ಪ್ರಜಾಪ್ರಭುತ್ವದ ಮೇಲೆ ರಾಜಕೀಯ ನಿಲ್ಲದಿದ್ದರೆ ಸ್ವಾತಂತ್ರ್ಯ ಸಾರ್ಥಕವಾಗದು: ಸಿಎಂ ಸಿದ್ದರಾಮಯ್ಯ

| Published : Mar 02 2024, 01:48 AM IST

ಪ್ರಜಾಪ್ರಭುತ್ವದ ಮೇಲೆ ರಾಜಕೀಯ ನಿಲ್ಲದಿದ್ದರೆ ಸ್ವಾತಂತ್ರ್ಯ ಸಾರ್ಥಕವಾಗದು: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಸಂವಿಧಾನಕ್ಕೆ ಅಪಾಯವಿದೆ. ಇದು ನಮ್ಮ ಮುಂದಿರುವ ಸವಾಲು. ಅನಂತ ಕುಮಾರ್ ಹೆಗ್ಡೆ ಎಂಬ ಮಂತ್ರಿಯಾಗಿದ್ದ ವ್ಯಕ್ತಿ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ. ಆದರೆ ಆತನ ಮೇಲೆ ಬಿಜೆಪಿ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದರೆ, ಆ ಪಕ್ಷದ ಉದ್ದೇಶ, ಧೋರಣೆ ಏನು ಎಂಬುದು ಸ್ಪಷ್ಟವಾಗುವುದಿಲ್ಲವೇ?.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಜಾಪ್ರಭುತ್ವದ ತಳಹದಿಯ ಮೇಲೆ ರಾಜಕೀಯ ಪ್ರಜಾಪ್ರಭುತ್ವ ನಿಲ್ಲದಿದ್ದರೆ ಸ್ವಾತಂತ್ರ್ಯ ಸಾರ್ಥಕವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಕಲಾಮಂದಿರದಲ್ಲಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಏರ್ಪಡಿಸಿರುವ ಪ.ಮಲ್ಲೇಶ್- 90 ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಆಶಯ ಭಾಷಣ ಮಾಡಿದರು.

ನಮ್ಮಲ್ಲಿ ಅಸಮಾನತೆ ಇದೆ. ಎಲ್ಲಿವರೆಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ದೊರೆಯುವುದಿಲ್ಲವೋ, ಅಲ್ಲಿಯವರೆಗೆ ಸಮಾನತೆ ಬರಲಾರದು. ಪ್ರಜಾಪ್ರಭುತ್ವದ ತಳಹದಿಯ ಮೇಲೆ ರಾಜಕೀಯ ಪ್ರಜಾಪ್ರಭುತ್ವ ನಿಲ್ಲದಿದ್ದರೆ ಸ್ವಾತಂತ್ರ್ಯ ಸಾರ್ಥಕವಾಗದು. ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನ ಶಕ್ತಿ ಇರಬೇಕು. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಬೇರ್ಪಡಿಸಲು ಸಾಧ್ಯವೇ ಇಲ್ಲ. ಬೆಸೆದುಕೊಂಡಿವೆ. ಈ ಮೂರು ಇಲ್ಲದ ಸ್ವಾತಂತ್ರ್ಯನಿರರ್ಥಕ ಎಂದರು.

ಬದ್ಧತೆ ಉಳ್ಳವರು ಕೈಯಲ್ಲಿ ಅಧಿಕಾರ ಇದ್ದರೆ ಸಂವಿಧಾನ ಶ್ರೇಷ್ಠವಾಗುತ್ತದೆ. ಗೌರವ ಇಲ್ಲದವರ ಕೈಲಿದ್ದರೆ ಶ್ರೇಷ್ಠ ಹೇಗಾಗುತ್ತದೆ. ಇದು ನಮ್ಮ ಮುಂದಿರುವ ಸವಾಲು. ಸಂವಿಧಾನದಲ್ಲಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ದುರ್ಬಲವಾದರೆ, ಅವುಗಳನ್ನು ಭ್ರಷ್ಟಗೊಳಿಸಿದರೆ ಸಂವಿಧಾನ ಹೇಗೆ ಉಳಿಯುತ್ತದೆ. ಅದರ ಧೇಯೋದ್ದೇಶ ಈಡೇರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪ್ರಸ್ತುತ ಸಂವಿಧಾನಕ್ಕೆ ಅಪಾಯವಿದೆ. ಇದು ನಮ್ಮ ಮುಂದಿರುವ ಸವಾಲು. ಅನಂತ ಕುಮಾರ್ ಹೆಗ್ಡೆ ಎಂಬ ಮಂತ್ರಿಯಾಗಿದ್ದ ವ್ಯಕ್ತಿ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ. ಆದರೆ ಆತನ ಮೇಲೆ ಬಿಜೆಪಿ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದರೆ, ಆ ಪಕ್ಷದ ಉದ್ದೇಶ, ಧೋರಣೆ ಏನು ಎಂಬುದು ಸ್ಪಷ್ಟವಾಗುವುದಿಲ್ಲವೇ? ಎಂದರು.

ಅನೇಕ ಶೂದ್ರರೂ ಕೂಡ ಬಿಜೆಪಿಗೆ ಹೋದರು. ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ಅವರೂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಿಂದುತ್ವ ಎಂಬುದು ಹಿಂದುತ್ವವಷ್ಟೇ. ಅದರಲ್ಲಿ ಗಟ್ಟಿಯಾದ ಹಿಂದುತ್ವ, ಮೃದು ಹಿಂದುತ್ವ ಎಂಬ ಎರಡು ಇದೆಯೇ? ಹಾಗೆ ಇರಲು ಸಾಧ್ಯವೇ? ಆದರೆ ಹೀಗೆ ಅಡ್ಡಗೋಡೆ ಮೇಲೆ ದೀಪ ಇಟ್ಟು, ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.

ಅನೇಕರು ಪಕ್ಷದ ನಾಯಕರು ಹೇಳಿದ್ದನ್ನೇ ನಂಬಿ ಅದನ್ನೇ ಪ್ರತಿಪಾದಿಸಲು ಹೋಗುತ್ತಾರೆ. ಪ್ರಧಾನಿ ನರೇಂದ್ರಮೋದಿ ಅವರು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಎಂದು ಹೇಳುತ್ತಾರೆ. ಆದರೆ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಯತ್ನಾಳ್‌ ಎಂಬಾತ, ಬುರ್ಕಾ ಹಾಕಿದವರು, ಗಡ್ಡ ಬಿಟ್ಟವರು, ಟೋಪಿ ಹಾಕಿದವರು ನಮ್ಮ ಕಚೇರಿಗೆ ಬರಬೇಡಿ ಅಂತಾರೆ. ಜನ ಇದಕ್ಕೂ ಚಪ್ಪಾಳೆ ಹೊಡೆಯುತ್ತಾರೆ, ಅದಕ್ಕೂ ಚಪ್ಪಾಳೆ ಹೊಡೆಯುತ್ತಾರೆ ಎಂದು ಅಣಕಿಸಿದರು.

ಒಂದು ವಿಷಯವನ್ನು ವಿಮರ್ಶೆ ಮಾಡುವ ಶಕ್ತಿ ಇಲ್ಲವಾದರೆ ಬಹಳ ಕಷ್ಟವಾಗುತ್ತದೆ. ಬಹಳಷ್ಟು ಮಂದಿಗೆ ಸಂವಿಧಾನದ ಪೀಠಿಕೆ ಗೊತ್ತಿಲ್ಲ. ಆದ್ದರಿಂದ ಈ ಬಾರಿ ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿಯನ್ನು ರಾಜ್ಯದಾದ್ಯಂತ ಆಯೋಜಿಸಿದೆ ಎಂದರು.

ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ಇನ್ನೂ ನೀಡಿಲ್ಲ. ರಾಜ್ಯದಿಂದ ಕೇಂದ್ರಕ್ಕೆ 4.50 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. ಆದರೆ ಕೊಟ್ಟಿರುವುದು ಮಾತ್ರ 58 ಸಾವಿರ ಕೋಟಿ. ಇದನ್ನು ಪ್ರಶ್ನಿಸಿದರೆ ದೇಶ ವಿಭಜನೆ ಮಾಡುತ್ತಿರುವುದಾಗಿ ಹೇಳುತ್ತಾರೆ. ಮೋದಿ ಅವರು ಗುಜರಾತ್‌ಮುಖ್ಯಮಂತ್ರಿ ಆಗಿದ್ದಾಗ ತೆರಿಗೆ ಪಾಲು ಕೇಳಿದ್ದರು, ಈಗ ನಾವು ಕೇಳಿದರೆ ದೇಶ ಒಡೆಯುತ್ತಿರುವುದಾಗಿ ಆರೋಪಿಸುತ್ತಾರೆ ಎಂದು ಟೀಕಿಸಿದರು.

ರಾಜಕೀಯವಾಗಿ ಅನ್ಯಾಯವನ್ನು ಅನ್ಯಾಯ ಎಂದು ಹೇಳಲು ಧ್ವನಿ ಇಲ್ಲವಾದರೆ ಪ್ರಜಾಪ್ರಭುತ್ವ ಎಂದು ಕರೆಯಬೇಕಾ? ನಾನು ಸುಳ್ಳು ಹೇಳುತ್ತಿರುವುದಾಗಿ ನನ್ನ ಮೇಲೆ ಬಿಜೆಪಿಯವರು ಆರೋಪ ಮಾಡಿದರು. ರೈಲ್ವೆ ಯೋಜನೆ, ರಸ್ತೆ ನಿರ್ಮಾಣ ಮಾಡುವುದಿಲ್ಲವೇ ಎಂದರು. ರೈಲ್ವೆಯಿಂದ ಸಂಗ್ರಹವಾಗುವ ಆದಾಯದಲ್ಲಿ ರಾಜ್ಯಕ್ಕೆ ಪಾಲು ನೀಡುತ್ತಾರೆಯೇ? ದೇಶ ಸರಿ ದಾರಿಯಲ್ಲಿ ಹೋಗುತ್ತಿಲ್ಲ ಎಂಬುದಕ್ಕೆ ಇದು ನಿದರ್ಶನ ಎಂದರು.

ಆರ್ಥಿಕ, ಸಾಮಾಜಿಕ ಅಸಾಮಾನತೆ ಇದೆ. ರಾಜಕೀಯ ಸ್ವಾತಂತ್ರ್ಯದೊರಕಿಲ್ಲ. ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯ ಮತ ಮೌಲ್ಯ ಒಂದೇ. ಆದರೆ ಸಾಮಾಜಿಕ, ಆರ್ಥಿಕವಾಗಿ ಅದು ಆಗಿಲ್ಲ. ಸಮಪಾಲು ಸಮಬಾಳು ಇರಬೇಕು. ಸರ್ವೋದಯವಾಗಲಿ ಸರ್ವರಲಿ ಎಂದಿದ್ದಾರೆ ಕುವೆಂಪು. ಜಾತಿ ವ್ಯವಸ್ಥೆ ಕಾರಣಕ್ಕೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಿರ್ಮಾಣವಾಗಿದೆ ಎಂದು ಅವರು ವಿಶ್ಲೇಷಿಸಿದರು.

ಮನುಸ್ಮೃತಿಯ ಪರಿಣಾಮವಾಗಿ ಶೂದ್ರರು, ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಇದಕ್ಕೆ ಜಾತಿ ವ್ಯವಸ್ಥೆ ಕಾರಣ. ಅಸಮಾನತೆ ಇರುವವತೆಗೆ ಸ್ವಾತಂತ್ರ್ಯ ಸಾರ್ಥಕವಾಗಿದೆ ಎನ್ನಲಾಗದು. ವಸವಾದಿ ಶರಣರು, ಬುದ್ದ, ಗಾಂಧಿ, ಅಂಬೇಡ್ಕರ್ ಬದಲಾವಣೆಗೆ ಪ್ರಯತ್ನ ಮಾಡಿದರು. ಶರಣರು ಕಾಯಕ, ದಾಸೋಹದ ಮಹತ್ವ ಸಾರಿದರು. ಉತ್ಪಾದನೆ ಮತ್ತು ವಿತರಣೆ ಸಮಾನವಾಗಿರಬೇಕು ಎಂಬ ಕಾರಣಕ್ಕೆ ಶರಣರು ಎಲ್ಲರೂ ಕಾಯಕ ಮಾಡಬೇಕು ಎಂದರು. ಪ್ರಜಾಪ್ರಭುತ್ವ ಎಂಬುದು ಬಸವಾದಿ ಶರಣರು ಮತ್ತು ಬುದ್ದನ ಕಾಲದಲ್ಲಿತ್ತು. ಇಂದಿನ ಅಸೆಂಬ್ಲಿ, ಪಾರ್ಲಿಮೆಂಟ್ ಅಂದೇ ಅನುಭವ ಮಂಟಪವಾಗಿತ್ತು ಎಂದು ಅವರು ಪ್ರತಿಪಾದಿಸಿದರು.

ಶರಣರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದರು. ಹಿಂದಿನ ಜನ್ಮದ ಪಾಪ, ಪುಣ್ಯ, ಕರ್ಮ ಸಿದ್ಧಾಂತ ಒಪ್ಪಲಿಲ್ಲ. ಯಾವ ಜನ್ಮವೂ ಇಲ್ಲ ಎಂದರು. ದೇವರು ಹಿಂಗೇ ಇರು ಎಂದು ಬರೆಯಲು ಸಾಧ್ಯವಾ? ವಿದ್ಯಾವಂತರೂ ಕೂಡ ಹಣೆ ಬರಹ ಎನ್ನುತ್ತಾರೆ. ವಚನ ಹೇಳುತ್ತಾರೆ, ಬಸವಣ್ಣನನ್ನು ಪೂಜಿಸುತ್ತಾರೆ. ಆದರೆ ಹಣೆ ಬರಹ ಎಂದು ಹೇಳಿದರೆ, ಅವರು ಬಸವಾದಿ ಶರಣರ ಅನುಯಾಯಿಗಳೇ ಅಲ್ಲ ಎಂದರು.

ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯುತ್ತೇವೆ. ಮನುವಾದಿಗಳು ಇಂದಿಗೂ ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ. ಗೋಲ್ವಾಲ್ಕರ್, ಸಾವರ್ಕರ್ ಏನೇಳಿದ್ದರು ತಿಳಿದುಕೊಳ್ಳಿ. ದೇಶಭಕ್ತಿ ಇಲ್ಲದವರೇ ದೇಶಭಕ್ತಿಯ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಎಂದು ಟೀಕಿಸಿದರು.

ಪ. ಮಲ್ಲೇಶ ಇಲ್ಲದ ಚಳವಳಿ ಚಳವಳಿಯೇ ಅಲ್ಲ. ಈಗ ಚಳವಳಿ ನಾಯಕತ್ವ ಕಣ್ಣಿಗೆ ಕಾಣುತ್ತಿಲ್ಲ. ಆದರೆ ಶೂನ್ಯವಲ್ಲ. ಯಾರಾದರೂ ಬರುತ್ತಾರೆ. ಮಲ್ಲೇಶ್‌ ಅಧಿಕಾರದ ಹಿಂದೆ ಹೋಗಲಿಲ್ಲ. ಬದಲಿಗೆ ಜನರ ಜೊತೆ ಇದ್ದರು. ಭಾಷಾ ವಿಷಯದಲ್ಲಿ ಅವರಿಗಿದ್ದ ಸ್ಪಷ್ಟತೆ ನಮಗ್ಯಾರಿಗೂ ಇಲ್ಲ ಎಂದರು.

ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಅನ್ಷೂಲ್ ಲಾಲಜಿತ್ ಸಿಂಗ್, ಹಿರಿಯ ಪತ್ರಕರ್ತ ಪರಂಜೋಯ್, ಪ್ರೊ. ಕಾಳಚನ್ನೇಗೌಡ, ಉಮಾದೇವಿ, ಅಭಿರುಚಿ ಗಣೇಶ್, ಟಿ. ಗುರುರಾಜ್, ಸವಿತಾ ಮಲ್ಲೇಶ್ ಇದ್ದರು.ಜಾತಿ ವ್ಯವಸ್ಥೆ ಲಂಭವಾಗಿರಬಾರದು. ಹಿಟ್ಲರ್ ಹೇಳಿದ್ದು ಹೀಗೆ. ಆರ್.ಎಸ್.ಎಸ್ ಹಿಟ್ಲರ್ ಮತ್ತು‌ ಮುಸಲೋನಿ ಹೇಳಿದನ್ನು ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ಬಸವಾದಿ ಶರಣರು ಜಾತಿ ವ್ಯವಸ್ಥೆಯು ಸಮಾನ ಮಾದರಿಯಲ್ಲಿರಬೇಕು ಎಂದಿದ್ದಾರೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ