ಗರ್ಭಾಶಯದಲ್ಲಿದ್ದ 4.5 ಕೆಜಿ ಗಡ್ಡೆ ತೆಗೆದ ವೈದ್ಯರು

| Published : Jun 15 2024, 01:01 AM IST

ಗರ್ಭಾಶಯದಲ್ಲಿದ್ದ 4.5 ಕೆಜಿ ಗಡ್ಡೆ ತೆಗೆದ ವೈದ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೋರ್ವಳ ಹೊಟ್ಟೆಯಲ್ಲಿದ್ದ 4.5 ಕೆಜಿ ಗಡ್ಡೆಯನ್ನು ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೋರ್ವಳ ಹೊಟ್ಟೆಯಲ್ಲಿದ್ದ 4.5 ಕೆಜಿ ಗಡ್ಡೆಯನ್ನು ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಕೊಪ್ಪಳ ಮಹಾವಿದ್ಯಾಲಯದ ಅಧೀನದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂತಹ ಅಪರೂಪದ ವಿರಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಬಿಸರಳ್ಳ ಗ್ರಾಮದ 45 ವರ್ಷ ವಯಸ್ಸಿನ ಮಹಿಳೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರನ್ನು ಪರೀಕ್ಷಿಸಿದ ತಜ್ಞ ವೈದ್ಯ, ಪ್ರಸೂತಿ ವಿಭಾಗದ ಡಾ. ಬಿ.ಎಚ್. ನಾರಾಯಣಿ ಅಲ್ಟ್ರಾಸೌಂಡ್‌, ಸಿ.ಟಿ. ಸ್ಕ್ಯಾನ್, ರಕ್ತ ಪರಿಕ್ಷೆಗಳ ಮೂಲಕ ಗರ್ಭಾಶಯದಲ್ಲಿ ದೊಡ್ಡ ಗಡ್ಡೆಯೊಂದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 4.5 ಕೆ.ಜಿ ಗಾತ್ರದ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಇದೊಂದು ವಿರಳ ಮತ್ತು ಉಪರೂಪದ ಶಸ್ತ್ರಚಿಕಿತ್ಸೆಯಾಗಿದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಗರ್ಭಾಶಯದಲ್ಲಿ ಇಷ್ಟೊಂದು ಗಾತ್ರದ ಗಡ್ಡೆ ಇರುವುದಿಲ್ಲ. ಸುಮಾರು 500 ಗ್ರಾಂನಿಂದ 1 ಕೆಜಿ ವರೆಗಿನ ಗಡ್ಡೆ ಕಂಡು ಬರುತ್ತವೆ ಎಂದು ವೈದ್ಯರು ಹೇಳುತ್ತಾರೆ.

ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಬಿ.ಎಚ್. ನಾರಾಯಣಿ ವಹಿಸಿದ್ದರು. ಇವರಿಗೆ ಡಾ. ಧನಲಕ್ಷ್ಮೀ ಕೆ.ಆರ್., ಡಾ. ಸೀಮಾ ಬಿ.ಎನ್. ಹಾಗೂ ಡಾ. ರಾಜೇಶ ಬಿ.ಎನ್. ಸಹಕರಿಸಿದರು. ಅರವಳಿಕೆ ವಿಭಾಗದ ಡಾ. ಗೋಪಾಲ್ ಗೋಟುರು ಶಸ್ತ್ರಚಿಕಿತ್ಸೆ ಉದ್ದಕ್ಕೂ ರೋಗಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು.ನವಜಾತ ಶಿಶುವಿನ ಶವ ಪತ್ತೆ; ಪ್ರಕರಣ ದಾಖಲು:ಕುಷ್ಟಗಿ ತಾಲೂಕಿನ ಬೆನಕನಾಳ ವಲಯದ ಹನುಮಸಾಗರ-ಬೆನಕನಾಳ ರಸ್ತೆಯ ಪಕ್ಕದಲ್ಲಿ ಜೂ. 12ರ ಬೆಳಗ್ಗೆ 7.30ಕ್ಕೆ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದ್ದು, ಈ ಬಗ್ಗೆ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹನುಮಸಾಗರ-ಬೆನಕನಾಳ ರಸ್ತೆಯ ಪಕ್ಕದಲ್ಲಿ ಬೆಳಗಿನ ಜಾವ 5 ಗಂಟೆಯಿಂದ 6.30ರ ಅವಧಿಯಲ್ಲಿ ಶಿಶುವನ್ನು ಯಾರೋ ಎಸೆದು ಹೋಗಿದ್ದು, ಪತ್ತೆಯಾದಾಗ ಶಿಶು ಮೃತಪಟ್ಟಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಔಟ್‌ರೀಚ್ ವರ್ಕರ್ ದೇವರಾಜ ತಿಲಗರ್ ಹಾಗೂ ಕುಷ್ಟಗಿ ತಾಲೂಕಿನ ಬೆನಕನಾಳ ವಲಯದ ಅಂಗನವಾಡಿ ಮೇಲ್ವಿಚಾರಕಿ ಶೋಭಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ್ದು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ನಿರ್ದೇಶನದ ಮೇರೆಗೆ ನವಜಾತ ಶಿಶು ಎಸೆದು ಹೋದವರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೇವರಾಜ ಹನುಮಸಾಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ರನ್ವಯ ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಬಿಸಾಡದೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬಹುದಾಗಿದೆ. ಹಾಜರುಪಡಿಸಿದವರ ಮಾಹಿತಿಯನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. 1098-112 ಮಕ್ಕಳ ಉಚಿತ ಸಹಾಯವಾಣಿ ಮೂಲಕ ಮಾಹಿತಿ ನೀಡಬಹುದಾಗಿದೆ. ಆ ಮಗುವಿನ ಪೋಷಣೆ ಮತ್ತು ರಕ್ಷಣೆಯ ಜವಾಬ್ದಾರಿ ಸರ್ಕಾರದ್ದೇ ಆಗಿರುತ್ತದೆ. ನಂತರ ಮಗುವಿನ ಸೂಕ್ತ ಪಾಲನೆ, ಪೋಷಣೆ, ಪುನರ್‌ವಸತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.