ಸಂಸ್ಕೃತಕ್ಕೆ ಉತ್ತೇಜನ ನೀಡಿದರೆ ಧರ್ಮಾಚರಣೆಗೆ ನೆಲೆ: ಗಂಗಾಧರೇಂದ್ರ ಸರಸ್ವತಿ ಶ್ರೀ

| Published : Nov 18 2024, 12:03 AM IST

ಸಂಸ್ಕೃತಕ್ಕೆ ಉತ್ತೇಜನ ನೀಡಿದರೆ ಧರ್ಮಾಚರಣೆಗೆ ನೆಲೆ: ಗಂಗಾಧರೇಂದ್ರ ಸರಸ್ವತಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಎಷ್ಟೋ ವಿಷಯದಲ್ಲಿ ಆಚಾರ ತಪ್ಪುತ್ತಿದೆ. ಶಾಸ್ತ್ರ ನಿಷೇಧ ಮಾಡಿದ್ದು ಆಧುನಿಕ ವಿಜ್ಞಾನ ಕೂಡ ಒಪ್ಪುತ್ತಿಲ್ಲ. ಧರ್ಮ ಅಲ್ಲದ್ದು ಸಮಾಜಕ್ಕೆ ಹಿತವೂ ಅಲ್ಲ. ಧರ್ಮ ಸಂರಕ್ಷಣೆಗಾಗಿ ಸಂಸ್ಕೃತಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಸ್ವರ್ಣವಲ್ಲೀ ಶ್ರೀ ತಿಳಿಸಿದರು.

ಶಿರಸಿ: ಸಂಸ್ಕೃತ ಕ್ಷೇತ್ರಕ್ಕೆ, ವೇದಕ್ಕೆ ಉತ್ತೇಜನ ನೀಡಿದರೆ ಧರ್ಮಾಚರಣೆಗೆ ನೆಲೆ ಸಿಗುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಭಾನುವಾರ ಸ್ವರ್ಣವಲ್ಲೀ ಮಠದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಸಂಸ್ಕೃತೋತ್ಸವ, ಎನ್ಎಸ್ಎಸ್ ದಿನಾಚರಣೆ ಹಾಗೂ ರಾಜ್ಯಮಟ್ಟದ ಭಾಷಣ ಸ್ಪರ್ಧೆ ಕಾರ್ಯಕ್ರಮದ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವವಚನ ನೀಡಿದರು.

ಸಮಾಜದಲ್ಲಿ ಎಷ್ಟೋ ವಿಷಯದಲ್ಲಿ ಆಚಾರ ತಪ್ಪುತ್ತಿದೆ. ಶಾಸ್ತ್ರ ನಿಷೇಧ ಮಾಡಿದ್ದು ಆಧುನಿಕ ವಿಜ್ಞಾನ ಕೂಡ ಒಪ್ಪುತ್ತಿಲ್ಲ. ಧರ್ಮ ಅಲ್ಲದ್ದು ಸಮಾಜಕ್ಕೆ ಹಿತವೂ ಅಲ್ಲ. ಧರ್ಮ ಸಂರಕ್ಷಣೆಗಾಗಿ ಸಂಸ್ಕೃತಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಆಚರಣೆಯ ಬಳಕೆಯಲ್ಲಿ ತಪ್ಪುತ್ತಿರುವುದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಸಹೋದರ ಅಥವಾ ಮಾವನ ಮಗಳೊಂದಿಗೆ ಮದುವೆ ಕೂಡ ಶಾಸ್ತ್ರಕ್ಕೆ ವಿರುದ್ಧವಾದದ್ದು. ಅದಕ್ಕೆ ಪ್ರಾಯಶ್ಚಿತ್ತ ಕೂಡ ಇದೆ. ಆಧುನಿಕ ತಳಿ ವಿಜ್ಞಾನ ಕೂಡ ಸ್ವಗೋತ್ರ, ಸಮೀಪ ಸಂಬಂಧ ವಿವಾಹ ಮಾಡಬಾರದು ಎನ್ನುತ್ತಾರೆ. ವಂಶತಳಿ ವಿಜ್ಞಾನಿಗಳು ಅನೇಕ ರೋಗಗಳಿಗೆ ಈ ಸಮಸ್ಯೆ ಮೂಲ ಎಂದಿದ್ದಾರೆ. ಇವುಗಳ ಬಗ್ಗೆಯೂ ತಿಳಿವಳಿಕೆ ಆಗಬೇಕು ಎಂದರು.

ಸಂಸ್ಕೃತೋತ್ಸವದ ಎರಡು ದಿನದಲ್ಲಿ ೨೩ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಒಂದಲ್ಲ ಒಂದು ಸ್ಪರ್ಧೆಯಲ್ಲಿ ಅವಕಾಶ ಸಿಗಲಿ ಎಂಬ ಆಶಯದಿಂದ ಹೀಗೆ ಕಳೆದ ೨೫ ವರ್ಷದಿಂದ ನಡೆಸುತ್ತಿದ್ದೇವೆ. ಸಂಸ್ಕೃತ ವಿವಿ ಒಳ್ಳೆಯ ಕೆಲಸ ಮಾಡುತ್ತಿದೆ. ಎಲ್ಲ ಪಾಠ ಶಾಲೆಗಳು ಇದನ್ನು ಬಳಸಿಕೊಳ್ಳಬೇಕು ಎಂದರು.

ಶ್ರೀಗಳಿಂದ ವಿದ್ವತ್ ಶಿರೋಮಣಿ ಬಿರುದು ಸ್ವೀಕರಿಸಿದ ಹಿರಿಯ ವಿದ್ವಾಂಸ ನಿವೃತ್ತ ಪ್ರಾಂಶುಪಾಲ ಡಾ. ರಾಮಚಂದ್ರ ಭಟ್ ಮಾತನಾಡಿ, ಶ್ರೀಗಳು ನೀಡಿದ ಸಮ್ಮಾನವನ್ನು ಅನುಗ್ರಹ ಎಂದು ಭಾವಿಸಿದ್ದೇನೆ ಎಂದರು.

ಹಿರಿಯ ವಿದ್ವಾಂಸ ಡಾ. ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ, ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಎಂ.ಜಿ. ಹೆಗಡೆ ಗಡಿಮನೆ, ಪ್ರಾಚಾರ್ಯ ಡಾ. ಬಾಲಕೃಷ್ಣ ಜೋಶಿ ಮೂಲೆಮನೆ ಮತ್ತಿತರರು ಇದ್ದರು.

ಡಾ. ಮಹಾಲೇಶ್ವರ ಕಿರಕುಂಭತ್ತಿ ಸಮ್ಮಾನ ಪತ್ರ ವಾಚಿಸಿದರು. ಗಣಪತಿ ಜೋಶಿ ಸಂಪೇಸರ, ಡಾ. ವಿನಾಯಕ ಭಟ್ಟ ಗುಂಜಗೋಡ ನಿರೂಪಿಸಿದರು. ಶಿವರಾಮ ಭಟ್ಟ ವಂದಿಸಿದರು. ಸಂಸ್ಕೃತ ಪಾಠಶಾಲೆ, ಮಹಾಪಾಠಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಸಂಸ್ಕೃತ ಭಾಷಣ, ಪ್ರಬಂಧ, ಸ್ತೋತ್ರ ಗಾಯನ, ಗೀತಾ ಕಂಠಪಾಠ, ವೇದ ಕಂಠಪಾಠ ಮುಂತಾದ ವಿವಿಧ ಸಂಸ್ಕೃತ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಸ್ವರ್ಣ ಗಂಗಾ ಹಸ್ತಪ್ರತಿ ಲೋಕಾರ್ಪಣೆ ನಡೆಯಿತು.