ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ‘ತುಡರ್’ ತುಳು ಸಿನಿಮಾ ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಂಡಿದೆ. ನಗರದ ಭಾರತ್ ಸಿನೆಮಾಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕರಾವಳಿ ಗ್ರೂಪ್ ಆಫ್ ಎಜುಕೇಷನ್ ಸಂಸ್ಥೆಯ ಚೇರ್‌ಮೆನ್ ಗಣೇಶ್ ರಾವ್ ಮಾತನಾಡಿ, ಬಿಡುಗಡೆಯಾಗಿರುವ ಈ ತುಳು ಸಿನಿಮಾ ತುಳು ತುಡರ್ ಚಿತ್ರರಂಗದಲ್ಲಿ ಹೊಸ ಬೆಳಕಾಗಿ ಮೂಡಿಬರಲಿ. ಸಮಾಜಕ್ಕೆ ಮನೋರಂಜನೆಯ ಜೊತೆಗೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಲಿ. ಸಂಸ್ಕೃತಿಗೆ ಪೂರಕವಾದ ಜಾತಿ ಧರ್ಮ ದ್ವೇಷವನ್ನು ಪಸರಿಸದೆ ಜನರನ್ನು ಒಂದುಮಾಡುವ ಸಿನಿಮಾಗಳು ಬರಲಿ ಎಂದು ಶುಭ ಹಾರೈಸಿದರು. ಚಿತ್ರನಟ ಅರವಿಂದ್ ಬೋಳಾರ್ ಮಾತನಾಡಿ, ತುಳು ಸಿನಿಮಾ ಬಿಡುಗಡೆ ಎಂದರೆ ಭಯವಾಗುತ್ತದೆ. ಸಿನಿಮಾ ಎಷ್ಟು ದಿನ ನಡೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ತುಡರ್ ಸಿನಿಮಾ ವೀಕ್ಷಿಸಿದವರು ಚಿತ್ರತಂಡವನ್ನು ಮೆಚ್ಚಿ ಬೆನ್ನುತಟ್ಟಿದ್ದಾರೆ. ಹೀಗಾಗಿ ನಮಗೆ ಧೈರ್ಯ ಬಂದಿದೆ ಎಂದರು.ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಸಿನಿಮಾ ಕುರಿತು ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ಗೆಲ್ಲಲು ತುಳುವರ ಆಶೀರ್ವಾದ ಅಗತ್ಯ ಎಂದರು.ದಾಯ್ಜಿ ವಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮಾತಾಡಿ, ಸಿನಿಮಾ ನೋಡಿದವರು ಬಹಳ ಸಮಯದ ಬಳಿಕ ಒಳ್ಳೆಯ ಸಿನಿಮಾ ನೋಡಿದ್ದಾಗಿ ಹೇಳುತ್ತಿದ್ದಾರೆ ಎಂದರು. ಭಾರತ್ ಸಿನೆಮಾಸ್‌ನ ಬಾಲಕೃಷ್ಣ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಮನೋಹರ್ ಶೆಟ್ಟಿ, ಉದಯ ಪೂಜಾರಿ ಬಲ್ಲಾಳ್ ಬಾಗ್, ಉಮೇಶ್ ರೈ ಪದವು ಮೇಗಿನಮನೆ, ಸ್ವರಾಜ್ ಶೆಟ್ಟಿ, ನಟ ಸಿದ್ದಾರ್ಥ್ ಶೆಟ್ಟಿ, ನಟಿ ದೀಕ್ಷಾ ಭಿಸೆ, ರೂಪ ವರ್ಕಾಡಿ, ನಿರ್ದೇಶಕ ತೇಜೇಶ್ ಪೂಜಾರಿ, ಪ್ರಕಾಶ್ ಮಹಾದೇವನ್, ವಿಲ್ಸನ್ ರೆಬೆಲ್ಲೋ, ವಿದ್ಯಾ, ಸಂಪತ್, ಹರೀಶ್ ಶೆಟ್ಟಿ, ವಿಕಾಸ್ ಪುತ್ರನ್, ಮೋಹನ್ ರಾಜ್, ಪ್ರೇಮ್ ಶೆಟ್ಟಿ ಸುರತ್ಕಲ್, ಹಂಚಿಕೆದಾರ ಸಚಿನ್ ಎಸ್. ಉಪ್ಪಿನಂಗಡಿ ಮತ್ತಿತರರು ಇದ್ದರು. ಚಿರಾಗ್ ಬಜಾಲ್ ನಿರೂಪಿಸಿದರು.
ತುಡರ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ತೆರೆ ಕಂಡಿದೆ.ಈಗಾಗಲೇ ತುಡರ್ ಸಿನಿಮಾ ವಿದೇಶ ಸಹಿತ ಮಂಗಳೂರು, ಉಡುಪಿ, ಪುತ್ತೂರು, ಸುರತ್ಕಲ್, ಪಡುಬಿದ್ರೆಯಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಪ್ರೇಕ್ಷಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಉತ್ತಮ ಚಿತ್ರಕತೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ. ನಾಯಕ ನಟ ಸಿದ್ದಾಥ್೯ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.