ಸಾರಾಂಶ
ಸಾಗರ ಪಟ್ಟಣ ಅಭಿವೃದ್ಧಿಗೆ ಎಲ್ಲರೂ ಮುಕ್ತಮನಸ್ಸಿನಿಂದ ಸಹಕಾರ ನೀಡಬೇಕು. ಹೀಗಾದಲ್ಲಿ ಮಾರ್ಕೆಟ್ ರಸ್ತೆ ವಿಸ್ತರಣೆ ಸಾಧ್ಯ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಸಾಗರ ಊರಿನ ಅಭಿವೃದ್ಧಿಗೆ ಎಲ್ಲರೂ ಮುಕ್ತಮನಸ್ಸಿನಿಂದ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದರು.
ಪಟ್ಟಣದ ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಷಯ ಬಂದಾಗ ಸರ್ಕಾರ ಮತ್ತು ನ್ಯಾಯಾಲಯ ನಿರ್ದೇಶನದಂತೆ ಭೂಸ್ವಾಧೀನ ಪಡಿಸಿಕೊಳ್ಳುತ್ತೇವೆ. ಭೂಮಿ ಕಳೆದುಕೊಳ್ಳುವವರು ನ್ಯಾಯಾಲಯಕ್ಕೆ ಹೋಗುವುದರಿಂದ ಅಗಲೀಕರಣ ಪ್ರಕ್ರಿಯೆ ವಿಳಂಬ ಆಗುತ್ತದೆ ಎಂದರು.ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 270 ಪ್ರಕರಣಗಳಿದ್ದು, ಕೆಲವರು ಪರಿಹಾರ ಪಡೆದಿದ್ದಾರೆ. 49 ನಿವಾಸಿಗಳು ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ನ್ಯಾಯಾಲಯ ಮೆಟ್ಟಿಲು ಏರಿದ್ದಾರೆ. ಈತನಕ ₹16 ಕೋಟಿ ಪರಿಹಾರ ನೀಡಿದ್ದು, ಸರ್ಕಾರದಿಂದ ₹21 ಕೋಟಿ ಮಂಜೂರಾಗಬೇಕಾಗಿದೆ. ಈಗಾಗಲೇ ರಸ್ತೆ ವಿಸ್ತರಣೆ ಕಾಮಗಾರಿ ತುಂಬಾ ವಿಳಂಬವಾಗಿದ್ದು, ನಿವಾಸಿಗಳು ಸಹಕರಿಸಿದರೆ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಸ್ತೆ ಅಗಲೀಕರಣ ಬಗ್ಗೆ ಸ್ಥಳೀಯರಲ್ಲಿದ್ದ ಗೊಂದಲವನ್ನು ನಿವಾರಿಸುವ ಕೆಲಸ ಮಾಡಲಾಗಿದೆ. ಸ್ಥಳೀಯರ ಸಮಸ್ಯೆ ಆಲಿಸಿದ್ದು, ಪರಿಹಾರ ಸೇರಿದಂತೆ ಆಡಳಿತ ಕಡೆಯಿಂದ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದೇವೆ. ಶಾಸಕನಾಗಿ ಸ್ಥಳೀಯರ ಬಳಿ ಭೂಸ್ವಾಧೀನ ಪ್ರಕ್ರಿಯೆಗೆ ಅವಕಾಶ ನೀಡಿ ಎಂದು ಮಾಡಿಕೊಂಡ ಮನವಿಗೆ ಎಲ್ಲರೂ ಸ್ಪಂದಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಾರ್ಕೆಟ್ ರಸ್ತೆ ವಿಸ್ತರಣೆ ನಮ್ಮ ಅಭಿವೃದ್ಧಿ ಬದ್ಧತೆಯಾಗಿದೆ. ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಸಾಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಎಲ್ಲ ರಸ್ತೆಗಳ ಅಭಿವೃದ್ಧಿಗೆ ಗಮನಹರಿಸಲಾಗುತ್ತದೆ ಎಂದು ಹೇಳಿದರು.ತಹಸೀಲ್ದಾರ್ ಚಂದ್ರಶೇಖರ ನಾಯ್ಕ್, ಕೆ.ಬಿ. ಚಂದ್ರಶೇಖರ್, ಡಿ.ವೈ.ಎಸ್.ಪಿ. ಗೋಪಾಲಕೃಷ್ಣ ನಾಯ್ಕ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
- - - ಬಾಕ್ಸ್ ಯುಜಿಡಿ ವಿಳಂಬಕ್ಕೆ ಡಿಸಿ ಗರಂ ಸಾಗರ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ವಿಳಂಬಕ್ಕೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ತ್ವರಿತವಾಗಿ ಮುಗಿಸುವ ಬಗ್ಗೆ ಗಮನಹರಿಸಿ ಎಂದು ತಾಕೀತು ಮಾಡಿದ ಅವರು, ಯುಜಿಡಿ, ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಭೆ ನಡೆಸಿ, ಕಾಮಗಾರಿ ಮುಗಿಸುವತ್ತ ಗಮನಹರಿಸಿ ಎಂದು ಹೇಳಿದರು.- - - -24ಕೆ.ಎಸ್.ಎ.ಜಿ.1: