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಕಾಯ್ದೆಗಳಲ್ಲಿ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ. ಸರ್ಕಾರವು ಮಕ್ಕಳ ಶ್ರೇಯೋಭಿವೃದ್ಧಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ. ಇವುಗಳನ್ನು ಮಕ್ಕಳು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಆಗ ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಯಾವುದೇ ಮಕ್ಕಳು ಅವರ ಬಾಲ್ಯದ ಜೀವನದಿಂದ ವಂಚಿತರಾಗಬಾರದು. ಅವರ ಭೌತಿಕ ಬೆಳವಣಿಕೆ ಪೂರಕವಾಗುವಂತಹ ವಾತಾವರಣವನ್ನು ಕಲ್ಪಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರ ಮೂಲಕ ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು. ಸುತ್ತಮುತ್ತಲಿನ ಪರಿಸರದಲ್ಲಿ ಬಾಲಕಾರ್ಮಿಕರಾಗಿ ಮಕ್ಕಳು ಕಾರ್ಯನಿರ್ವಹಿಸುತ್ತಿದ್ದಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು.

ಉಡುಪಿ ವಿಭಾಗದ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, 14 ವರ್ಷದ ಕೆಳಗಿನ ಮಕ್ಕಳನ್ನು ದುಡಿಸಲು ನಿಷೇಧವಿದ್ದು, ಇದನ್ನು ಉಲ್ಲಂಘಿಸಿ ಮಕ್ಕಳನ್ನು ದುಡಿಸಿದರೆ 6 ತಿಂಗಳಿನಿಂದ 2 ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ 20,000 ರಿಂದ 50,000 ರು. ಗಳ ವರೆಗೆ ದಂಡ ಈ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಭು ವಿ. ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಖಜಾನೆ ಇಲಾಖೆಯ ಉಪನಿರ್ದೇಶಕ ಗೋಪಾಲಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷ ರೊನಾಲ್ಡ್ ಫುರ್ಟಡೋ, ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ್, ವಿವಿಧ ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮೃತ ಸ್ವಾಗತಿಸಿದರು. ಪ್ರಕಾಶ್ ಕೆ. ಉಡುಪಿ ನಿರೂಪಿಸಿದರು. ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಶಿವಪ್ರಸಾದ್ ಎನ್.ಎಸ್. ವಂದಿಸಿದರು.