ಸಾರಾಂಶ
ಗುಳೇದಗುಡ್ಡ : ಸಿದ್ದರಾಮಯ್ಯನವರೇ ಧರ್ಮವನ್ನು ಒಡೆದರೆ ನಿಮಗೆ ಭವಿಷ್ಯವಿಲ್ಲ. ನಿಮ್ಮ ಸ್ಥಾನ ಕಳೆದುಕೊಳ್ಳುತ್ತೀರಿ ಎಂದು ಇಲ್ಲಿನ ಅಮರೇಶ್ವರ ಮಠದ ಡಾ.ನೀಲಕಂಠ ಶ್ರೀಗಳು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.
ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಖಿಲ ಭಾರತ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭಕ್ಕೆ ಹೋಗಿರುವುದು ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ ದುಃಖವಾಗಿದೆ. ಏಕೆ ಸಂತೋಷ ಎಂದರೆ, ಬಸವಣ್ಣನವರ ಇತಿಹಾಸ ನಿರ್ಮಿಸುವುದಕ್ಕಾಗಿ, ಅವರ ಇತಿಹಾಸ ಪ್ರಚಾರಪಡಿಸುವುದಕ್ಕಾಗಿ, ಸಾಂಸ್ಕೃತಿಕ ನಾಯಕ ಎಂದು ಅವರ ಹೆಸರನ್ನು ಘೋಷಣೆ ಮಾಡಿದ್ದಕ್ಕೆ, ನಮ್ಮ ಮೆಟ್ರೋಗೆ ಬಸವಣ್ಣನವರ ಹೆಸರಿಡುತ್ತೇವೆ ಎಂದಿರುವುದಕ್ಕೆ. ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿ ವಚನ ವಿಶ್ವವಿದ್ಯಾಲಯ ಮಾಡುವ ವಿಷಯ ಕೇಳಿ ಸಂತಸವಾಗಿದೆ ಎಂದರು.
ದುಃಖದ ಸಂಗತಿ ಎಂದರೆ ಈ ಹಿಂದೆ 2018ರಲ್ಲಿ ಲಿಂಗಾಯತ ಧರ್ಮವನ್ನು, ಒಂದುಗೂಡಿದ ಸಮಾಜವನ್ನು ಇಬ್ಭಾಗ ಮಾಡಲು ಹೋಗಿ ಕೈಸುಟ್ಟುಕೊಂಡ ಸಿದ್ದರಾಮಯ್ಯನವರು, ಮತ್ತೆ ಆ ಜೇನುಗೂಡಿಗೆ ಕೈಹಾಕಿದ್ದಾರೆ. ಆ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ನಾವು ಹೇಳಿದ್ದೆವು. ಆದರೂ ಆ ಕಾರ್ಯಕ್ರಮಕ್ಕೆ ಅವರು ಹೋಗಿ ಜಾಣನಡೆ ಪ್ರದರ್ಶಿಸಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಯಾವುದೇ ತರಹದ ಹೇಳಿಕೆ ಕೊಡಲಾರದೇ ಜಾಣ ನಡೆ ಇಟ್ಟಿದ್ದಾರೆ. ಆದರೂ ಸರ್ಕಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಸರ್ಕಾರದಲ್ಲಿರುವ ಕೆಲವು ಸಚಿವರು ಆ ಕಡೆ, ಇನ್ನೂ ಕೆಲವರು ಈ ಕಡೆ ಎನ್ನುವ ಮಾತು ಕೇಳಿ, ಯಾಕೋ ಸಿದ್ದರಾಮಯ್ಯನವರಿಗೆ ನವೆಂಬರ್‌ದೊಳಗೆ ಕುತ್ತು ಬರುತ್ತದೆ ಎನಿಸುತ್ತಿದೆ ಎಂದು ಶ್ರೀಗಳು ಭವಿಷ್ಯ ನುಡಿದರು.
ಈ ಕಾರ್ಯಕ್ರಮಕ್ಕೆ ಹೋದರೆ ತಮಗೆ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ ಎಂದು ಈ ಮೊದಲೇ ಅವರಿಗೆ ನಾವು ಹೇಳಿದ್ದೆವು. ಈಗಿನ ಬೆಳವಣಿಗೆ ನೋಡಿದರೆ ನವೆಂಬರ್‌ನಲ್ಲಿ ಸಿದ್ದರಾಮಯ್ಯನವರಿಗೆ ಹೆಚ್ಚು ಕಡಿಮೆ ಆಗುತ್ತದೆ ಎಂಬಂತೆ ಭಾಸವಾಗುತ್ತಿದೆ. ಸಿದ್ದರಾಮಯ್ಯನವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಸಹಕಾರವಿದೆ. ನಮ್ಮ ವೀರಶೈವ ಮಹಾಸಭಾದವರು ಮತ್ತು ಎಲ್ಲ ಮಠಾಧಿಪತಿಗಳು ಸೇರಿ ವೀರಶೈವ ಮತ್ತು ಲಿಂಗಾಯತ ಎರಡೂ ಒಂದು ಎಂದು ನಾವು ಯಾವತ್ತೂ ಹೇಳುತ್ತ ಬಂದಿದ್ದೇವೆ. ಇವೆರಡನ್ನು ಇಬ್ಭಾಗ ಮಾಡುವುದನ್ನು ಬಿಟ್ಟು ಒಂದು ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. ಸಚಿವರಾದವರೂ ಕೂಡ ಕೆಲವರು ಲಿಂಗಾಯತ ಅನ್ನುವುದು, ಇನ್ನೂ ಕೆಲವರು ವೀರಶೈವ ಎನ್ನುತ್ತಿರುವುದು ಸರಿಯಲ್ಲ. ಹಿಂದು ಧರ್ಮದ ಅಡಿಯಲ್ಲಿ ಬರ್ತೀವಿ ಎನ್ನುವುದು ಬಹಳ ಸಂತೋಷದ ವಿಷಯ.
ನಾವೆಲ್ಲ ಹಿಂದೂ ಧರ್ಮದ ಆಚರಣೆ ಮಾಡುವುದರಿಂದ ನಾವು ಹಿಂದೂ ಧರ್ಮದಲ್ಲಿಯೇ ಇದ್ದೇವೆ. ನಾವು ಕೇಂದ್ರ ಸರ್ಕಾರಕ್ಕೆ ಅಪ್ಲಿಕೇಶನ್ ಸಲ್ಲಿಸಬೇಕು. ಕೇಂದ್ರ ಸರ್ಕಾರದವರು ನಾವೆಲ್ಲ ಒಟ್ಟುಗೂಡಿ ಹೋದರೆ ಉತ್ತಮ. ಇಬ್ಭಾಗವಾಗಿ ಹೋದರೆ ಅದು ಕೂಡಲು ಸಾಧ್ಯವಿಲ್ಲ. ಸಚಿವರೂ ಗೊಂದಲ ಬಿಟ್ಟು ಇದನ್ನು ಅರಿಯಬೇಕು. ನಾವೆಲ್ಲ ಒಂದೇ ಎಂದು ಒಮ್ಮತದ ನಿರ್ಧಾರಕ್ಕೆ ಬಂದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಸಚಿವ ಸ್ಥಾನದಲ್ಲಿರುವವರು ತಮ್ಮ ಸ್ಥಾನ ಉಳಿಯಬೇಕೆಂದರೆ ಮತ್ತು ಮುಖ್ಯಮಂತ್ರಿಗಳ ಸ್ಥಾನ ಉಳಿಯಬೇಕೆಂದರೆ ಈ ಧರ್ಮ ಒಂದುಗೂಡಿಸುವಂತಹ ಕೆಲಸ ಮಾಡಬೇಕು. ಸಿದ್ದರಾಮಯ್ಯನವರೇ ಧರ್ಮ ಒಡೆಯುವಂತಹ ಕೆಲಸ ಮಾಡಬೇಡಿ. ಧರ್ಮ ಕೂಡಿಸುವಂತಹ ಕೆಲಸ ಮಾಡಿ. ನಿಮ್ಮ ಸ್ಥಾನ ಉಳಿಯುತ್ತದೆ ಎಂದು ಡಾ.ನೀಲಕಂಠ ಶ್ರೀಗಳು ಹೇಳಿದ್ದಾರೆ.
;Resize=(690,390))

;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))